ಬೆಂಗಳೂರು: ಬಿಜೆಪಿ ರಾಜ್ಯ ಸರ್ಕಾರದ 3 ವರ್ಷಗಳ ಸಾರ್ಥಕ ಸೇವೆ ಮತ್ತು ಸಬಲೀಕರಣದ ಕಾರ್ಯದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಸೆ.೧೦ರಂದು ಜನಸ್ಪಂದನ(Janaspandana) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಸುಮಾರು 3 ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
2 ವರ್ಷಗಳ ಕಾಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಳ್ಳೆಯ ಸೇವೆ ಮಾಡಿದ್ದಾರೆ. 2 ವರ್ಷಗಳಲ್ಲಿ ಅವರು ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಕಾರ್ಯಾನುಷ್ಠಾನ, ಕಾಮನ್‍ಮ್ಯಾನ್ ಮುಖ್ಯಮಂತ್ರಿ ಎಂದು ಖ್ಯಾತಿ ಪಡೆದ ಬಸವರಾಜ ಬೊಮ್ಮಾಯಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಕೈಗೊಂಡ ಹೊಸ ಕಾರ್ಯಕ್ರಮಗಳನ್ನು ಸೇರಿ 3 ವರ್ಷಗಳ ರಿಪೋರ್ಟ್ ಕಾರ್ಡನ್ನು ಜನರ ಮುಂದಿಡುವುದಾಗಿ ತಿಳಿಸಿದರು.
ಇದನ್ನೂ ಓದಿ | ಜನಸ್ಪಂದನ | ವ್ಯಕ್ತಿ ಪೂಜೆಗೆ ಸಮಾವೇಶವಲ್ಲ ಎಂದ ಸುಧಾಕರ್: ಸಿದ್ದರಾಮೋತ್ಸವಕ್ಕೆ ಟೀಕೆ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲವು ತಾಲ್ಲೂಕುಗಳಿಂದ ಜನರು ಬರಲಿದ್ದು, ಬಿಜೆಪಿಯ ದೊಡ್ಡ ಜನಸಭೆ ಇದಾಗಲಿದೆ. ರಾಜ್ಯದ ಆರು ವಲಯಗಳಲ್ಲಿ ಇಂಥ ಜನಸಭೆ ಏರ್ಪಡಿಸಲಾಗುವುದು. ಈ ಭಾಗದಲ್ಲಿ ಬಿಜೆಪಿಯ ಶಕ್ತಿಯನ್ನು ಪ್ರಶ್ನಿಸುವವರಿಗೆ ಇದು ಉತ್ತರ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
40 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಲಕ್ಷಾಂತರ ಜನರು ಪಾಲ್ಗೊಳ್ಳಲಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಅಡುಗೆ ಮನೆಯನ್ನೂ ಮಾಡಲಾಗಿದೆ. ಅಲ್ಲಿಯೂ ದೊಡ್ಡದಾಗಿ ಉಪಹಾರ- ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಎರಡು ದೊಡ್ಡ ಕ್ಯಾಟರಿಂಗ್ ಸಂಸ್ಥೆಗಳಿಗೆ ಇದರ ಗುತ್ತಿಗೆ ಕೊಡಲಾಗಿದೆ ಎಂದು ವಿವರ ನೀಡಿದರು.
3 ಲಕ್ಷ ಜನರಿಗೆ ಊಟ ಸಿದ್ಧವಾಗುತ್ತಿದೆ. ವೆಜಿಟೇಬಲ್ ಪಲಾವ್, ಮೊಸರನ್ನ, ಬಾದುಷಾ ಸಿಹಿತಿಂಡಿ ನೀಡಲಾಗುತ್ತದೆ. ವಾಹನ ನಿಲುಗಡೆಗೆ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದಲ್ಲಿ 12 ಕಡೆ ಜಾಗಗಳನ್ನು ಗುರುತಿಸಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೊಲೀಸ್ ಅಧಿಕಾರಿಗಳ ಜೊತೆ ವಿಶೇಷ ಸಭೆ ಮಾಡಿದ್ದು, ಮನವಿ ಮಾಡಿದ್ದೇವೆ ಎಂದರು.
ಛತ್ತೀಸಗಡದಲ್ಲಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರರು ಕಾರ್ಯಕ್ರಮದಕ್ಕೆ ಭಾಗವಹಿಸುವ ಬಗ್ಗೆ ಖಾತ್ರಿಯಾಗಿಲ್ಲ. ಕೇಂದ್ರದ ನಮ್ಮ ಹಿರಿಯ ಸಚಿವೆ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ. ವಿಧಾನಸಭಾ ಚುನಾವಣೆಗೆ ಕೇವಲ ಏಳೆಂಟು ತಿಂಗಳು ಬಾಕಿ ಇದೆ. ರಾಜಕೀಯ ಚುನಾವಣಾ ರಣಕಹಳೆಯನ್ನು ದೊಡ್ಡಬಳ್ಳಾಪುರದಿಂದ ಮೊಳಗಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮ ಮುಂದೂಡಿದರೂ ಸ್ಥಳೀಯ ನಾಯಕರು ಗರಿಷ್ಠ ಸಹಕಾರ ಕೊಡುತ್ತಿದ್ದಾರೆ. 5 ಸಾವಿರ ಬಸ್‍ಗಳನ್ನು ಈಗ ನಿಗದಿಪಡಿಸಲಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಸಭೆ ಇದ್ದರೂ 10 ಗಂಟೆಯೊಳಗೆ ಕಾರ್ಯಕರ್ತರು ಆಗಮಿಸಬೇಕು ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ | 3 ತಿಂಗಳಲ್ಲಿ ಬೆಂಗಳೂರು ಸ್ಕೈಬಸ್ ಸರ್ವೇ: CM ಬೊಮ್ಮಾಯಿಗೆ ʼಹಣ ತರುವ ಮಂತ್ರʼ ಬೋಧಿಸಿದೆ ಎಂದ ನಿತಿನ್ ಗಡ್ಕರಿ !