ಉತ್ತರ ಕನ್ನಡ
Tipu Sultan: ಆ ಗೌಡ್ರು, ಈ ಗೌಡ್ರು ಎನ್ನುವ ಸಮಯ ಇದಲ್ಲ; ಉರಿಗೌಡ, ನಂಜೇಗೌಡ ಸಿನಿಮಾ ಕುರಿತು ಸಚಿವ ನಿರಾಣಿ ಪರೋಕ್ಷ ಆಕ್ಷೇಪ
Tipu Sultan: ಟಿಪ್ಪು ಸುಲ್ತಾನ್‌ನನ್ನು ಕೊಂದರು ಎಂದು ಬಿಜೆಪಿ ಹೇಳುತ್ತಿರುವ ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ಮಾಡುವುದಾಗಿ ಸಚಿವ ಮುನಿರತ್ನ ಘೋಷಿಸಿದ್ದಾರೆ. ಇಂತಹವುಗಳಿಗೆ ಸಹಮತವಿಲ್ಲ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ತಿಳಿಸಿದ್ದಾರೆ.
ಕಾರವಾರ: ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ. ಆ ಗೌಡರು ಏನಾದರು, ಈ ಗೌಡರು ಏನಾದರು ಎಂದು ಕೇಳುವ ಸಂದರ್ಭ ಇದಲ್ಲ. ಯಾವುದೇ ಪಕ್ಷದವರಾದರೂ ಈ ಸಂದರ್ಭದಲ್ಲಿ ಆ ರೀತಿಯ ಚಿಂತನೆಗಳನ್ನು ಕೈಬಿಡಬೇಕು ಎಂದು ಉರಿಗೌಡ, ನಂಜೇಗೌಡ ಸಿನಿಮಾ (Tipu Sultan) ನಿರ್ಮಾಣಕ್ಕೆ ಪರೋಕ್ಷವಾಗಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಸಮಾಧಾನ ಹೊರಹಾಕಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣ ಮಾಡುವುದಾಗಿ ಸಚಿವ ಮುನಿರತ್ನ ಘೋಷಿಸಿರುವ ವಿಚಾರಕ್ಕೆ ಅಂಕೋಲಾದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ದೇಶ, ರಾಜ್ಯಕ್ಕೆ ಇನ್ನೂ ಸಾಕಷ್ಟು ಸವಾಲುಗಳಿವೆ. ಉದ್ಯೋಗ ಸೃಷ್ಟಿ, ಕೈಗಾರಿಕೆ ಸ್ಥಾಪನೆ, ನೀರಾವರಿ, ಕೃಷಿ ಅಭಿವೃದ್ಧಿಯಂತಹ ಕೆಲಸಗಳಿವೆ. ದೇಶ ಸ್ವತಂತ್ರಗೊಂಡು ನೂರು ವರ್ಷಗಳನ್ನು ಪೂರೈಸುವ ವೇಳೆಗೆ ಹೇಗಿರಬೇಕು ಎನ್ನುವ ಬಗ್ಗೆ ನಾವು ಚಿಂತಿಸಬೇಕಾಗಿದೆ. ಯಾವುದೇ ಲಾಭವಿಲ್ಲದ, ನಷ್ಟವಿಲ್ಲದ ಇಂತಹ ಚಿಂತನೆಗಳಿಂದ ಸಮಯ ವ್ಯರ್ಥವಾಗುತ್ತದೆ ಎಂದು ಹೇಳುವ ಮೂಲಕ ಸ್ವಪಕ್ಷದ ನಾಯಕರ ವಿರುದ್ಧವೇ ಪರೋಕ್ಷವಾಗಿ ಬೇಸರ ಹೊರಹಾಕಿದ್ದಾರೆ.
ನಮ್ಮ ಭಾರತೀಯ ಜನತಾ ಪಾರ್ಟಿ ಶಿಸ್ತಿನ ಪಕ್ಷವಾಗಿದೆ. ಅಟಲ್ ಬಿಹಾರಿ ವಾಜಪೇಯಿ ಅಂತಹವರು ಕಟ್ಟಿದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂಚೂಣಿಗೆ ಹೋಗುವತ್ತ ಹೆಜ್ಜೆ ಹಾಕುತ್ತಿದೆ. ಬೇರೆ ಪಕ್ಷ ಏನು ಮಾಡುತ್ತಿದೆ ಎನ್ನುವುದನ್ನು ನಾವು ನೋಡುವುದಿಲ್ಲ. ನಮ್ಮ ಪಕ್ಷ ಮುಂದಿನ 25 ವರ್ಷಗಳಲ್ಲಿ ಏನು ಮಾಡಬೇಕು ಎನ್ನುವ ಕಲ್ಪನೆಯೊಂದಿಗೆ ಮುಂದೆ ಹೊರಟಿದೆ ಎಂದರು.
ಇದನ್ನೂ ಓದಿ | Tipu Sultan: ಉರಿಗೌಡ-ನಂಜೇಗೌಡ ಸಿನಿಮಾಗೆ ಬ್ರೇಕ್?: ಅಂತರ ಕಾಯ್ದುಕೊಂಡ ಕಟೀಲ್; ಚರ್ಚಿಸಲು ಮುನಿರತ್ನಗೆ ಚುಂಚಶ್ರೀ ಆಹ್ವಾನ
ಮುಖ್ಯಮಂತ್ರಿ ರೇಸ್‌ನಲ್ಲಿ ಮುರುಗೇಶ್ ನಿರಾಣಿ ಹೆಸರು ಕೇಳಿಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಸ್ಪರ್ಧಿಸುವಂತಹ 224 ಶಾಸಕರೂ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ. ಯಾರನ್ನು ಎಂಎಲ್‌ಎ ಮಾಡಬೇಕು, ಯಾರನ್ನು ಮಂತ್ರಿ ಮಾಡಬೇಕು, ಮುಖ್ಯಮಂತ್ರಿ ಮಾಡಬೇಕು ಎನ್ನುವ ತೀರ್ಮಾನವನ್ನು ಪಕ್ಷದ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವಿಲ್ಲ: ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ಸಚಿವ ಮುನಿರತ್ನ ಅವರು ನಿರ್ಮಿಸುತ್ತಿರುವ ಉರಿಗೌಡ, ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವೂ ಇಲ್ಲ, ಅದಕ್ಕೆ ನಾನು ಚಿತ್ರಕತೆಯನ್ನು ಬರೆಯುತ್ತಿಲ್ಲ ಎಂದು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಉರಿಗೌಡ, ನಂಜೇಗೌಡ ಸಿನಿಮಾ ನಿರ್ಮಾಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಟಿಪ್ಪುವನ್ನು ಕೊಂದ ವೀರಸೇನಾನಿಗಳಾದ ಉರಿಗೌಡ ಮತ್ತು ನಂಜೇಗೌಡರ ಬಗ್ಗೆ ನನಗೆ ನೈಜ ಅಭಿಮಾನವಿದೆ. ಅವರ ಬಗ್ಗೆ ನಾನು ಇದುವರೆಗೂ ಆಡಿರುವ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಆದರೆ ಸಿನಿಮಾದ ಭಾಗವಾಗುತ್ತಿಲ್ಲ ಎಂದವರು ಹೇಳಿದ್ದಾರೆ.
ಉತ್ತರ ಕನ್ನಡ
Karwar News: ಕಾರವಾರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ
Karwar News: 2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಂಡು ಜನ ಮೆಚ್ಚುಗೆ ಗಳಿಸಿದ ಪಿಎಸ್‌ಐ ನಾಗಪ್ಪ ಭೋವಿ ಅವರು ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಕಾರವಾರ: ರಾಜ್ಯದ 42 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2022ನೇ ಸಾಲಿನ ಮುಖ್ಯಮಂತ್ರಿ ಪದಕ (Chief Minister’s Medal) ಘೋಷಿಸಲಾಗಿದ್ದು, ನಗರದ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ನಾಗಪ್ಪ ಭೋವಿ ಅವರನ್ನೂ ಪದಕಕ್ಕೆ ಆಯ್ಕೆ ಮಾಡಲಾಗಿದೆ.
ಎಂ.ಎ ಕನ್ನಡ ವ್ಯಾಸಂಗ ಮಾಡಿರುವ ನಾಗಪ್ಪ, ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಜಿಲ್ಲೆಯ ಪಾಮನಕಲ್ಲೂರಿನವರು. 2015ರಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾದ ಅವರು, ಕಲಬುರಗಿಯ ಕುಂಚಾವರ, ಯಡ್ರಾಮಿ, ದಾಂಡೇಲಿ ನಗರ, ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ, ಪ್ರಸ್ತುತ ಕಾರವಾರ ನಗರ ಸಂಚಾರ ಠಾಣೆಯ ಪಿಎಸ್‌ಐ ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.
2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಿಶೇಷ ಕ್ರಮ ಕೈಗೊಂಡು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 10,000ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, ಅಂದಾಜು 52 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ, ಹಿಟ್ ಅಂಡ್ ರನ್ ಪ್ರಕರಣಗಳ ಪತ್ತೆ, ನಗರದಲ್ಲಿ ವಾಹನಗಳ ನೂತನ ಪಾರ್ಕಿಂಗ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅವರು ಪ್ರಯತ್ನ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸಿಬ್ಬಂದಿಗಳಿಗಾಗಿ ಸಾರ್ವಜನಿಕರ ಸಹಭಾಗಿತ್ವದಲ್ಲಿ 13 ಸಂಚಾರ ಪೊಲೀಸ್ ಚೌಕಿಗಳು ಮತ್ತು 55 ಬ್ಯಾರಿಕೇಡ್‌ಗಳ ನಿರ್ಮಾಣ ಮತ್ತು ಠಾಣಾ ಮರು ನವೀಕರಣ ಕಾರ್ಯ, ರಸ್ತೆ ಅಪಘಾತಗಳನ್ನು ತಡೆಯಲು ವಿನೂತನ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಏಕ ಗವಾಕ್ಷಿ ಯೋಜನೆಯಡಿಯಲ್ಲಿ ಸಾರ್ವಜನಿಕ ವಾಹನ ದಾಖಲೆಗಳ ತಿದ್ದುಪಡಿ ಅಭಿಯಾನ ನಡೆಸಿದ್ದರು.
ಇದನ್ನೂ ಓದಿ: ವೃತ್ತಿಪರ ಭಿಕ್ಷುಕನಾಗಿದ್ದರೂ ಹೆಂಡತಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್
‘ಹೆಲ್ಮೆಟ್ ಧರಿಸಿ – ಜೀವ ಉಳಿಸಿ’ ಜಾಗೃತಿ ಜಾಥಾ ಅಭಿಯಾನ, ಶಾಲಾ- ಕಾಲೇಜುಗಳಲ್ಲಿ ರಸ್ತೆ ಅಪಘಾತ ತಡೆ ಕುರಿತು ವಿಶೇಷ ಜಾಗೃತಿ ಉಪನ್ಯಾಸ, ಸ್ಟೂಡೆಂಟ್ ಪೊಲೀಸ್ ಕೆಡೆಟ್‌ಗಳಿಗೆ ರಸ್ತೆ ಸುರಕ್ಷತಾ ಜಾಗೃತಿ ಉಪನ್ಯಾಸ, ‘ನನ್ನನ್ನು ಕ್ಷಮಿಸಿ’ ಹೆಲ್ಮೆಟ್ ಜಾಗೃತಿ ಅಭಿಯಾನ, ‘ರಸ್ತೆ ಅಪಘಾತ ಮುಕ್ತ ಭಾರತಕ್ಕಾಗಿ ನಮ್ಮೊಂದಿಗೆ ಕೈ ಜೋಡಿಸಿ’ ಸಹಿ ಸಂಗ್ರಹ ಅಭಿಯಾನ ಮತ್ತು ಜಾಗೃತಿ ಜಾಥಾ, ಆಟೋ/ಲಘು/ಭಾರಿ/ಆಂಬುಲೆನ್ಸ್/ ಟೂರ್ಸ್ ಮತ್ತು ಟ್ರಾವೆಲ್ಸ್/ಸಾರಿಗೆ ಇಲಾಖೆ/ ವಾಹನ ಚಾಲಕರಿಗೆ ರಸ್ತೆ ಅಪಘಾತಗಳ ಜಾಗೃತಿ ಕಾರ್ಯಕ್ರಮ, ಆಟೋ ಚಾಲಕರಿಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ, ‘ರನ್ ಫಾರ್ ರೋಡ್ ಸೇಫ್ಟಿ’ ಜಾಗೃತಿ ಅಭಿಯಾನ ಹೀಗೆ ರಸ್ತೆ ಅಪಘಾತ ತಡೆ ಮತ್ತು ಸಾರ್ವಜನಿಕ ಸಂಚಾರ ಸುವ್ಯವಸ್ಥೆ ಕಾಪಾಡುವಲ್ಲಿ ದಕ್ಷ ಮತ್ತು ಪ್ರಾಮಾಣಿಕ ಪ್ರಯತ್ನ ನಡೆಸಿರುವ ಅವರು ಈ ಸಾಲಿನ ಸಿಎಂ ಮೆಡಲ್‌ಗೆ ಆಯ್ಕೆಯಾಗಿದ್ದಾರೆ.
ಕೇವಲ ಪೊಲೀಸ್ ಆಗಿರದೆ, ಸಾಹಿತ್ಯ ಸೇವೆಯಲ್ಲೂ ತೊಡಗಿಸಿಕೊಂಡಿರುವ ನಾಗಪ್ಪ, ಪುಸ್ತಕಗಳನ್ನೂ ಬರೆದಿದ್ದಾರೆ. ಇವರ ಸಾಹಿತ್ಯ ಸೇವೆಗೂ ಅನೇಕ ಪ್ರಶಸ್ತಿಗಳು ದೊರೆತಿವೆ. ಏಪ್ರಿಲ್ 2ರ ಪೊಲೀಸ್ ಧ್ವಜ ದಿನಾಚರಣೆಯ ದಿನದಂದು ಸಿಎಂ ಮೆಡಲ್ ಪ್ರದಾನ ಮಾಡಲಾಗುತ್ತದೆ.
ಉತ್ತರ ಕನ್ನಡ
Karnataka Election 2023: ಜಿಲ್ಲಾದ್ಯಂತ 25 ಚೆಕ್‌ಪೋಸ್ಟ್ ನಿರ್ಮಾಣ; ಅಕ್ರಮ ಸಾಗಾಟಗಳ ಮೇಲೆ ಹೆಚ್ಚಿನ ನಿಗಾ: ಪ್ರಭುಲಿಂಗ ಕವಳಿಕಟ್ಟಿ
Karnataka Election 2023: ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾಮಗಾರಿಗಳ ಕೆಲಸದ ಮೇಲೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭುಲಿಂಗ ಕವಳಿಕಟ್ಟಿ ಹೇಳಿದ್ದಾರೆ.
ಕಾರವಾರ: “ಚುನಾವಣಾ ನೀತಿ ಸಂಹಿತೆ (Karnataka Election 2023) ಜಾರಿಗೆ ಎರಡು ವಾರಗಳ ಮೊದಲೇ ಪ್ರಾಥಮಿಕ ಹಂತದ ಚುನಾವಣಾ ಕಾರ್ಯಗಳನ್ನು ಜಿಲ್ಲಾಡಳಿತ ಆರಂಭಿಸಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಸುಮಾರು 69 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ” ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಭವನದಲ್ಲಿ ನಡೆದ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಈಗಾಗಲೇ ಜಿಲ್ಲಾದ್ಯಂತ ಇದ್ದ ರಾಜಕೀಯ ವ್ಯಕ್ತಿಗಳ ಬ್ಯಾನರ್, ಬಂಟಿಂಗ್ಸ್‌ಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗಿದೆ. ಇಂದಿನಿಂದ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರಾಜಕೀಯ ವ್ಯಕ್ತಿಗಳ ಫೋಟೊಗಳಿರುವ ಬ್ಯಾನರ್‌ಗಳು ಹಾಗೂ ಸರ್ಕಾರದ ವೆಬ್‌ಸೈಟ್‌ಗಳಿಂದ ಅದನ್ನು ಕೂಡಲೇ ತೆರವುಗೊಳಿಸಲಾಗುವುದು” ಎಂದರು.
ಇದನ್ನೂ ಓದಿ: Rajkummar Rao: ಶಾರುಖ್ ಖಾನ್ ವ್ಯಕ್ತಿತ್ವ ಕೊಂಡಾಡಿದ ನಟ ರಾಜಕುಮಾರ್ ರಾವ್, ತಮ್ಮ ತಾಯಿಯ ಬಗ್ಗೆ ಹೇಳಿದ್ದೇನು?
ಈಗಾಗಲೇ ಜಿಲ್ಲಾದ್ಯಂತ 25 ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದು ಚುನಾವಣೆಯಲ್ಲಿ ಆಮಿಷ ಒಡ್ಡುವ ನಿಟ್ಟಿನಲ್ಲಿ ಹಣ ವಸ್ತುಗಳ ಅಕ್ರಮ ಸಾಗಾಟ ನಡೆಯುತ್ತದೆ. ಹೀಗಾಗಿ ವಾಹನಗಳ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ವಿವಿಧ ಪ್ರಕರಣಗಳಲ್ಲಿ ಗೋವಾದಿಂದ ರಾಜ್ಯಕ್ಕೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ 40 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 10 ಲಕ್ಷ ರೂ. ದಾಖಲೆರಹಿತ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ದಾಖಲೆ ರಹಿತವಾಗಿ ಸಾಗಿಸಲಾಗುತ್ತಿದ್ದ 7.5 ಲಕ್ಷ ರೂ. ಮೌಲ್ಯದ ಬೆಳ್ಳಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಉಳಿದಂತೆ ಗಾಂಜಾ, ಚರಸ್‌ನಂತಹ ಮಾದಕ ವಸ್ತುಗಳನ್ನೂ ಭಾರೀ ಪ್ರಮಾಣದಲ್ಲಿ ಪತ್ತೆ ಹಚ್ಚಿದ್ದು ಒಟ್ಟು 69 ಲಕ್ಷ ರೂ. ಮೌಲ್ಯದ ಅಕ್ರಮವಾಗಿ ಸಾಗಿಸುತ್ತಿದ್ದ ವಸ್ತುಗಳನ್ನು ಈಗಾಗಲೇ ಜಪ್ತಿಪಡಿಸಿಕೊಳ್ಳಲಾಗಿದೆ” ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಇದನ್ನೂ ಓದಿ: Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
“ಸರ್ಕಾರದಿಂದ ಜಾರಿಯಾದ ಕಾಮಗಾರಿಗಳಲ್ಲಿ ಆರಂಭವಾಗಿರುವ, ಅನುಮೋದನೆಯಾಗಿ ಪ್ರಾರಂಭವಾಗದ ಹಾಗೂ ಅನುಮೋದನೆಯಾಗದ ಕಾಮಗಾರಿಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಇದರಿಂದ ನೀತಿ ಸಂಹಿತೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾಮಗಾರಿಗಳ ಕೆಲಸದ ಮೇಲೂ ನಿಗಾವಹಿಸಲು ಕ್ರಮ ಕೈಗೊಳ್ಳಲಾಗಿದೆ. ಇದರೊಂದಿಗೆ ಮಾದ್ಯಮಗಳ ಮೇಲೂ ನಿಗಾ ಇರಿಸಲಾಗುತ್ತಿದ್ದು ಪ್ರಕಟವಾಗುವ ಜಾಹೀರಾತುಗಳು ಹಾಗೂ ಸುದ್ದಿಗಳಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವಂತೆ ಇದ್ದಲ್ಲಿ ಅಂಥವುಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು” ಎಂದರು.
ಉತ್ತರ ಕನ್ನಡ
Karwar News: ಗೋವಾ ಮದ್ಯ ಅಕ್ರಮ ಸಾಗಾಟ; ಆರೋಪಿ ಸಹಿತ 15.52 ಲಕ್ಷ ಮೌಲ್ಯದ ಸ್ವತ್ತು ವಶ
Karwar News: ಅಬಕಾರಿ ಹಾಗೂ ವಿಚಕ್ಷಣ ದಳದ ಸಿಬ್ಬಂದಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಆಂಧ್ರ ಪ್ರದೇಶ ಮೂಲದ ಕ್ರೂಜರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ.
ಕಾರವಾರ: ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ (Majali Check Post) ಕ್ರೂಸರ್ ವಾಹನದಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಅಬಕಾರಿ ಅಧಿಕಾರಿಗಳು ಹಾಗೂ ರಾಜ್ಯ ವಿಚಕ್ಷಣ ದಳ ದಾಳಿ ನಡೆಸಿ ಸುಮಾರು 15.52 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಒಬ್ಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರ ಪ್ರದೇಶದ ಮೇದಕ್ ಜಿಲ್ಲೆಯ ಬಗೀಲಿ ಅಜಯ ಗೌಡ ಬಂಧಿತ ಆರೋಪಿ. ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ರಾಜ್ಯದ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ಅದರಂತೆ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಹಾಗೂ ವಿಚಕ್ಷಣ ದಳದ ಸಿಬ್ಬಂದಿ ವಾಹನಗಳನ್ನು ಪರಿಶೀಲನೆ ನಡೆಸುತ್ತಿದ್ದ ವೇಳೆ ಆಂಧ್ರಪ್ರದೇಶ ಮೂಲದ ಕ್ರೂಸರ್ ವಾಹನದಲ್ಲಿ ಅಕ್ರಮ ಗೋವಾ ಮದ್ಯ ಪತ್ತೆಯಾಗಿದೆ.
ಸುಮಾರು 17.5 ಲೀಟರ್ ಗೋವಾ ಮದ್ಯ, 3.75 ಲೀಟರ್ ಗೋವಾ ಫೆನ್ನಿ ಹಾಗೂ 3.75 ಲೀಟರ್ ಗೋವಾ ವೈನ್ ಪತ್ತೆಯಾಗಿದ್ದು ಇವುಗಳ ಅಂದಾಜು ಮೌಲ್ಯ 52 ಸಾವಿರ ರೂ. ಆಗಿದೆ. ಈ ವೇಳೆ ಅಕ್ರಮ ಮದ್ಯ ಸಾಗಾಟಕ್ಕೆ ಬಳಕೆ ಮಾಡಲಾದ 15 ಲಕ್ಷ ರೂ. ಮೌಲ್ಯದ ಕ್ರೂಸರ್ ವಾಹನ ಸೇರಿ ಒಟ್ಟು 15.52 ಲಕ್ಷ ಮೌಲ್ಯದ ಸ್ವತ್ತುಗಳನ್ನು ಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
ಅಬಕಾರಿ ಉಪ ನಿರೀಕ್ಷಕ ಪಿ.ಕೆ. ಹಳದನಕರ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದು, ಅಕ್ರಮ ಸಾಗಾಟದಾರರಿಗೆ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ನಿಗಾ ಇರಿಸಿರುವ ಸಂದೇಶ ರವಾನಿಸಿದ್ದಾರೆ.
ಉತ್ತರ ಕನ್ನಡ
Banavasi News: ಏ.1 ರಂದು ಬನವಾಸಿಯ ಮಹಾಸ್ಯಂದನ ರಥೋತ್ಸವ; ಭರದಿಂದ ಸಾಗಿದೆ ರಥ ಕಟ್ಟುವ ಕಾರ್ಯ
Banavasi News: ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆ ಸಮೀಪಿಸಿದ್ದು, ಮಹಾರಥ ಕಟ್ಟುವ ಕಾರ್ಯವು ಆರಂಭವಾಗಿದೆ. ಗೌಡ್ರ ಕುಟುಂಬವು 100 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬಂದಿದ್ದು, ಸಿದ್ಧತೆಯಲ್ಲಿ ತೊಡಗಿಕೊಂಡಿದೆ.
ಸುಧೀರ್ ನಾಯರ್, ಬನವಾಸಿ
ಐತಿಹಾಸಿಕ ಬನವಾಸಿಯ ಮಹಾಸ್ಯಂದನ ರಥೋತ್ಸವ (Mahasyandana Rathotsava) ಏ.1 ಹಾಗೂ ಏ.2 ರಂದು ಸಡಗರದಿಂದ ಜರುಗಲಿದೆ. ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಕಾರ್ಯ ಆರಂಭವಾಗಿದೆ.
ಏ.1 ರಂದು ಸಂಜೆ ಗಜ ಯಂತ್ರೋತ್ಸವ (ಹೂವಿನ ತೇರು) ನಡೆಯಲಿದೆ. ಏ.2ರಂದು ಮುಂಜಾನೆ ಶ್ರೀ ಉಮಾ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಗುತ್ತದೆ. ರಾತ್ರಿ 12 ಗಂಟೆ ರಥೋತ್ಸವ ನಡೆಯಲಿದೆ. 416 ವರ್ಷಗಳ ಇತಿಹಾಸ ಹೊಂದಿರುವ ಈ ಮಹಾ ರಥೋತ್ಸವಕ್ಕೆ ರಾಜ್ಯದ ಭಕ್ತರು ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಆಗಮಿಸಿ ಸಂಭ್ರಮಿಸುತ್ತಾರೆ.
ಇದನ್ನೂ ಓದಿ: Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು
ಇಂತಹ ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗಾರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದು ಒಂದು ಕಲೆ. ತೇರು ಸಿಂಗಾರ ನೋಡಲೆಂದೇ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತಿ-ಭಾವಗಳ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಎಳೆಯುವ ಮಹಾರಥ ಕಟ್ಟುವುದು ಗಮನ ಸೆಳೆಯುತ್ತದೆ. ಇಲ್ಲಿಯ ರಥ ಕಟ್ಟುವ ಗೌಡರ ಕುಟುಂಬ ವಿಶಿಷ್ಟವಾಗಿ ಕಂಡು ಬರುತ್ತದೆ.
ಸಾಂಘಿಕವಾಗಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಈ ಕುಟುಂಬವೂ ಮಧುಕೇಶ್ವರ ದೇವರ ರಥ ಕಟ್ಟುವ ಕಾರ್ಯ ನಡೆಸುತ್ತಾ ಬಂದಿದೆ. ಹದಿನೈದು ದಿನಗಳ ಕಾಲ ತಮ್ಮ ನಿತ್ಯ ಕಾಯಕಕ್ಕೆ ರಜೆ ಹಾಕಿ ರಥ ಕಟ್ಟುವ ಕಾಯಕವೂ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.
ದೊಡ್ಡ ವ್ಯಾಸದ ಸುತ್ತಳತೆಯ ಈ ಮಹಾಸ್ಯಂದನ ರಥವನ್ನು ಹೋಳಿ ಹುಣ್ಣಿಮೆ ಆಚರಿಸಿ ರಂಗ ಪಂಚಮಿಯ ದಿವಸ ಗೂಟ ಪೂಜೆ ನೆರವೇರಿಸಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಈ ಕುಟುಂಬದ ನಾಲ್ಕೈದು ಮಂದಿ ರಥ ನಿರ್ಮಾಣ ಕೆಲಸಕ್ಕೆ ಹಾಜರಾಗುತ್ತಾರೆ. ಮರದಿಂದ ನಿರ್ಮಿತವಾದ ಮಹಾರಥ ತಳ ಭಾಗದಿಂದ ಚಕ್ರ ಸಹಿತ ಸುಭದ್ರವಾಗಿದ್ದು, 25 ಅಡಿ ಎತ್ತರ ಹೊಂದಿದೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಮೇಲ್ಭಾಗ ರೀಪುಗಳ ಸಹಿತ ಕತ್ತದ ಹುರಿಯಿಂದ ರಥವನ್ನು ಎತ್ತರಿಸುತ್ತಾ ಹೋಗುತ್ತಾರೆ. 7 ನೆಲೆಗಳನ್ನು ನಿರ್ಮಾಣ ಮಾಡಿ 10 ಅಡಿ ಎತ್ತರದ ಗೋಪುರ, 6 ಅಡಿ ಎತ್ತರದ ಕಳಶ ಇಟ್ಟು ಸುಮಾರು 75 ಅಡಿಗಳಷ್ಟು ಎತ್ತರದ ಮಹಾರಥವನ್ನು ಕಟ್ಟಲಾಗುತ್ತದೆ. ಈ ಮನೆತನದ ಮಹಿಳೆಯರು ಸಹ ರಥದಲ್ಲಿ ಅಳವಡಿಸುವ ಪತಾಕೆ ಸಜ್ಜುಗೊಳಿಸಿ ತಮ್ಮ ಸೇವೆಯನ್ನು ನೀಡುತ್ತಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Google: ಗೂಗಲ್ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!
ಪಾರಂಪರಿಕವಾಗಿ ರಥ ಕಟ್ಟುವ ಕಾರ್ಯಕ್ಕೆ ಗೌರವ ಸಂಭಾವನೆ, ತೆಂಗಿನ ಕಾಯಿ, ಅಕ್ಕಿ, ಬೆಲ್ಲ ನೀಡಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ರಥವನ್ನು ಎಳೆಯುವಾಗ ಮಟ್ಟು ಹಾಕುವ ಜವಾಬ್ದಾರಿಯನ್ನು ಇವರೇ ನಿರ್ವಹಿಸುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪಾರಂಪರಿಕ ವೈಶಿಷ್ಟ್ಯಗಳ ಸಂಪ್ರದಾಯ ಮುಂದುವರಿಯುತ್ತದೆ ಎಂಬುದಕ್ಕೆ ಇವೆಲ್ಲ ಸಾಕ್ಷಿಯಾಗಿದೆ.
“ನಮ್ಮ ಹಿರಿಯರು ಆರಂಭಿಸಿದ ಈ ರಥ ಕಟ್ಟುವ ಕಾಯಕವನ್ನು ನಾವು ಅವರಿಂದ ಕಲಿತು, ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ನಾನು ನಮ್ಮ ಮನೆತನದ ಸದಸ್ಯರ ಸಹಕಾರದಿಂದ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದೇನೆ. ರಥ ಕಟ್ಟುವ ಕಾರ್ಯ ನಮ್ಮ ಪಾಲಿನ ಭಾಗ್ಯವಾಗಿದೆ” ಎನ್ನುತ್ತಾರೆ ರಥ ಕಟ್ಟುವ ಗೌಡ್ರು ಮನೆತನದ ಹಿರಿಯ ಸಹೋದರ ಮಧುಕೇಶ್ವರ.
ಇದನ್ನೂ ಓದಿ: IPL 2023: ಪಂತ್ ಬದಲು ಡೆಲ್ಲಿ ಪಾಳಯ ಸೇರಿದ 20 ವರ್ಷದ ಬಂಗಾಳ ಕ್ರಿಕೆಟಿಗ; ಯಾರಿದು?
“ನಾನು ನಮ್ಮ ಸಹೋದರ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮುಂದೆ ನಮ್ಮ ಮಕ್ಕಳಿಗೂ ಈ ಕಲೆಯನ್ನು ಕಲಿಸಿ ಮುಂದಿನ ಪೀಳಿಗೆಗೂ ಪರಿಚಯಿಸುತ್ತೇವೆ” ಎಂದು ರಥ ಕಟ್ಟುವ ಗೌಡ್ರ ಮನೆತನದ ಕಿರಿಯ ಸಹೋದರ ನರಸಿಂಹ.
-
ಕರ್ನಾಟಕ15 hours ago
High Court order: ತುಮಕೂರು ಗ್ರಾಮಾಂತರ ಜೆಡಿಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
-
ಕ್ರಿಕೆಟ್16 hours ago
IND VS PAK: ಏಕದಿನ ವಿಶ್ವಕಪ್; ತಟಸ್ಥ ತಾಣದಲ್ಲಿ ನಡೆಯಲಿದೆ ಪಾಕಿಸ್ತಾನದ ಪಂದ್ಯಗಳು!
-
ಕರ್ನಾಟಕ13 hours ago
Karnataka BJP: ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಗೆ ಬಿಜೆಪಿ ಚಿಂತನೆ: ಖಚಿತಪಡಿಸಿದ ಬಿ.ಎಸ್. ಯಡಿಯೂರಪ್ಪ
-
ಕ್ರಿಕೆಟ್13 hours ago
ICC World Cup 2023: ಭಾರತದಲ್ಲೇ ನಡೆಯಲಿದೆ ವಿಶ್ವ ಕಪ್ ಪಂದ್ಯ; ಐಸಿಸಿ ಸ್ಪಷ್ಟನೆ
-
ಕರ್ನಾಟಕ14 hours ago
Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ
-
ಕ್ರಿಕೆಟ್11 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ15 hours ago
Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
-
ದೇಶ15 hours ago
ಸ್ಮೃತಿ ಇರಾನಿಯನ್ನು ಡಾರ್ಲಿಂಗ್ ಎಂದು ಬಿಜೆಪಿ ನಾಯಕ ಟ್ವೀಟ್, ಮಾನಹಾನಿ ನೋಟಿಸ್ ಕಳುಹಿಸಿದ ಕೈ ನಾಯಕ!