ಮಂಡ್ಯ: ಮುಂದೆ ಲೋಕಸಭಾ ಚುನಾವಣೆ ಬರುತ್ತದೆ. ಡಿ.ಕೆ. ಶಿವಕುಮಾರ್, ಚಲುವರಾಯ ಸ್ವಾಮಿ ಬಗ್ಗೆ ಮಾತನಾಡಿದರೆ ಅನುಕೂಲ ಆಗುತ್ತೆ ಎಂಬ ಕಾರಣಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ಮೇಲೆ ದ್ವೇಷ ಇದೆಯೋ, ಸಮಾಜದವರು ಯಾರು ಮುಂದೆ ಬರಬಾರದು ಎಂಬ ಉದ್ದೇಶ ಇದೆಯೋ ಗೊತ್ತಿಲ್ಲ. ನಾನು ಒಬ್ಬ ಸಾಮಾನ್ಯ ರೈತನ ಮಗ. ದೇವೇಗೌಡರನ್ನು ರೈತನ ಮಗ ಎನ್ನುತ್ತಿದ್ದರು. ಕುಮಾರಸ್ವಾಮಿ ಅವರನ್ನು ರೈತನ ಮಗ ಎನ್ನುತ್ತಾರಾ? ದೇವೇಗೌಡರ ಮಗ ಎನ್ನುತ್ತಾರೆ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ (N Chaluvaraya Swamy) ಹೇಳಿದರು.
ಭ್ರಷ್ಟಾಚಾರಕ್ಕೆ ಜಾತಿ ಇದೆಯಾ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರಿಗೆ ಒಳ್ಳೆಯದು ಆಗಲಿ. ಸಮಯ ಬಂದಾಗ ಉತ್ತರ ಕೊಡುತ್ತೇನೆ. ಅವರು ಮಾತನಾಡಿದರೆ ನನಗೇನೂ ಬೇಜಾರಿಲ್ಲ. ರೇಟ್ ಕಾರ್ಡ್ ವಿಚಾರ 2018ರಲ್ಲೂ ಕೂಡ ಬಂದಿತ್ತು. ಅವರು ಸಿಎಂ ಆದಾಗ ಬಂದಿತ್ತು. ಈಗಾಗಲೇ ಎಲ್ಲ ಹೇಳಿದ್ದೇನೆ ಎಂದು ತಿಳಿಸಿದರು.
ಭ್ರಷ್ಟಾಚಾರಕ್ಕೆ ಜಾತಿ ಇದೆ ಎಂದು ಹೇಳಿಲ್ಲ. ಈಗಾಗಲೇ ಸದನದಲ್ಲಿ ಚರ್ಚೆ ಆಗಿದೆ. ಅದು ಕ್ಯಾಬಿನೆಟ್ ವಿಚಾರ. ಅದನ್ನು ಪ್ರತಿದಿನ ಹೊರಗೆ ಚರ್ಚೆ ಮಾಡುವುದು ಸೂಕ್ತವಲ್ಲ ಎಂದ ಅವರು, ಈಗಾಗಲೇ ಎರಡು ಬಾರಿ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಮಂಡ್ಯದಲ್ಲಿ ಆರು ಸೀಟ್ ಕಾಂಗ್ರೆಸ್ ಗೆದ್ದಿದೆ. ಹೀಗಾಗಿ ಬಹಳ ಉದ್ವೇಗದಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರು ಯಾವಾಗಲೂ ನಾನು ಮಾಜಿ ಪ್ರಧಾನಿ ಮಗ ಎನ್ನುತ್ತಾರೆ. ಅವರು ಕುಮಾರಸ್ವಾಮಿ ಆಗಿ ಮಾತನಾಡುವುದಿಲ್ಲ. ನಾವು ಯಾವಾಗಾದರೂ ದೇವೇಗೌಡರ ಹೆಸರು ಎತ್ತಿದ್ದೇವಾ? ಸದನದಲ್ಲಿ ಯಾರಾದರೂ ಪ್ರಸ್ತಾಪಿಸಿದ್ದಾರಾ? ಆದರೆ, ಕುಮಾರಸ್ವಾಮಿ ಅವರೇ ಹುಡುಕುತ್ತಾರೆ. ನಾನು ದೇವೇಗೌಡರ ಮಗ ಎಂದು ಅವರೇ ಹೇಳುತ್ತಾರೆ. ಅವರು ದೇವೇಗೌಡರ ಮಗ ಎಂದು ಎಲ್ಲರಿಗೂ ಗೊತ್ತು. ಅವರ ಹೆಸರು ಯಾಕೆ ತೆಗೆದುಕೊಳ್ಳಬೇಕು ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು.
ಸುಮಲತಾ ಅಂಬರೀಶ್ ಜತೆ ಭಿನ್ನಾಭಿಪ್ರಾಯ ಇಲ್ಲ
ಕಾವೇರಿ ನೀರು ನಿರ್ವಹಣೆ ವಿಚಾರದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಂದ ಎನ್. ಚಲುವರಾಯ ಸ್ವಾಮಿ ಅವರು, ಸುಮಲತಾ ಅಂಬರೀಶ್ ಜತೆ ವೇದಿಕೆ ಹಂಚಿಕೊಳ್ಳದ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ನಡುವೆ ಬೇಸರ ಏನಿಲ್ಲ. ಈಗಾಗಲೇ ಎರಡು ಮೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ದಿಶಾ ಸಭೆಯಲ್ಲೂ ಶಾಸಕರನ್ನು ಭಾಗವಹಿಸಲು ಹೇಳಿದ್ದೇನೆ. ಮೇಡಮ್ ಏನಾದ್ರು ಸಮಸ್ಯೆ ಬಗ್ಗೆ ಗಮನಕ್ಕೆ ತಂದರೆ ನಾವು ಬಗೆಹರಿಸುತ್ತೇವೆ. ನಮ್ಮ ನಡುವೆ ಯಾವುದೇ ರಾಜಕರಣ ಇಲ್ಲ. ಅವರಿಗೂ ನಮಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ
ಮಳೆಗಾಗಿ ಚಿಕ್ಕಮಗಳೂರಿನಲ್ಲಿ ಪೂಜೆ ಮಾಡಿ ಬಂದಿದ್ದೇವೆ, ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಈ ತಿಂಗಳೊಳಗೆ ಒಳ್ಳೆಯ ಮಳೆ ಬರಲಿದೆ ಎಂಬ ವರದಿ ಇದೆ. ಕೆಆರ್‌ಎಸ್‌ನ ಒಳಹರಿವು ಕೂಡ ಕಡಿಮೆ ಆಗಿದೆ. ಮಳೆಯೇ ಬರದಿದ್ದಾಗ ಬರಗಾಲ ಘೋಷಣೆ ಮಾಡಬೇಕಾಗುತ್ತದೆ. ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ಹೆಜ್ಜೆ ಇಡುತ್ತದೆ. ಕ್ಯಾಬಿನೆಟ್ ಸಬ್ ಕಮಿಟಿ ಈಗಾಗಲೇ ಒಂದು ಸಭೆ ಮಾಡಿದೆ. ಮಳೆ ಬರದಿದ್ದಾಗ ಕೆಲವೊಂದು ಮಾನದಂಡದ ಮೇಲೆ ಬರಗಾಲ ಘೋಷಣೆ ಮಾಡಲಾಗುತ್ತದೆ ಎಂದು ಎನ್. ಚಲುವರಾಯ ಸ್ವಾಮಿ ತಿಳಿಸಿದರು.