ಕಾರವಾರ: ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಆ ಗೌಡರು ಏನಾದರು, ಈ ಗೌಡರು ಏನಾದರು ಎಂದು ಕೇಳುವ ಸಂದರ್ಭ ಇದಲ್ಲ. ಯಾವುದೇ ಪಕ್ಷದವರಾದರೂ ಈ ಸಂದರ್ಭದಲ್ಲಿ ಆ ರೀತಿಯ ಚಿಂತನೆಗಳನ್ನು ಕೈಬಿಡಬೇಕು ಎಂದು ಉರಿಗೌಡ, ನಂಜೇಗೌಡ ಸಿನಿಮಾ (Tipu Sultan) ನಿರ್ಮಾಣಕ್ಕೆ ಪರೋಕ್ಷವಾಗಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಸಮಾಧಾನ ಹೊರಹಾಕಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ಮಾಡುವುದಾಗಿ ಸಚಿವ ಮುನಿರತ್ನ ಘೋಷಿಸಿರುವ ವಿಚಾರಕ್ಕೆ ಅಂಕೋಲಾದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶ, ರಾಜ್ಯಕ್ಕೆ ಇನ್ನೂ ಸಾಕಷ್ಟು ಸವಾಲುಗಳಿವೆ. ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ, ನೀರಾವರಿ, ಕೃಷಿ ಅಭಿವೃದ್ಧಿಯಂತಹ ಕೆಲಸಗಳಿವೆ. ದೇಶ ಸ್ವತಂತ್ರಗೊಂಡು ನೂರು ವರ್ಷಗಳನ್ನು ಪೂರೈಸುವ ವೇಳೆಗೆ ಹೇಗಿರಬೇಕು ಎನ್ನುವ ಬಗ್ಗೆ ನಾವು ಚಿಂತಿಸಬೇಕಾಗಿದೆ. ಯಾವುದೇ ಲಾಭವಿಲ್ಲದ, ನಷ್ಟವಿಲ್ಲದ ಇಂತಹ ಚಿಂತನೆಗಳಿಂದ ಸಮಯ ವ್ಯರ್ಥವಾಗುತ್ತದೆ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.
ನಮ್ಮ ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅಂತಹವರು ಕಟ್ಟಿದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂಚೂಣಿಗೆ ಹೋಗುವತ್ತ ಹೆಜ್ಜೆ ಹಾಕುತ್ತಿದೆ. ಬೇರೆ ಪಕ್ಷ ಏನು ಮಾಡುತ್ತಿದೆ ಎನ್ನುವುದನ್ನು ನಾವು ನೋಡುವುದಿಲ್ಲ. ನಮ್ಮ ಪಕ್ಷ ಮುಂದಿನ 25 ವರ್ಷಗಳಲ್ಲಿ ಏನು ಮಾಡಬೇಕು ಎನ್ನುವ ಕಲ್ಪನೆಯೊಂದಿಗೆ ಮುಂದೆ ಹೊರಟಿದೆ ಎಂದರು.
ಇದನ್ನೂ ಓದಿ | Tipu Sultan: ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್?: ಅಂತರ ಕಾಯ್ದುಕೊಂಡ ಕಟೀಲ್; ಚರ್ಚಿಸಲು ಮುನಿರತ್ನಗೆ ಚುಂಚಶ್ರೀ ಆಹ್ವಾನ
ಮುಖ್ಯಮಂತ್ರಿ ರೇಸ್‌ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಸ್ಪರ್ಧಿಸುವಂತಹ 224 ಶಾಸಕರೂ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಯಾರನ್ನು ಎಂಎಲ್‌ಎ ಮಾಡಬೇಕು, ಯಾರನ್ನು ಮಂತ್ರಿ ಮಾಡಬೇಕು, ಮುಖ್ಯಮಂತ್ರಿ ಮಾಡಬೇಕು ಎನ್ನುವ ತೀರ್ಮಾನವನ್ನು ಪಕ್ಷದ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವಿಲ್ಲ: ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ಸಚಿವ ಮುನಿರತ್ನ ಅವರು ನಿರ್ಮಿಸುತ್ತಿರುವ ಉರಿಗೌಡ, ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೂ ಇಲ್ಲ, ಅದಕ್ಕೆ ನಾನು ಚಿತ್ರಕತೆಯನ್ನು ಬರೆಯುತ್ತಿಲ್ಲ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ ಸಿನಿಮಾದ ಭಾಗವಾಗುತ್ತಿಲ್ಲ ಎಂದವರು ಹೇಳಿದ್ದಾರೆ.