Site icon Vistara News

Mysore Sandal: ಸಂತೂರ್‌ ಅರ್ಧದಷ್ಟೂ ಮಾರಾಟವಾಗದ ಮೈಸೂರು ಸ್ಯಾಂಡಲ್‌!: ಸೋಪ್‌ಗೆ ಮರುಜೀವ ನೀಡಲು ನೀವೂ ಐಡಿಯಾ ಕೊಡಿ

Mysore sandal soap

ಬೆಂಗಳೂರು: ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾಗಿರುವ ಮೈಸೂರು ಸ್ಯಾಂಡಲ್‌ (Mysore Sandal) ಸೋಪ್‌ ಇದೀಗ ತನ್ನ ಘಮವನ್ನು ಕಳೆದುಕೊಳ್ಳುವತ್ತ ಸಾಗಿದೆ. ಕರ್ನಾಟಕ ರಾಜ್ಯದ ಅಧಿಕೃತ ಬ್ರ್ಯಾಂಡ್‌ ಎಂಬ ಹೆಸರಿದ್ದರೂ ಮಾರಾಟ ಹಾಗೂ ಜನರ ಬಳಕೆಯ ದೃಷ್ಟಿಯಲ್ಲಿ ತೀರಾ ಹಿಂದುಳಿದಿದೆ. ಇದಕ್ಕೆ ಮರುಜೀವ ನೀಡಬಹುದೇ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಪ್ರಯತ್ನಿಸುತ್ತಿದ್ದು, ಸಾರ್ವಜನಿಕರು ಹಾಗೂ ತಜ್ಞರ ಸಲಹೆ ಕೇಳಿದ್ದಾರೆ.

ಮೈಸೂರು ಸ್ಯಾಂಡಲ್‌ ಎನ್ನುವುದು ಕರ್ನಾಟಕದ ಅಮೂಲ್ಯ ವಸ್ತು. ಆದರೆ ಸಂತೂರ್‌ ಸೋಪ್‌ಗೆ ಹೋಲಿಸಿದರೆ ಅದರ ಮೂರನೇ ಒಂದು ಭಾಗ ಮಾತ್ರ ಮೈಸೂರ್‌ ಸ್ಯಾಂಡಲ್‌ ಮಾರಾಟವಾಗುತ್ತದೆ. ಲೈಫ್‌ ಬಾಯ್‌ ಸೋಪ್‌ನ ಆರನೇ ಒಂದು ಭಾಗ ಮಾರಾಟವಾಗುತ್ತದೆ. ವಿದೇಶಕ್ಕೆ ಕೇವಲ ಶೇ.3 ರಫ್ತಾಗುತ್ತಿದೆ. ಕೇವಲ ದಕ್ಷಿಣ ಭಾರತಕ್ಕೆ ಮಾತ್ರವೇ ಸೀಮಿತವಾಗಿರುವ ಸೋಪ್‌, ಕರ್ನಾಟಕದಲ್ಲೂ ನಂಬರ್‌ ಒನ್‌ ಸ್ಥಾನ ಗಳಿಸಿಲ್ಲ. ಮೆಡಿಮಿಕ್ಸ್‌, ಸಂತೂರ್‌, ಪತಂಜಲಿಯಂತಹ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ತೋರಬಹುದಾದರೆ ಮೈಸೂರು ಸ್ಯಾಂಡಲ್‌ನಿಂದ ಏಕೆ ಸಾಧ್ಯವಿಲ್ಲ?

ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲಾಗುವುದು. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಮುಕ್ತವಾಗಿ ಆಹ್ವಾನಿಸಲಾಗಿದೆ ಎಂದು ಎಂ. ಬಿ. ಪಾಟೀಲ ಹೇಳಿದ್ದಾರೆ. ಆಸಕ್ತರು karnatakavision2030@gmail.comಗೆ ತಮ್ಮ ಸಲಹೆಗಳನ್ನು ಕಳಿಸಬಹುದು.

ಮೈಸೂರು ಸ್ಯಾಂಡಲ್‌ ಸೋಪ್‌, ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಆರಂಭಿಸಿದ ಉತ್ಪನ್ನವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಈ ಹೆಜ್ಜೆ ಇಡಲು ತೀರ್ಮಾನಿಸಲಾಗಿದೆ. ಉದ್ಯಮಿಗಳು ಈ ನಿಟ್ಟಿನಲ್ಲಿ ಸೂಕ್ತ ಸಲಹೆಗಳನ್ನು ಕೊಟ್ಟು, ಸರ್ಕಾರದ ಈ ಪ್ರಯತ್ನಕ್ಕೆ ಕೈಗೂಡಿಸಬೇಕು.

ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಯುಗವಾಗಿದೆ. ನಮ್ಮ ಬಳಿ ಮೈಸೂರು ಸ್ಯಾಂಡಲ್‌ ಸೋಪ್‌ನಂತಹ ಉತ್ಕೃಷ್ಟ ಉತ್ಪನ್ನವಿದ್ದೂ ನಾವು ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ. ಈ ನಿರಾಶಾದಾಯಕ ಪರಿಸ್ಥಿತಿಯನ್ನು ನಿವಾರಿಸಲು ಸರ್ಕಾರ ಉತ್ಸುಕವಾಗಿದೆ. ಒಟ್ಟಿನಲ್ಲಿ ರಾಜ್ಯದ ಈ ಹೆಮ್ಮೆಯ ಉತ್ಪನ್ನಕ್ಕೆ ಮರುಜೀವ ತುಂಬಿ, ಮಾರುಕಟ್ಟೆಯನ್ನು ಸೃಷ್ಟಿಸಲು ಹಲವು ಉಪಕ್ರಮಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು ಎಂದು ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

Exit mobile version