ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ ಕಲಾದಗಿಯಲ್ಲಿ ಶನಿವಾರ (ಫೆ.೨೫) ಏರ್ಪಡಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಕಂದಾಯ ಸಚಿವ ಆರ್. ಅಶೋಕ್ (R Ashok) ಉದ್ಘಾಟಿಸಿದರು. ಈ ವೇಳೆ ಕಾಲು ಇಲ್ಲದ ವಯೋವೃದ್ಧರೊಬ್ಬರಿಗೆ ಸಚಿವರೇ ಸ್ವತಃ ಕೃತಕ ಕಾಲನ್ನು ಜೋಡಿಸುವ ಮೂಲಕ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ರಾತ್ರಿ ಕಲಾದಗಿಯಲ್ಲಿಯೇ ಸಚಿವರು ಗ್ರಾಮ ವಾಸ್ತವ್ಯ (Grama Vastavya) ಹೂಡಲಿದ್ದಾರೆ.
ವೇದಿಕೆಯಲ್ಲಿ ಕಾಲು ಜೋಡಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ವೇಳೆ ಸಚಿವ ಆರ್. ಅಶೋಕ್ ಅವರು, ವೃದ್ಧನ ಕಾಲನ್ನು ಸ್ಪರ್ಶಿಸಿದರು. ಆಗ ಆ ವೃದ್ಧರಿಗೆ ಸಚಿವರು ಕಾಲು ಮುಟ್ಟುತ್ತಿದ್ದಾರೆಂದು ಸಂಕೋಚವಾಗಿ ನಯವಾಗಿ ಸಚಿವರ ಕೈಯನ್ನು ಮೇಲೆತ್ತಿದರು. ಆದರೆ, ಸಚಿವ ಅಶೋಕ್ ಅಷ್ಟಕ್ಕೆ ಸುಮ್ಮನಾಗದೆ, ವೃದ್ಧನ ಎದುರು ವೇದಿಕೆಯ ಮೇಲೆಯೇ ಕುಳಿತುಕೊಂಡು ಕೃತಕ ಕಾಲನ್ನು ಜೋಡಿಸುವ ಪ್ರಕ್ರಿಯೆಯಲ್ಲಿ ನಿರತರಾದರು. ಅವರಿಗೆ ಕಾಲು ಜೋಡಿಸಿದ ಬಳಿಕ ಅಲ್ಲಿಂದ ಮೇಲೆದ್ದರು. ಬಳಿಕ ಆ ವೃದ್ಧರನ್ನು ಕುಳಿತಲ್ಲಿಂದ ನಿಲ್ಲಿಸಿ ಕೃತಕ ಕಾಲಿನ ಜೋಡಣೆಯನ್ನು ಖಾತ್ರಿಪಡಿಸಿಕೊಳ್ಳಲಾಯಿತು.
ಕಾರ್ಯಕ್ರಮದ ಪೂರ್ವದಲ್ಲಿ ಸಾಂಪ್ರದಾಯಿಕವಾಗಿ ಧಾನ್ಯ ಬೀರುವ ಮೂಲಕ ನಾಡಿನ ರೈತರಿಗೆ ಗೌರವ ಸಲ್ಲಿಸಲಾಯಿತು.
ಸಚಿವರಿಗೆ ಅದ್ಧೂರಿ ಸ್ವಾಗತ
ಕಂದಾಯ ಸಚಿವ ಆರ್.ಅಶೋಕ್ ಅವರು ಕಲಾದಗಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಗೆ ಆಗಮಿಸಿದ್ದು, ಮಾರ್ಗಮಧ್ಯೆ ತುಳಸಿಗೇರಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದರ್ಶನ ಪಡೆದು, ಅಲ್ಲಿಂದ ನೇರವಾಗಿ ಕಲಾದಗಿ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಕಂದಾಯ ಸಚಿವರಿಗೆ, ಕುಂಬ ಹೊತ್ತ ಮಹಿಳೆಯರಿಂದ ಅದ್ಧೂರಿ ಸ್ವಾಗತ ದೊರೆಯಿತು.
ಅಲ್ಲದೆ, ಆರ್.ಅಶೋಕ್ ಟ್ರ್ಯಾಕ್ಟರ್ ಮೂಲಕ ಮುಖ್ಯ ರಸ್ತೆಯಿಂದ ಕಲಾದಗಿ ಗ್ರಾಮದ ಒಳಗೆ ಮೆರವಣಿಗೆ ಮೂಲಕ ಸಾಗಿದರು. ಈ ವೇಳೆ ಡೊಳ್ಳು ಕುಣಿತ, ಪೂರ್ಣ ಕುಂಭ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಸಚಿವರಿಗೆ ಜೆಸಿಬಿ ಮೂಲಕ ಹೂಮಳೆ ಸುರಿಯಲಾಯಿತು. ಸಚಿವ ಸಚಿವ ಮುರಗೇಶ್ ನಿರಾಣಿ, ಸಂಸದ ಪಿ.ಸಿ. ಗದ್ದಿಗೌಡರ್, ಪರಿಷತ್ ಸದಸ್ಯ ಪಿ.ಎಚ್. ಪೂಜಾರ್ ಸೇರಿದಂತೆ ಜಿಲ್ಲೆಯ ಮುಖಂಡರು ಸಾಥ್ ನೀಡಿದರು.
ನನಗೆ ಗ್ರಾಮ ವಾಸ್ತವ್ಯ ಪಾಠ ಶಾಲೆ: ಅಶೋಕ್
ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆಯಾಗಿವೆ. ಕಾಡಿನ ಜನರ ಜೀವನ ನೋಡಿದಾಗ ಕಣ್ಣೀರು ಬರುತ್ತದೆ. ಎಲ್ಲ ಗ್ರಾಮ ವಾಸ್ತವ್ಯವೂ ನನಗೆ ತೃಪ್ತಿ ಕೊಟ್ಟಿದೆ. ನಾನು ಕಾಡಿನ ಅಂಚಿನಲ್ಲೂ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಅದೇ ರೀತಿ ಉತ್ತರ ಕರ್ನಾಟಕದಲ್ಲೂ ವಾಸ್ತವ್ಯ ಹೂಡಿದ್ದೇನೆ. ನನ್ನ ಗ್ರಾಮ ವಾಸ್ತವ್ಯಗಳ ಪೈಕಿ ಹೆಚ್ಚಿನ ವಾಸ್ತವ್ಯ ಉತ್ತರ ಕರ್ನಾಟಕದಲ್ಲಿಯೇ ಆಗಿದೆ. ಹಳೇ ಮೈಸೂರು ಭಾಗದಲ್ಲಿ ಮೂರ್ನಾಲ್ಕು ವಾಸ್ತವ್ಯ ಆಗಿರಬಹುದು. ಉತ್ತರ ಕರ್ನಾಟಕದ ಜನ ನನಗೆ ಸಾಕಷ್ಟು ಪ್ರೀತಿ ತೋರಿಸಿದ್ದಾರೆ, ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ಗ್ರಾಮ ವಾಸ್ತವ್ಯಗಳು ನನಗೆ ಪಾಠ ಶಾಲೆ ಇದ್ದಂತೆ ಎಂದು ಕಲಾದಗಿ ಗ್ರಾಮದಲ್ಲಿ ಸಚಿವ ಆರ್.ಅಶೋಕ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಕಾಡು ಪ್ರದೇಶದಲ್ಲಿ ವಾಸ್ತವ್ಯ ಮಾಡಿದ್ದೇನೆ. ಅಲ್ಲಿನ ಜನರು ಮತ್ತು ಅವರ ಬದುಕನ್ನು ನೋಡಿದಾಗ ಕಣ್ಣೀರು ಬರುತ್ತದೆ. ನಾವೆಲ್ಲ ಇಡ್ಲಿ, ವಡೆ, ಸಾಂಬಾರು, ದೋಸೆ ಎಂದು ಬಗೆ ಬಗೆಯ ತಿಂಡಿಗಳನ್ನು ತಿನ್ನುತ್ತಿರುತ್ತೇವೆ. ಪಾಪ ಅವರು ಗೆಡ್ಡೆ, ಗೆಣಸು ತಿಂದು ಜೀವನ ಸಾಗಿಸುತ್ತಾರೆ. ನಾವು ೨೧ನೇ ಶತಮಾನ ದಾಟಿದ್ದೇವೆ. ಆದರೂ ಅವರ ಕಡೆ ಗಮನ ಹರಿಸಿರಲಿಲ್ಲ. ನಾನು ಆ ಕಡೆ ಭೇಟಿ ಮಾಡಿ, ಅವರಿಗೆ ನ್ಯಾಯ ಕೊಡಿಸಬೇಕು. ಅವರ ಉಳುಮೆ ಮಾಡುವ ಜಮೀನು ಅವರಿಗೆ ಸಿಗಬೇಕು. ಜತೆಗೆ ಎಲ್ಲ ಸರ್ಕಾರಿ ಸವಲತ್ತುಗಳು ಅವರಿಗೆ ಸಿಗಬೇಕು ಎಂದು ಆದೇಶ ಮಾಡಿದ್ದೇನೆ. ಈ ಎಲ್ಲ ಆದೇಶ ಆಗಲು ಕಾರಣ ನನ್ನ ಗ್ರಾಮ ವಾಸ್ತವ್ಯ ಎಂದು ಅಶೋಕ್ ಹೇಳಿದರು.