ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಜನರಿಂದ ಆ ಭಾಗದ ಜನಪ್ರತಿನಿಧಿಗಳ ಮೇಲೆ ಸಹಜವಾಗಿಯೇ ಒತ್ತಡ ಇರುತ್ತದೆ. ಆಸ್ಪತ್ರೆ ಮಂಜೂರು ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಬದ್ಧರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿರುವ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಯಾವುದೇ ಯೋಜನೆ, ಕಾಮಗಾರಿಗೆ ಮೊದಲ ಬಾರಿಯೇ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ಸಿಗುವುದಿಲ್ಲ. ಹೀಗಾಗಿ ಮತ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದನದಲ್ಲಿ ಉತ್ತರ ಕನ್ನಡ ಜನಪ್ರತಿನಿಧಿಗಳು ಮಂಡಿಸಿರುವ ಅಭಿಪ್ರಾಯಗಳನ್ನು ಪರಿಗಣಿಸುತ್ತೇವೆ. ಆ ಭಾಗಕ್ಕೆ ಆಸ್ಪತ್ರೆ ಮಂಜೂರು ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Vims Bellary | ಅವಿವೇಕಿ ಸರ್ಕಾರ, ಸಚಿವರು; ಬಿಜೆಪಿ ವಿರುದ್ಧ ಕಾಂಗ್ರೆಸ್ ಶಾಸಕ ನಾಗೇಂದ್ರ ವಾಗ್ದಾಳಿ
ಒಂದೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ ಕಷ್ಟ, ಆದ್ರೆ ನಿಶ್ಚಯವಾಗಿ ಮಾಡುತ್ತೇವೆ
ಕಾರವಾರ: ಒಂದೇ ದಿನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಷ್ಟ. ಆದರೆ, ನಿಶ್ಚಯವಾಗಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಬದ್ಧರಾಗಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಆರ್ಥಿಕ ಇಲಾಖೆಯಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಸ್ತಾವನೆ ತಿರಸ್ಕರಿಸಿರುವ ಬಗ್ಗೆ ಸ್ಪಂದಿಸಿ, ನಾವು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ಜತೆ ಸಂಪರ್ಕದಲ್ಲಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಸೇವೆ ನೀಡುವುದಾದಲ್ಲಿ ಅದಕ್ಕೆ ಬೇಕಾದ ಭೂಮಿ, ಹಣಕಾಸು, ರಸ್ತೆ, ನೀರು ಒದಗಿಸುವುದಾಗಿಯೂ ಅವರು ತಿಳಿಸಿದ್ದಾರೆ. ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಾರೆ. ಆಗ ಅವರ ಗಮನಕ್ಕೆ ತರಲಾಗುತ್ತದೆ ಎಂದರು.
ಒಂದೇ ಬಾರಿಗೆ ಆರ್ಥಿಕ ಇಲಾಖೆ ಯೋಜನೆಗೆ ಸಮ್ಮತಿ ನೀಡುವುದಿಲ್ಲ, ಹಾಗಂತ ನಾವು ಯೋಜನೆಯನ್ನು ಬಿಡಲೂ ಆಗುವುದಿಲ್ಲ. ಆರ್ಥಿಕ ಇಲಾಖೆಯನ್ನು ಒಪ್ಪಿಸುವವರೆಗೂ ಮುಖ್ಯಮಂತ್ರಿಗಳನ್ನು ಕಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ. ಆಸ್ಪತ್ರೆ ನಿರ್ಮಾಣ ಕುರಿತಂತೆ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಜತೆ ಮಾತನಾಡಿದ್ದಾರೆ. ಎಲ್ಲರ ಧ್ವನಿಯಾಗಿ ಶಾಸಕಿ ರೂಪಾಲಿ ಸದನದಲ್ಲಿ ಆಸ್ಪತ್ರೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ | Vims Bellary | ಶವಪರೀಕ್ಷೆ ವರದಿ ಪರಿವೀಕ್ಷಣೆ, ಪ್ರತ್ಯೇಕ ವಿಚಾರಣೆ, ಸತತ 9 ತಾಸು ತನಿಖೆ; ಅಸಲಿ ಸತ್ಯವೇನು?