Site icon Vistara News

Minister D Sudhakar : ತರಲೆ ಮಾಡಲೆಂದೇ ನನ್ನ ಮೇಲೆ ಕೇಸ್‌; ಅಟ್ರಾಸಿಟಿ ಕೇಸ್‌ ಬಗ್ಗೆ ಡಿ. ಸುಧಾಕರ್‌ ಸಿಡಿಮಿಡಿ

Minister D Sudhakar infront of Vidhana soudha

ಬೆಂಗಳೂರು: ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ತಮ್ಮ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ರಾಜಕೀಯ ಪ್ರೇರಿತ (Politically motivated) ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ (Minister D Sudhakar)​ ಪ್ರತಿಕ್ರಿಯೆ ನೀಡಿದ್ದಾರೆ. ತರಲೆ ಮಾಡಲೆಂದೇ ನನ್ನ ಮೇಲೆ ಕೇಸ್‌ ಹಾಕಲಾಗಿದೆ ಎಂದು ಆಕ್ರೋಶಗೊಂಡಿದ್ದಾರೆ.

ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ (Yelahanka Police Station) ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ಸಚಿವರ ವಿರುದ್ಧ ದೌರ್ಜನ್ಯ, ವಂಚನೆ ಮತ್ತು ಹಲ್ಲೆ ಆರೋಪದಡಿ ಅಟ್ರಾಸಿಟಿ ಆ್ಯಕ್ಟ್ (Atrocity Act) ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ. ಯಲಹಂಕ ಗ್ರಾಮದ ಸರ್ವೇ ನಂಬರ್ 108/1ರ ಜಮೀನನ್ನು ಮೋಸದಿಂದ ಕಬಳಿಕೆ ಮಾಡಿದ್ದಾರೆ. ಈ ಕೇಸ್ ಕೋರ್ಟ್‌ನಲ್ಲಿದೆ. ಹೀಗಿದ್ದಾಗಲೂ ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಈಗ ಸಚಿವರ ಮುಂದಿದೆ. ಆದರೆ, ಇದನ್ನು ನಿರಾಕರಣೆ ಮಾಡಿರುವ ಸಚಿವ ಡಿ. ಸುಧಾಕರ್‌, ಇದು ಕಾನೂನು ಬದ್ಧ ವ್ಯವಹಾರವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Politics : ಸಿಂಗಲ್‌ ಸೀಟಿಗೂ ದಿಕ್ಕಿಲ್ಲದ ಕಾಂಗ್ರೆಸ್‌ ಕೈಕೈ ಪರಚಿಕೊಳ್ಳುತ್ತಿದೆ; ದಳ ಎದುರೇಟು

ಎಲ್ಲವೂ ಚೆಕ್ ಮೂಲಕವೇ ವ್ಯವಹಾರ ಆಗಿದೆ‌: ಡಿ. ಸುಧಾಕರ್

ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಭೇಟಿಗೆ ಆಗಮಿಸಿದ್ದ ಸಚಿವ ಡಿ. ಸುಧಾಕರ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ, ಎಫ್‌ಐಆರ್ ಆಗಿರುವುದು ನನಗೆ ಗೊತ್ತಿಲ್ಲ‌. ಅದು ನಮ್ಮದೇ ಕಂಪನಿಯಾಗಿದೆ. 10 ವರ್ಷದ ಹಿಂದೆ ಆಗಿರುವ ವ್ಯವಹಾರ ಇದಾಗಿದೆ. ಎಲ್ಲ ವ್ಯವಹಾರವೂ ಚೆಕ್ ಮೂಲಕವೇ ನಡೆದಿದೆ. ನಮ್ಮದೆ ಜಾಗ ಅದು. ಈಗ ರಾಜಕೀಯ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆಯೂ 2006ರಲ್ಲಿ ಒಂದು ಕೇಸ್‌ ದಾಖಲಾಗಿತ್ತು. 2008ರಲ್ಲಿ ಸಚಿವನಾಗಿದ್ದಾಗ ಅದನ್ನು ಮುನ್ನೆಲೆಗೆ ತಂದಿದ್ದರು. ಈಗ ಸಚಿವ ಆಗಿದ್ದೇನೆ ಮತ್ತೆ ಅದನ್ನೇ ಮಾಡುತ್ತಿದ್ದಾರೆ. ನಾನು ಚಿತ್ರದುರ್ಗ ಜಿಲ್ಲೆಯವನು. ಎಸ್‌ಸಿ ರಿಸರ್ವ್ ಕ್ಷೇತ್ರದವನು. ಹೀಗಾಗಿ ನಾನು ಎಸ್‌ಸಿಗಳ ಮಧ್ಯೆಯೇ ಬೆಳೆದವನು‌. ಇದು ರಾಜಕೀಯವಾಗಿ ನಡೆದಿದೆ. ಜಮೀನು ಖರೀದಿ ಮಾಡಿದ್ದೇನೆ. ಹೆಚ್ಚಿನ ಹಣಕ್ಕಾಗಿ ಹಾಗೆ ಮಾಡಿದ್ದಾರೆ. ಸುಬ್ಬಮ್ಮ ಎಂಬುವವರು ನಮಗೆ ಜಮೀನು‌ ಕೊಟ್ಟಿದ್ದಾರೆ. ಎಲ್ಲ ನಿಯಮಗಳ ಪ್ರಕಾರವೇ ಜಮೀನು ಖರೀದಿ ಆಗಿದೆ. ಚೆಕ್ ಮೂಲಕ, ಕಾನೂನು ಬದ್ಧ ವ್ಯವಹಾರ ನಡೆದಿದೆ. ಈಗ ತರಲೆ ಎಬ್ಬಿಸೋಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಡಿ. ಸುಧಾಕರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಎಕ್ಸಾಮಿನ್ ಮಾಡುತ್ತೇವೆ: ಗೃಹ ಸಚಿವ ಡಾ. ಜಿ ಪರಮೇಶ್ವರ್‌

ಯಾರೋ ಬಂದು ದೂರು ಕೊಟ್ಟಾಗ ಎಫ್‌ಐಆರ್ ಮಾಡೋದು ಸಹಜ. ಯಾವ ಕಾರಣಕ್ಕೆ ಎಫ್‌ಐಆರ್ ಹಾಕಿದ್ದಾರೆ ಎಂಬುದರ ಬಗ್ಗೆ ಎಕ್ಸಾಮಿನ್ ಮಾಡುತ್ತೇವೆ. ಒಬ್ಬ ಸಚಿವರ ಮೇಲೆ ಎಫ್‌ಐಆರ್ ಹಾಕಲು ಆಧಾರ ಇರಬೇಕು. ಅದೇನು ಅಂತ ಪರಿಶೀಲನೆ ‌ಮಾಡುತ್ತೇನೆ. ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಚಿವ ಡಿ. ಸುಧಾಕರ್ ಅವರು ನನ್ನನ್ನು ಭೇಟಿ ಮಾಡಿದ್ದಾರೆ. ಏನು ಪ್ರಕರಣ ಎಂದು ನನಗೆ ಸರಿಯಾಗಿ ಗೊತ್ತಿಲ್ಲ. ನಾನು ಈಗ ವಿಚಾರ ಮಾಡುತ್ತೇನೆ ಎಂದು ಡಾ. ಜಿ. ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: Insurance Policy : ಇ ಕಾಮರ್ಸ್‌ ಕಾರ್ಮಿಕರಿಗೆ ಭರ್ಜರಿ ಗಿಫ್ಟ್‌! 4 ಲಕ್ಷ ರೂ. ಅಪಘಾತ – ಜೀವ ವಿಮೆ ನೀಡಿ ಆದೇಶ

ಏನಿದು ಪ್ರಕರಣ?

ದಲಿತರಾಗಿರುವ ನಮ್ಮ ಆಸ್ತಿಯನ್ನು ಸಚಿವ ಡಿ. ಸುಧಾಕರ್‌ ಅವರು ಮೋಸದಿಂದ ಕಬಳಿಕೆ ಮಾಡಿದ್ದಾರೆ ಎಂದು ಸುಬ್ಬಮ್ಮ ಎಂಬುವವರು ಯಲಹಂಕ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆವೆನ್ ಹಿಲ್ಸ್ ಡೆವಲಪರ್ಸ್ & ಟ್ರೇಡರ್ಸ್ ಪಾಲುದಾರರಾಗಿರುವ ಸುಧಾಕರ್ ಅವರು ನನ್ನ ಕುಟುಂಬದವರಿಂದ ಮೋಸ ಮಾಡಿ ಆಸ್ತಿಯನ್ನು ಕ್ರಯ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯಲಹಂಕ ಗ್ರಾಮದ ಸರ್ವೆ ನಂ108/1 ರ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅವರು 35-40 ಜನರನ್ನು ಕರೆತಂದು ಹಲ್ಲೆ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಲ್ಲ ಆರೋಪಗಳ ಅಡಿಯಲ್ಲಿ ಈಗ ದೂರು ದಾಖಲು ಮಾಡಿಕೊಳ್ಳಲಾಗಿದೆ.

Exit mobile version