ತುಮಕೂರು: ರಾಜ್ಯ ಸರ್ಕಾರ ನಡೆಯುತ್ತಿರುವ ಕುರಿತು ಸಾಮಾಜಿಕ ಕಾರ್ಯಕರ್ತರೊಬ್ಬರ ಜತೆಗೆ ಮಾತನಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಸಚಿವ ಜೆ.ಸಿ. ಮಾಧುಸ್ವಾಮಿ, ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜೆ.ಸಿ ಮಾಧುಸ್ವಾಮಿ, ಇದರಲ್ಲಿ ಎರಡು ಪ್ರಮುಖ ಅಂಶ ಇದೆ. ಒಂದು ರೈಟ್ ಟು ಪ್ರೈವಸಿ, ಎರಡು ಟೈಮಿಂಗ್. ನಾನು ಯಾರೊಂದಿಗೆ ಮಾತನಾಡಿದೆ, ಯಾವಾಗ ಮಾತನಾಡಿದೆ ಎಂದು ಗೊತ್ತಿಲ್ಲ. ಚನ್ನಪಟ್ಟಣದ ಭಾಸ್ಕರ್ ಎನ್ನುವವರೊಂದಿಗೆ ಮಾತನಾಡಿದ್ದೇನೆ ಎಂದು ಮಾಧ್ಯಮದಲ್ಲಿ ಸುದ್ದಿಯಾಗಿದೆ.
ಈ ವಿಷಯದ ಬಗ್ಗೆ ಮಾತನಾಡಬಾರದು ಎಂದು ಸುಮ್ಮನಿದ್ದೆ. ಸಚಿವ ಎಸ್. ಡಿ. ಸೋಮಶೇಖರ್ ಬಗ್ಗೆಯೂ ನಾನು ಕೆಟ್ಟದಾಗಿ ಮಾತನಾಡಿಲ್ಲ. ಅವರು ಅಶಕ್ತರು, ಕೆಲಸ ಮಾಡಿಲ್ಲ ಎಂದು ನಾನು ಹೇಳಿಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚುವರಿ ಬಡ್ಡಿ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದು ನಿಜ. ಮುಂದಕ್ಕೆ ಮಾತನಾಡುವ ಸಂದರ್ಭದಲ್ಲಿ ಬೇರೆ ವಿಷಯ ಚರ್ಚೆ ಮಾಡಿರಬಹುದು. ನೀವು ಸರ್ಕಾರ ನಡೆಸುತ್ತಿಲ್ಲ ಎಂದು ಅವನು ಕೇಳಿರಬಹುದು. ಆಗ ನಾನು ಮಾತನಾಡಿರಬಹುದು. ಸರ್ಕಾರ ನಡೆಯುತ್ತಿಲ್ಲ ಎಂದು ಮೂರನೇ ವ್ಯಕ್ತಿ ಜತೆ ಹೇಳುವ ಪರಿಸ್ಥಿತಿ ನನಗೆ ಇಲ್ಲ. ಅವನು ಎಲ್ಲರಿಗೂ ಗೊತ್ತಿರುವ ವ್ಯಕ್ತಿಯೇನೂ ಅಲ್ಲ. ಈ ಘಟನೆ ಎಷ್ಟು ದಿನದ ಹಿಂದೆ ನಡೆದಿದೆ ಎನ್ನುವುದು ಕೂಡ ನನಗೆ ಗೊತ್ತಿಲ್ಲ. ಈ ಆಡಿಯೊ ಏಕೆ ವೈರಲ್ ಆಗಿದೆ ಎನ್ನುವುದೂ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ | Audio Viral | ಸರ್ಕಾರ ನಡೀತಾ ಇಲ್ಲ, ಕಾಲ ತಳ್ತಾ ಇದ್ದೀವಿ ಅಷ್ಟೆ: ಮುಜುಗರ ತಂದ ಸಚಿವ ಮಾಧುಸ್ವಾಮಿ ಮಾತು
ಈ ಕುರಿತು ಸಿಎಂ ಜತೆಗೆ ಮಾತನಾಡಿದ್ದೇನೆ ಎಂದಿರುವ ಮಾಧುಸ್ವಾಮಿ, ಸರ್ಕಾರದ ಬಗ್ಗೆ ಗೌರವ ಇಟ್ಟುಕೊಂಡಿರುವ ವ್ಯಕ್ತಿ ನಾನು. ನನ್ನ ಜತೆ ವಾದ ಮಾಡುತ್ತಿರುವ ಸಂದರ್ಭದಲ್ಲಿ, ಹೌದು ನಾವು ಮ್ಯಾನೇಜ್ ಮಾಡುತ್ತಿದ್ದೇವೆ ಕಣಯ್ಯ ಎಂದು ಹೇಳಿರಬಹುದು. ಸರ್ಕಾರದಲ್ಲಿ ಇದ್ದುಕೊಂಡು ಸರ್ಕಾರ ನಡೆಯುತ್ತಿಲ್ಲ ಎಂದು ಹೇಳಲು ಆಗುತ್ತದೆಯೇ? ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹೇಳಿದ್ದೇನೆ. ಸಿಎಂ ನನ್ನ ಮಾತನ್ನು ಒಪ್ಪಿದ್ದರು ಎಂದಿದ್ದಾರೆ.
ಸಿಎಂಗೆ ಹೇಳಿದ ನಂತರ ಈ ಪ್ರಕರಣ ಅಲ್ಲಿಗೆ ಮುಗಿಯಿತು ಎಂದುಕೊಂಡಿದ್ದೆ ಎಂದು ಹೇಳಿರುವ ಮಾಧುಸ್ವಾಮಿ, ನನಗೆ ಸಿಎಂ ನಾಯಕರು. ಏನಾದರೂ ಸ್ಪಷ್ಟನೆ ಕೊಡಬೇಕು ಎಂದಿದ್ದರೆ ಅವರಿಗೆ ಕೊಡುತ್ತೇನೆ ಎಂದಿದ್ದಾರೆ. ಸಹೋದ್ಯೋಗಿಗಳ ಬಗ್ಗೆ ಅಸಮಾಧಾನ ಹೊರಹಾಕಿದ ಮಾಧುಸ್ವಾಮಿ, ನಮ್ಮ ಸಹೋದ್ಯೋಗಿಗಳು ಈ ರೀತಿ ಏಕೆ ರಿಯಾಕ್ಟ್ ಮಾಡಿದ್ದಾರೆಯೋ ನನಗೆ ಗೊತ್ತಿಲ್ಲ. ಅವರೆಲ್ಲ ಪ್ರಬದ್ಧರು. ಅವರು ಏನೇನು ತಿಳುವಳಿಕೆ ಹೇಳಿದ್ದಾರೆಯೋ ಅದನ್ನು ನಾನು ಇನ್ನುಮುಂದೆ ಪಾಲನೆ ಮಾಡುತ್ತೇನೆ ಎಂದು ವ್ಯಂಗ್ಯ ಮಾಡಿದ್ದಾರೆ.
ಈ ರೀತಿ ಹೇಳುವ ಬದಲು ನನಗೇ ಒಂದು ಫೋನ್ ಮಾಡಿ ಮಾತನಾಡಬಹುದಿತ್ತು. ಆಗ, ಸಹೋದ್ಯೋಗಿಗಳು ಎನ್ನುವ ಪದಕ್ಕೆ ಒಂದು ಗೌರವ ಉಳಿಯುತ್ತಿತ್ತು. ನಾನು ಯಾರ ವಿಚಾರದಲ್ಲೂ ಏಕವಚನದಲ್ಲಿ ಮಾತನಾಡುವುದಿಲ್ಲ. ಸನ್ಮಾನ್ಯ ಸೋಮಶೇಖರ್ ಎಂದೇ ಆಡಿಯೊದಲ್ಲೂ ಮಾತನಾಡಿದ್ದೇನೆ. ಇವರೆಲ್ಲರ ಮಾತಿನಿಂದ ಇದರಿಂದ ನನಗೆ ನೋವಾಗಿದೆ ಎಂದಿದ್ದಾರೆ. ರಾಜೀನಾಮೆ ಕುರಿತು ಪ್ರತಿಕ್ರಿಯಿಸಿ, ಸಹೋದ್ಯೋಗಿಗಳು ಕೇಳಿದ್ದಕ್ಕೆ ರಾಜೀನಾಮೆ ನೀಡಲಾಗುವುದಿಲ್ಲ. ಸಿಎಂ ಹೇಳಿದರೆ ರಾಜೀನಾಮೆ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ | ಸಚಿವ ಮಾಧುಸ್ವಾಮಿ ಹೇಳಿಕೆ ವೈರಲ್: ಸಚಿವ ಸೋಮಶೇಖರ್ ಫುಲ್ ಗರಂ