Site icon Vistara News

Congress Guarantee: ಮಾಜಿ ಸಿಎಂ ಬೊಮ್ಮಾಯಿಗೆ ಹೊಟ್ಟೆಯಲ್ಲಿ ಬೇನೆ; ಔಷಧಿ ಇಲ್ಲ ಎಂದ ಆರೋಗ್ಯ ಸಚಿವ ಗುಂಡೂರಾವ್‌!

ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಟೀಕೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿರುಗೇಟು ನೀಡಿದ್ದಾರೆ.

ಅನ್ನ ಭಾಗ್ಯದ ಅಕ್ಕಿಯ ಮೊದಲ ತುತ್ತಿನಲ್ಲೇ ಕಲ್ಲು.. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿ ಮಾಡುವಲ್ಲಿ ಜನರಿಗೆ ದೋಖಾ ಮಾಡುವುದು ಮುಂದುವರಿಸಿದೆ. ಹತ್ತು ಕೆಜಿ ಅಕ್ಕಿ ಕೊಡುವ ಗ್ಯಾರಂಟಿ ನೀಡಿ ಈಗ ಒಬ್ಬರಿಗೆ 170 ರೂ. ಹಾಕುವುದಾಗಿ ಹೇಳಿರುವುದು ಸರ್ಕಾರದ ವಂಚನೆಯ ಇನ್ನೊಂದು ಮುಖ ಬಯಲಾಗಿದೆ. ರಾಜ್ಯ ಸರ್ಕಾರ ನೀಡುವ 170 ರೂ. ಗ್ರಾಮೀಣ ಮಹಿಳೆಯ ದಿನದ ಕೂಲಿಯ ಅರ್ಧದಷ್ಟು ಹಣವೂ ಆಗುವುದಿಲ್ಲ. ಸುಳ್ಳು ಗ್ಯಾರಂಟಿಗಳನ್ನು ಈಡೇರಿಸಲಾಗದೇ ಈಗ ಜನರಿಗೆ ದ್ರೋಹ ಮಾಡಲಾಗುತ್ತಿದೆ.

ಚುನಾವಣೆಯಲ್ಲಿ ಜನರಿಗೆ ಕೊಟ್ಟ ಮಾತಿನಂತೆ ಹತ್ತು ಕೆಜಿ ಅಕ್ಕಿ ಕೊಡಿ, ಇಲ್ಲವೇ ಮಾರುಕಟ್ಟೆ ದರದಲ್ಲಿ ಪ್ರತಿ ಕೆಜಿಗೆ 60 ರೂ. ಗಳಂತೆ ಹತ್ತು ಕೆಜಿಗೆ ತಗಲುವ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಿ. ಇಲ್ಲದಿದ್ದರೆ ಮಾತಿಗೆ ತಪ್ಪಿದ್ದಕ್ಕಾಗಿ‌ ಜನರಿಗೆ ಕ್ಷಮೆ ಕೇಳಿ ಎಂದು ಬಸವರಾಜ ಬೊಮ್ಮಾಯಿ ಸರಣಿ ಟ್ವೀಟ್‌ ಮೂಲಕ ಕಾಂಗ್ರೆಸ್‌ ಕಾಲೆಳೆದಿದ್ದರು.

ಇದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸರಣಿ ಟ್ವೀಟ್‌ ಮೂಲಕವೇ ಉತ್ತರಿಸಿದ್ದಾರೆ. ಬಸವರಾಜ ಬೊಮ್ಮಾಯಿಯವರೆ, ನಿಮ್ಮ ಹೊಟ್ಟೆಯೊಳಗಿನ ಸಂಕಟ ಮತ್ತು ಬೇಗುದಿ ಏನೆಂದೇ ಅರ್ಥವಾಗುತ್ತಿಲ್ಲ. ಅಕ್ಕಿ ಕೊಡಲಾಗದಿದ್ದರೆ ಹಣ ಕೊಡಿ ಎಂದು ಆಕಾಶ ಭೂಮಿ ಒಂದಾಗುವಂತೆ ದೊಂಬಿ ಎಬ್ಬಿಸಿದ್ದು ನೀವು ಮತ್ತು ನಿಮ್ಮ ಪಕ್ಷದವರು. ಈಗ ಅಕ್ಕಿ ಬದಲು ನಾವು ಹಣ ಕೊಟ್ಟರೆ ಅಲ್ಲೂ ಹುಳುಕು‌ ಹುಡುಕುತ್ತಿದ್ದೀರಿ. ಈ ನಿಮ್ಮ ರೋಗಕ್ಕೆ ಮದ್ದೆಲ್ಲಿಂದ ತರುವುದು?

ಇದನ್ನೂ ಓದಿ: Congress Guarantee: ಅಕ್ಕಿ ರೇಟ್‌ ಜಾಸ್ತಿಯಾಗಿದೆ; ಸರ್ಕಾರ ಕೊಟ್ಟ ಹಣ ಸಾಲೋಲ್ಲ ಎಂದ ಬಿಜೆಪಿ

ಬೊಮ್ಮಾಯಿಯವರೇ, ಕೇಂದ್ರ ನಾವು ದುಡ್ಡು ಕೊಡುತ್ತೀವಿ ಎಂದರೂ ಅಕ್ಕಿ ಕೊಡಲಿಲ್ಲ. ಕೇಂದ್ರಕ್ಕೆ ಕೊಡುವ ದುಡ್ಡನ್ನೇ ನಾವೀಗ ಜನರಿಗೆ ಕೊಡುತ್ತಿದ್ದೇವೆ. ನಿಮ್ಮ ಪಕ್ಷದವರಿಗೆ ಅನ್ನಭಾಗ್ಯ ಯೋಜನೆ ಅನುಷ್ಟಾನ ಇಷ್ಟವಿಲ್ಲ. ಹಾಗಾಗಿ ಅಕ್ಕಿ ಸಿಗದಂತೆ ಮಾಡಿದಿರಿ. ನಾವು ಅಕ್ಕಿಯ ಬದಲು ದುಡ್ಡು ಕೊಡುತ್ತಿರುವುದು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

ಬೊಮ್ಮಾಯಿಯವರೇ ಗುಣಕ್ಕೆ ಮತ್ಸರವಿರಬಾರದು. ಅದೇ ರೀತಿ ಯಾರಾದರೂ ಜನರಿಗೆ ಒಳ್ಳೆಯದು ಮಾಡುತ್ತಿದ್ದರೆ ಅವರು ನಿಮ್ಮ ಶತ್ರುಗಳಾದರೂ ಅವರ ಮೇಲೆ ಮತ್ಸರವಿರಬಾರದು. ನೀವು ಅಧಿಕಾರದಲ್ಲಿದ್ದಾಗ ಜನರಿಗೆ ಒಳ್ಳೆಯದು ಮಾಡಲಿಲ್ಲ. ನಿಮ್ಮ ಕೈಲಾಗದನ್ನು ನವು ಮಾಡುತ್ತಿದೆ. ಇದಕ್ಯಾಕೆ ಹೊಟ್ಟೆಕಿಚ್ಚು? ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಯಾಕೆ? ಎಂದು ಪ್ರಶ್ನಿಸಿದ್ದಾರೆ.

Exit mobile version