ಬೆಳಗಾವಿ: ನಿರಾಣಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ನಮ್ಮ ಕುಟುಂಬದಿಂದ ಮೂರನೇ ವ್ಯಕ್ತಿ ಚುನಾವಣೆಗೆ ಸ್ಪರ್ಧಿಸಿದರೆ ಅಂದೇ ರಾಜೀನಾಮೆ ಕೊಡುತ್ತೇನೆ ಎಂದು ಕೈಗಾರಿಕಾ ಸಚಿವ ಮುರಗೇಶ ನಿರಾಣಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರಾಣಿ ಕುಟುಂಬದ ಮೂರನೇಯ ವ್ಯಕ್ತಿ ರಾಜಕೀಯಕ್ಕೆ ಬರುತ್ತಿಲ್ಲ, ಸಂಗಮೇಶ ನಿರಾಣಿ ಕಳೆದ ನಾಲ್ಕು ವರ್ಷದಿಂದ ಜಮಖಂಡಿಯಲ್ಲಿ ಯಾವುದೇ ಸಭೆ, ಸಮಾರಂಭ ಮಾಡಿಲ್ಲ. ಈ ರೀತಿಯ ಅರೋಪ ಬರಬಾರದು ಎಂದು ಜಮಖಂಡಿಗೆ ಮಾಜಿ ಶಾಸಕರ ಅನುಮತಿ ಪಡೆದು ಹೋಗುತ್ತಿರುವೆ. ನಾನು, ನನ್ನ ಸಹೋದರ ಹನುಮಂತ ನಿರಾಣಿ ಹೊರತುಪಡಿಸಿ ನಮ್ಮ ಮನೆಯಲ್ಲಿ ಯಾರೂ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ನಮ್ಮ ಕುಟುಂಬದಿಂದ ಮೊತ್ತೊಬ್ಬರು ರಾಜಕೀಯಕ್ಕೆ ಬಂದಲ್ಲಿ ಅವತ್ತೇ ನಾನು ರಾಜೀನಾಮೆ ಕೊಡುವೆ ಎಂದು ತಿಳಿಸಿದರು.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್ ಬಾಯಲ್ಲಿ ನಿತ್ಯನಿರಂತರ ʼನಾರಾಯಣ ಜಪʼ
ಕುಟುಂಬ ರಾಜಕಾರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ನನ್ನ ಸಹಮತವಿದೆ. ನಾವು ಸ್ಪರ್ಧೆ ಮಾಡುವುದಿಲ್ಲ ಅಂದ ಮೇಲೆ ಮತ್ತೊಬ್ಬರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನಾಗಲಿ, ನನ್ನ ತಮ್ಮನಾಗಲಿ ರಾಮದುರ್ಗದಲ್ಲಿ ಕಾಲಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಆರ್‌ಎಸ್ಎಸ್ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಈಗಾಗಲೇ ದೊಡ್ಡವರು ಉತ್ತರ ಕೊಟ್ಟಿದ್ದಾರೆ. ಆರ್‌ಎಸ್ಎಸ್‌ನವರು ತಮಗಾಗಿ ಏನೂ ಮಾಡಿಕೊಂಡಿಲ್ಲ, ದೇಶ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಸರಳವಾಗಿ ಜೀವಿಸುವವರ ಬಗ್ಗೆ ಪ್ರಶ್ನಿಸುವ ನೈತಿಕತೆ ವಿರೋಧಪಕ್ಷದವರಿಗೆ ಇಲ್ಲ. ನಾನು ಒಬ್ಬ ಸ್ವಯಂಸೇವಕ, ಅವರ ಬೆಂಬಲದಿಂದ ಸಚಿವನಾಗಿರುವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಹೇಳಿದರು.
ಇನ್ನು ಬಿ.ವೈ.ವಿಜಯೇಂದ್ರಗೆ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿರುವ ಬಗ್ಗೆ ಮಾತನಾಡಿದ ಅವರು, ರಾಜ್ಯದಿಂದ 20 ಜನರ ಹೆಸರು ಹೈಕಮಾಂಡ್‌ಗೆ ಕಳುಹಿಸಿದ್ದೆವು. ಇದರಲ್ಲಿ ನಾಲ್ಕು ಜನರನ್ನ ಹೈಕಮಾಂಡ್ ಆಯ್ಕೆ ಮಾಡಿದೆ. ಕೋರ್ ಕಮಿಟಿ ಕಳುಹಿಸಿದ ಹೆಸರುಗಳನ್ನೆ ಹೈಕಮಾಂಡ್ ಅಂತಿಮ ಮಾಡಿದೆ. ವಿಜಯೇಂದ್ರಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯ ಇದೆ ಎಂದರು.
ಇದನ್ನೂ ಓದಿ | ವಿಜಯದಶಮಿ ಹೊತ್ತಿಗೆ BJPಗೆ ಪರ್ಯಾಯ ಶಕ್ತಿ: ದೇವೇಗೌಡರ ಜತೆ ತೆಲಂಗಾಣ ಸಿಎಂ ಮಾತುಕತೆ