ಬೆಳಗಾವಿ: ಮನೆಯ ಮುಖ್ಯಸ್ಥೆಗೆ ಮಾಸಿಕ ತಲಾ 2,000 ರೂ. ನೀಡುವ ಗೃಹಲಕ್ಷ್ಮೀ ಯೋಜನೆಯ ಆ್ಯಪ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ ನಡೆಸುವ ವೇಳೆಯಲ್ಲಿ ಇನ್ನೊಂದು ಹೊಸ ಆರೋಪವನ್ನು ಜಾರಕಿಹೊಳಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡ್ತಿಲ್ಲ. ಇದನ್ನ ಖಂಡಿಸಿ ಇವತ್ತು ಪ್ರತಿಭಟನೆ ಮಾಡ್ತಿದ್ದೇವೆ. ನಾವು ಹಣಕೊಟ್ಟು ಅಕ್ಕಿ ಖರೀದಿ ಮಾಡ್ತಿದ್ದೇವೆ. ಕೇಂದ್ರದಿಂದ ಉಚಿತವಾಗಿ ಅಕ್ಕಿ ಕೇಳ್ತಿಲ್ಲ. 10 ಕೆ.ಜಿ. ಅಕ್ಕಿ ಕೊಟ್ಟೆ ಕೊಡುತ್ತೇವೆ. ಒಂದು ತಿಂಗಳು ವಿಳಂಬ ಆಗಬಹುದು ಅಷ್ಟೇ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆ ಐದು ವರ್ಷ ಕೊಡುತ್ತೇವೆ ಎಂದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಆಗಿರ್ತಾರಾ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಅದನ್ನ ನೀವು ಸಿಎಂ ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು. ಸ್ಮಾರ್ಟ್ ಸಿಟಿ, ಬುಡದಲ್ಲಿ ಆದ ಅಕ್ರಮ ತನಿಖೆ ಮಾಡುತ್ತೇವೆ. ಈಗಾಗಲೇ ಅವರ ವಿರುದ್ಧ ಕೇಸ್ ದಾಖಲಾಗಿದೆ ಎಂದರು.
ಪ್ಲಾನಿಂಗ್ ಇಲ್ಲದೆ ಕಾಂಗ್ರೆಸ್ ಗ್ಯಾರಂಟಿ ಘೋಷಿಸಿದೆ ಎಂಬ ಸಚಿವ ಪ್ರಲ್ಹಾದ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿ, ಯೋಜನೆ ಆರಂಭಿಸಿದಾಗ ಟ್ರಯಲ್ ಆಂಡ್ ಟ್ರಯಲ್ ಆಗೆ ಆಗುತ್ತೆ, ಅದೇನು ದೊಡ್ಡ ವಿಷಯ ಅಲ್ಲ. ನಾವು ಮ್ಯಾನ್ಯುವಲ್ ಆಗಿ ಕೈಯಿಂದ ಅರ್ಜಿ ತೆಗೆದುಕೊಳ್ಳುತ್ತೇವೆ. ಅದಕ್ಕಿಂತ ಹೆಚ್ಚಿಗೆ ಏನು ಆಗಲ್ಲ.
ನಾವು ಪ್ಲಾನ್ ಮಾಡಿದ್ವಿ. ಆದರೆ ನಮ್ಮ ಮೆಷಿನನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹ್ಯಾಕ್ ಮಾಡಿ ಸ್ಟಾಪ್ ಮಾಡಿದ್ದಾರೆ. ಇವಿಎಂ ಹೇಗೆ ಹ್ಯಾಕ್ ಮಾಡ್ತಾರೋ ಈ ಮೆಷಿನ್ ಸಹ ಹಾಗೆಯೇ ಹ್ಯಾಕ್ ಮಾಡಿದ್ದಾರೆ. ಹೀಗಾಗಿ ಯೋಜನೆ ಜಾರಿ ಆಗೋದು ಡಿಲೇ ಆಗ್ತಿದೆ. ಮೇಡಮ್‌ಗೆ (ಪಕ್ಕದಲ್ಲೇ ನಿಂತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುರಿತು) ಸಂಬಂಧಿಸಿದ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರದ ಆ್ಯಪ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಅದನ್ನು ಮುಂದಿನ ದಿನಗಳಲ್ಲಿ ನಾವು ರಿಪೇರಿ ಮಾಡುತ್ತೇವೆ. ಗ್ಯಾರಂಟಿಗಳನ್ನು ಕೊಟ್ಟೇ ಕೊಡುತ್ತೇವೆ ಎಂದು ಈಗಾಗಲೇ ಸಿಎಂ ಸಹ ಹೇಳಿದ್ದಾರೆ ಎಂದರು.
ಇದನ್ನೂ ಓದಿ: Congress Guarantee : ಜುಲೈ ತಿಂಗಳಲ್ಲಿ ಅಕ್ಕಿ ಸಿಗಲ್ಲ; ಗೃಹ ಲಕ್ಷ್ಮಿ, ಗೃಹಜ್ಯೋತಿಯೂ ವಿಳಂಬ