Site icon Vistara News

Multi Specialty Hospital | ಆಸ್ಪತ್ರೆಗಾಗಿ ಕುಮಟಾದಲ್ಲಿ 20 ಎಕರೆ ಜಾಗ ಗುರುತು: ಸಚಿವ ಕೋಟ

Multi Speciality Hospital

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Multi Specialty Hospital) ಸ್ಥಾಪಿಸುವ ಬಗ್ಗೆ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, ಇದಕ್ಕಾಗಿ ಜಿಲ್ಲೆಯ ಹೃದಯ ಭಾಗವಾಗಿರುವ ಕುಮಟಾದಲ್ಲಿ 15ರಿಂದ 20 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇತ್ತೀಚೆಗೆ ಶಿರೂರು ಟೊಲ್ ಗೇಟ್ ಬಳಿ ಆಂಬ್ಯುಲೆನ್ಸ್ ಅಪಘಾತದಲ್ಲಿ ಮೃತಪಟ್ಟವರ ಮನೆಗಳಿಗೆ ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿ ಮಾತನಾಡಿದ ಅವರು, ಮಾಸಾಂತ್ಯದಲ್ಲಿ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಬಳಿಕ ಆಸ್ಪತ್ರೆ ನಿರ್ಮಾಣದ ತೀರ್ಮಾನ ಪ್ರಕಟಿಸಲಾಗುವುದು. ಆಸ್ಪತ್ರೆ ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆಯೇ ಎನ್ನುವುದು ಸಭೆಯ ಬಳಿಕ ನಿರ್ಧಾರವಾಗಲಿದೆ. ಇದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಶೇಷ ಪರಿಹಾರಧನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ | Multi specialty | ಉತ್ತರ ಕನ್ನಡಕ್ಕೊಂದು ಸುಸಜ್ಜಿತ ಆಸ್ಪತ್ರೆ ಬೇಕು: ನಿರ್ದೇಶಕ ಸಿಂಪಲ್‌ ಸುನಿ ಟ್ವೀಟ್‌

ಮೃತರ ಕುಟುಂಬಕ್ಕೆ ವಿಶೇಷ ಪರಿಹಾರದ ಭರವಸೆ

ಆಸ್ಪತ್ರೆಗೆ ಕರೆದೊಯ್ಯುವಾಗ ಅಪಘಾತ ನಡೆದಿರುವುದು ದುರಂತ ಹಾಗೂ ನೋವಿನ ಸಂಗತಿಯಾಗಿದೆ. ಮೃತರಿಗೆ ಸ್ಥಳೀಯವಾಗಿ ಜೀವವಿಮೆ ಇತ್ಯಾದಿ ಲಭಿಸುವ ಕುರಿತು ಶಾಸಕ ಸುನೀಲ್ ನಾಯ್ಕ ನೋಡಿಕೊಳ್ಳುತ್ತಾರೆ. ಇದರೊಂದಿಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೃತರು ಹಾಗೂ ಗಾಯಾಳುಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ವಿಶೇಷ ಪರಿಹಾರವನ್ನು ಒದಗಿಸುವ ಕುರಿತು ಪ್ರಯತ್ನಿಸಲಾಗುವುದು ಎಂದರು. ಶಾಸಕ ಸುನೀಲ ನಾಯ್ಕ, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್, ತಹಸೀಲ್ದಾರ್ ನಾಗರಾಜ ನಾಯ್ಕ್‌, ಸಿಪಿಐ ಶ್ರೀಧರ ಎಸ್.ಆರ್., ಗ್ರಾ.ಪಂ ಅಧ್ಯಕ್ಷ ಮಂಜುನಾಥ ನಾಯ್ಕ, ವಿಘ್ನೇಶ್ವರ ಹೆಗಡೆ ಮತ್ತಿತರರು ಇದ್ದರು.

ಇದನ್ನೂ ಓದಿ | Multi specialty | ಉ.ಕ.ಕ್ಕೆ ಬರಲು ವೈದ್ಯರೇ ಒಪ್ಪುತ್ತಿಲ್ಲವೆಂದ ಶಾಸಕಿ; ಸಿಎಂ ಜತೆ ಚರ್ಚಿಸುವೆನೆಂದ ಆರೋಗ್ಯ ಸಚಿವ

Exit mobile version