Site icon Vistara News

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣದಲ್ಲಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೆಸರು; ಡಾ. ಜಿ.ಪರಮೇಶ್ವರ್‌ ಹೇಳಿದ್ದೇನು?

Valmiki Corporation Scam

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣ (Valmiki Corporation Scam)ದಲ್ಲಿ ಈಗಾಗಲೇ ರಾಜ್ಯ ಸರ್ಕಾರದ ಸಚಿವರೊಬ್ಬರ ತಲೆದಂಡವಾಗಿದೆ. ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಗುರುವಾರ ರಾಜೀನಾಮೆ ನೀಡಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಸಚಿವ ಶರಣ ಪ್ರಕಾಶ್‌ ಪಾಟೀಲ್‌ ಹೆಸರೂ ಕೇಳಿ ಬರುತ್ತಿದೆ. ಅವರು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಪ್ರತಿಕ್ರಿಸಿ, ಅದನ್ನು ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ, ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್‌, ʼʼತನಿಖೆ ಮಾಡುವಾಗ ಯಾರು ಅಪರಾಧಿ ಸ್ಥಾನದಲ್ಲಿ ಇರ್ತಾರೆ ಅವರು ಹೇಳಿಕೆಗಳನ್ನು ಕೊಡುತ್ತಾರೆ. ಆ ಹೇಳಿಕೆಯಲ್ಲಿ ಹಲವರ ಹೆಸರು ಕೇಳಿ ಬರುತ್ತದೆ. ಈ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಶರಣ ಪ್ರಕಾಶ್‌ ಪಾಟೀಲ್‌ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸುತ್ತಿದ್ದಾರೆ. ಆದರೆ ಯಾರು ಏನೇ ಹೇಳಿದ್ರೂ ಅದನ್ನು ಪರಿಶೀಲಿಸಬೇಕಾಗುತ್ತದೆ. ನಾವು ಅದರ ಬಗ್ಗೆ ವ್ಯಾಖ್ಯಾನ ಮಾಡೋದು ಸರಿಯಲ್ಲ. ಜತೆಗೆ ಈಗಲೇ ಅದಕ್ಕೆ ಸಂಬಂಧಪಟ್ಟ ಹೇಳಿಕೆ ಕೊಡಲು ಆಗಲ್ಲ. ಅದನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಾರೆʼʼ ಎಂದು ತಿಳಿಸಿದ್ದಾರೆ.

ಬಸನಗೌಡ ದದ್ದಲ್‌ಗೂ ಸಂಕಷ್ಟ

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಭ್ರಷ್ಟಾಚಾರ ಪ್ರಕರಣದಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹೆಸರು ತಳಕು ಹಾಕಿಕೊಂಡಿದೆ. ನಾಗೇಂದ್ರ ಬೆನ್ನಲ್ಲೇ ಶಾಸಕ ಬಸನಗೌಡ ದದ್ದಲ್ ಅವರಿಗೂ ಸಂಕಷ್ಟ ಎದುರಾಗಿದೆ. ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರೂ ಆಗಿರುವ ಬಸನಗೌಡ ದದ್ದಲ್ ಅವರು ಆರೋಪಿ ನಂ 8ರ ಜತೆ ವಾಟ್ಸ್‌ಆ್ಯಪ್‌ ಚಾಟಿಂಗ್ ಮಾಡಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಳಿಕ ಅವರು ವಾಟ್ಸ್‌ಆ್ಯಪ್‌ ಚಾಟಿಂಗ್ ನಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿದ 3 ಪುಟಗಳ ಹೇಳಿಕೆಯಲ್ಲಿ ಪ್ರಸ್ತಾವಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಸಲ್ಲಿಸಲಾಗಿದೆ.

ರಾಜೀನಾಮೆಗೆ ಆಗ್ರಹ

ಈ ಬೆಳವಣಿಗೆ ಬೆನ್ನಲ್ಲೇ ಶಾಸಕ ಬಸನಗೌಡ ದದ್ದಲ್ ಅವರ ರಾಜೀನಾಮೆಗೆ ಆಗ್ರಹ ಕೇಳಿ ಬಂದಿದೆ. ರಾಯಚೂರು ಜಿಲ್ಲಾ ಜೆಡಿಎಸ್ ನಿಯೋಗದ ವರಿಷ್ಠರು ಎನ್.ಎಸ್.ಬೋಸರಾಜ್ ಮತ್ತು ಶಾಸಕ ಬಸನಗೌಡ ದದ್ದಲ್ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಬಸನಗೌಡ ದದ್ದಲ ಭ್ರಷ್ಟಾಚಾರಕ್ಕೆ ಮೂಲ ಕಾರಣ. ಎಸ್‌ಐಟಿ ಹಾಗೂ ಸಿಬಿಐ ಎನ್.ಎಸ್. ಬೋಸರಾಜು ಹಾಗೂ ಬಸನಗೌಡ ದದ್ದಲ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಬೇಕು ಮತ್ತು ಬಂಧಿಸಬೇಕು ಎಂದು ಜೆಡಿಎಸ್‌ ಒತ್ತಾಯಿಸಿದೆ.

ʼʼಪ್ರಕರಣ ದಾಖಲಾಗುತ್ತಿದ್ದಂತೆ ಕೆಲವರು ಹಣ ಹಿಂದಿರುಗಿಸಿದ್ದಾರೆ. ಹಣ ಹಿಂದಿರುಗಿಸುವಲ್ಲಿ ಶಾಸಕ ಬಸನಗೌಡ ದದ್ದಲ ಪಾತ್ರವಿದೆ. ಜೆಡಿಎಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಹಸ್ತಾಂತರಿಸಲಿದೆʼʼ ಎಂದು ರಾಯಚೂರಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದ್ದಾರೆ.

ಇದನ್ನೂ ಓದಿ: Valmiki Corporation Scam: ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

Exit mobile version