Site icon Vistara News

Untouchability: ಕುರುಬ ಸ್ವಾಮೀಜಿಗೆ ಗರ್ಭಗುಡಿ ಪ್ರವೇಶ ನಿರಾಕರಣೆ; ವರದಿ ಕೇಳಿದ ಸಚಿವ ರಾಮಲಿಂಗಾರೆಡ್ಡಿ

Minister Ramalinga Reddy seeks report on denial of entry to Kuruba Swamiji

ಬೆಂಗಳೂರು: ಕನಕ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರಿಗೆ ದೇಗುಲ ಗರ್ಭಗುಡಿ ಪ್ರವೇಶ ನಿರಾಕರಣೆ (Untouchability) ವಿಚಾರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕೆಲ ಕಾಂಗ್ರೆಸ್‌ ನಾಯಕರು ಅಸಮಾಧಾನ ಹೊರಹಾಕಿದ್ದರೆ, ಸಿಎಂ ಮತ್ತು ಡಿಸಿಎಂ ಅವರು ಘಟನೆ ಬಗ್ಗೆ ಮಾಹಿತಿ ಪಡೆದು ಮಾತನಾಡುವುದಾಗಿ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಘಟನೆ ಕುರಿತು ವರದಿ ನೀಡುವಂತೆ ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದಾರೆ.

ಸ್ವಾಮೀಜಿಗಳು ದೇವಸ್ಥಾನದ ಒಳಗೆ ಹೋಗಿದ್ದಾರೆ, ಗರ್ಭಗುಡಿಯಲ್ಲಿ ಎಲ್ಲರನ್ನು ಬಿಡೋದಿಲ್ಲ, ಆದರೆ, ದೇಗುಲದೊಳಗೆ ಎಲ್ಲರನ್ನೂ ಬಿಡಬೇಕು. ಕೆಲವೆಡೆ ಗರ್ಭಗುಡಿಗೆ ಬಿಡುತ್ತಾರೆ, ಕೆಲವಡೆ ಪ್ರವೇಶ ಇರೋದಿಲ್ಲ. ಘಟನೆ ಬಗ್ಗೆ ಒಂದು ವರದಿ ನೀಡಿ ಎಂದು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚಿಸಿರುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ದೇಗುಲಗಳಲ್ಲಿ ಯಾವುದೇ ಅಸ್ಪೃಶ್ಯತೆ ಇಲ್ಲ ಎಂದ ಡಿಕೆಶಿ

ಪ್ರಕರಣದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಯಿಸಿ, ನಾನು ಆ ಸುದ್ದಿಯನ್ನು ಪತ್ರಿಕೆಯಲ್ಲಿ ಗಮನಿಸಿದ್ದೇನೆ. ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಆಗಾಗ ಸ್ವಚ್ಛ ಮಾಡುತ್ತಾರೆ. ಸ್ವಾಮೀಜಿಗಳು ಹೋದಾಗ ನಡೆದ ಘಟನೆಯ ಹಿಂದಿನ ಉದ್ದೇಶ ಏನೆಂಬುದು ಗೊತ್ತಿಲ್ಲ. ಈ ಬಗ್ಗೆ ಮುಜರಾಯಿ ಇಲಾಖೆ ಬಳಿ ಮಾಹಿತಿ‌ ಪಡೆಯುತ್ತೇನೆ. ರಾಜ್ಯದ ದೇಗುಲಗಳಲ್ಲಿ ಯಾವುದೇ ಅಸ್ಪೃಶ್ಯತೆ ಇಲ್ಲ, ಎಲ್ಲಾ ಧರ್ಮದ‌ವರಿಗೆ ದೇವಸ್ಥಾನದಲ್ಲಿ ಅವಕಾಶ ನೀಡುತ್ತೇವೆ‌ ಎಂದು ತಿಳಿಸಿದರು.

ಇದನ್ನೂ ಓದಿ | LK Advani: ಅಡ್ವಾಣಿಗೆ ಭಾರತ ರತ್ನ; ಕೊಟ್ಟುಕೊಳ್ಳಲಿ, ನಾವೇನು ಬೇಡ ಎಂದಿಲ್ಲ ; ಆದರೆ.., ಎಂದ ಸಿದ್ದರಾಮಯ್ಯ

ಗೊತ್ತಿಲ್ಲದ ವಿಚಾರದ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದ ಸಿಎಂ

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನನಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಾನು ಹೇಗೆ ಪ್ರತಿಕ್ರಿಯಿಸಲಿ? ಸ್ವಾಮೀಜಿಗಳು ನನ್ನ ಜತೆ ಏನೂ ಮಾತನಾಡಿಲ್ಲ. ನನ್ನ ಗಮನಕ್ಕೆ ಬಂದಿದ್ದರೆ ನಾನು ಪ್ರತಿಕ್ರಿಯಿಸಬಹುದು ಎಂದು ಹೇಳಿದ್ದಾರೆ.

ಇನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ಪ್ರತಿಕ್ರಿಯಿಸಿ, ವಿಷಯ ನಮ್ಮ ಗಮನಕ್ಕೆ ಬಂದಿಲ್ಲ. ಮುಜರಾಯಿ ಇಲಾಖೆಯವರು ಇದನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಸೂಕ್ತ ಕ್ರಮ ಆಗಬೇಕು: ಎಚ್.ಸಿ. ಮಹದೇವಪ್ಪ ಒತ್ತಾಯ

ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯಿಸಿ, ನಾವೆಲ್ಲ ಶೂದ್ರ ಸಮಾಜಕ್ಕೆ ಸೇರಿದವರು. ಮನುವಾದ ಇದೆಯಲ್ಲ ಅದು ಆಗಿನಿಂದ ಈಗಿನವರೆಗೆ ಇದೇ ಕೆಲಸ ಮಾಡುವುದು. ಇದೆಲ್ಲ ನೋಡಿ ಶೂದ್ರರಿಗೆ ಮನವರಿಕೆ ಆಗಬೇಕು. ಗುರುಗಳಿಗೆ ಈ ತರಹ ಆದಮೇಲೆ ಸಾಮಾನ್ಯ ಜನರ ಪರಿಸ್ಥಿತಿ ಏನು? ಕನಕದಾಸರನ್ನೂ ನಿರಾಕರಣೆ ಮಾಡಿದ ವ್ಯವಸ್ಥೆ ಇದು. ಹಿಂದೂಗಳನ್ನೇ ಆಚೆಗೆ ಇಟ್ಟ ಮೇಲೆ ಏನು ಹೇಳಬೇಕು? ಧರ್ಮದ ಹೆಸರಲ್ಲಿ ಭಯ ಹುಟ್ಟಿಸುವುದು, ಶೋಷಣೆ ಮಾಡುವುದು ನಡೆಯುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಅಸಮಾನತೆಯಿಂದ ಕೂಡಿದ ವ್ಯವಸ್ಥೆ ಸರಿಪಡಿಸಬೇಕು ಎಂದೇ ಅಂಬೇಡ್ಕರ್ ಹೋರಾಡಿದರು. ಯಾರು ಹಾಗೆ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಪಾವಿತ್ರ್ಯತೆ ಹೆಸರಲ್ಲಿ ಜಾತೀಯತೆ ನಿರೂಪಿಸಬಾರದು

ಘಟನೆ ಬಗ್ಗೆ ಚಿತ್ರದುರ್ಗದ ಮಾದಾರ ಚೆನ್ನಯ್ಯ ಸ್ವಾಮೀಜಿ ಪ್ರತಿಕ್ರಿಯಿಸಿ, ಘಟನೆ ನಡೆದು ಹದಿನೈದು ವರ್ಷ ಆಗಿದೆ. ಅವರು ಹೋಗಿ ಬಂದ ಮೇಲೆ ದೇಗುಲ ಶುದ್ಧಿ ಆಗಿದೆ ಅಂತ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತಿಯ ಶ್ರದ್ಧಾ ಕೇಂದ್ರಗಳಲ್ಲಿ ಪಾವಿತ್ರ್ಯತೆ ಕಾಪಾಡಬೇಕು. ಆದರೆ, ಪಾವಿತ್ರ್ಯತೆ ಹೆಸರಲ್ಲಿ ಜಾತೀಯತೆ ನಿರೂಪಿಸಬಾರದು. ಎಲ್ಲ ದೇಗುಲಗಳಲ್ಲಿ ಸೂಕ್ಷ್ಮವಾಗಿ ಪರಿಸ್ಥಿತಿ ನಿಭಾಯಿಸಬೇಕು. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದು ತಿಳಿಸಿದರು.

ಸಾವಿರಾರು ವರ್ಷಗಳಿಂದ ಗೊತ್ತಿದ್ದೂ, ಗೊತ್ತಿಲ್ಲದ ಹಾಗೆ ನಡೆದುಕೊಂಡು ಬಂದಿದೆ. ಅದನ್ನು ಇವತ್ತೇ ಒಂದೇ ದಿನಕ್ಕೆ ಹೋಗಲಾಡಿಸಲು ಆಗಲ್ಲ. ಈಗ ಬಹುಪಾಲು ಬದಲಾವಣೆ ಆಗುತ್ತಿದೆ, ಇನ್ನಷ್ಟು ಆಗಬೇಕು. ನಾನು ಯಾವ ದೇಗುಲಕ್ಕೂ ಹೋಗಲ್ಲ. ಯಾರಾದರೂ ಆಹ್ವಾನ ಮಾಡಿದರೆ ಮಾತ್ರ ಹೋಗುವೆ. ಘಟನೆ ಬಗ್ಗೆ ಸಿಎಂ ಗಮನಕ್ಕೆ ತರುವ ಕೆಲಸ ಮಾಡಲ್ಲ. ಪ್ರಕರಣವನ್ನು ವಿವಾದ ಮಾಡುವ ಇಚ್ಛೆ ಇಲ್ಲ, ಇಲ್ಲಿಗೆ ಅದನ್ನು ಶಮನ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ | LK Advani: ಅಡ್ವಾಣಿಗೆ ಭಾರತರತ್ನ; ವಿನಯವಂತ ರಾಜಕಾರಣಿಗೆ ಸಂದ ಗೌರವ; ಪೇಜಾವರ ಶ್ರೀ

ಏನಿದು ಪ್ರಕರಣ?

ಕಾರ್ಯಕ್ರಮವೊಂದರಲ್ಲಿ ಶುಕ್ರವಾರ ಮಾತನಾಡುವಾಗ ಜಾತಿ ವ್ಯವಸ್ಥೆ ಬಗ್ಗೆ ಬೇಸರ ಹೊರಹಾಕಿದ್ದ ಹೊಸದುರ್ಗದ ಸಾಣೇಹಳ್ಳಿಯ ಕನಕ ಮಠದ ಈಶ್ವರನಂದಪುರಿ ಸ್ವಾಮೀಜಿ ಅವರು, ಮಠಾಧೀಶರಾದ ನಮಗೇ ಕೆಲ ದೇವಸ್ಥಾನದಲ್ಲಿ ಒಳಗೆ ಬಿಡಲ್ಲ.
ಬಾಗೂರು ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆ, ನಾನು ದೇವಸ್ಥಾನದ ಒಳಗೆ ಹೋಗಿದ್ದಕ್ಕೆ ದೇವಸ್ಥಾನವನ್ನು ತೊಳೆದರು. ನಾನು ಕುರುಬ ಸ್ವಾಮೀಜಿ ಆಗಿದ್ದಕ್ಕೆ ಮಲಿನ ಆಗಿದೆ ಅಂತ ದೇಗುಲ ಸ್ವಚ್ಛತೆ ಮಾಡಿದ್ದರು ಎಂದು ತಿಳಿಸಿದ್ದರು.


ವೈಕುಂಠ ಏಕಾದಶಿ ದಿನ ಪೂಜಾರಿಗಳು ನಮಗೆ ನರಕ ತೋರಿಸಿದರು. ನಾನು ಹಾಗೂ ಶಾಂತವೀರ ಸ್ವಾಮೀಜಿ ಹೋದಾಗ ಒಂದು ದೇವಸ್ಥಾನದಲ್ಲಿ ಒಳಗೆ ಬಿಡಲಿಲ್ಲ. ಪೂಜಾರಿ ಹೆಣ್ಣು ಮಕ್ಕಳು ದೇವಸ್ಥಾನದ ಒಳಗೆ ಹೋದರು. ಆದರೆ ಮಠದ ಸ್ವಾಮೀಜಿಗಳಾದ ನಮ್ಮನ್ನೇ ಒಳಗೆ ಬಿಡಲಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಚೆನ್ನಕೇಶವ ದೇವಸ್ಥಾನಕ್ಕೂ ಹೋಗುವುದಿಲ್ಲ. ಜಾತಿ ಇಟ್ಟುಕೊಂಡು ಅಪಮಾನ ಮಾಡುವ ಜಾಗಕ್ಕೆ ಯಾಕೆ ಹೋಗಬೇಕು ಎಂದು ಬೇಸರ ವ್ಯಕ್ತಪಡಿಸಿದ್ದರು.

Exit mobile version