ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ (Congress Government) ಅಸ್ತಿತ್ವಕ್ಕೆ ಬಂದು 65 ದಿನ ಕಳೆಯುವಷ್ಟರೊಳಗೆ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಹಿರಿಯ ಶಾಸಕರಿಗೆ ಸಚಿವರು ಬೆಲೆ ಕೊಡುತ್ತಿಲ್ಲ. ಶಿಫಾರಸುಗಳಿಗೆ ಕ್ಯಾರೇ ಎನ್ನುತ್ತಿಲ್ಲ. ವರ್ಗಾವಣೆ ಮಾಡಿ ಎಂದರೆ ಹಣ ಕೇಳುತ್ತಾರೆ ಎಂದೆಲ್ಲ ದೂರಿದ್ದರು. ಇದು ರಾಜ್ಯ ರಾಜಕಾರಣದಲ್ಲಿ (Karnataka Politics) ಸಾಕಷ್ಟು ಸಂಚಲವನ್ನು ಸೃಷ್ಟಿಸಿತ್ತು. ಈಗ ಇದರ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಚರ್ಚೆ ನಡೆದಿದ್ದು, ಶಾಸಕರ ವರ್ತನೆಗೆ ಹಲವು ಸಚಿವರು ಗರಂ ಆಗಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಅವರು ಮಾತನಾಡಬೇಕು ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲವನ್ನೂ ಆಲಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah), ಶಾಸಕರ ಜತೆಗೆ ಹೇಗಿರಬೇಕು? ಅವರಿಗೆ ಹೇಗೆ ಪ್ರಾಮುಖ್ಯತೆ ಕೊಡಬೇಕು ಎಂದು ಚಿಕ್ಕದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಸಚಿವರ ವಿರುದ್ಧವಾಗಿ ಶಾಸಕರು ಬರೆದಿರುವ ಅಸಮಾಧಾನದ ಪತ್ರದ ವಿಚಾರ ಗುರುವಾರದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗೆ ಒಳಪಟ್ಟಿತ್ತು. ಸರ್ಕಾರ ಬಂದ ಎರಡೇ ತಿಂಗಳಿಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಿಯಾದ ಬೆಳವಣಿಗೆ ಅಲ್ಲ. ವಿಶೇಷ ಅನುದಾನ ಕೊಡಲು ಸಾಧ್ಯ ಇಲ್ಲ ಎಂದು ನೀವೇ ಹೇಳಿದ್ದೀರ ತಾನೇ? ಆದರೂ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿ ಇಲ್ಲ. ಇಲಾಖೆಯಲ್ಲಿ ನಮಗೆ ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಬಿಡಬೇಕು. ಯಾರೋ ಒಬ್ಬರು, ಇಬ್ಬರೋ ಶಾಸಕರಿಗೆ ಸ್ಪಂದಿಸಲ್ಲ ಅಂತ ಹೇಳಿ ಎಲ್ಲರ ವಿರುದ್ಧ ಆರೋಪ ಮಾಡುವುದು ಸರಿ ಅಲ್ಲ ಎಂದು ಕೆಲ ಸಚಿವರು ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: Siddaramaiah Cabinet : ಹಾಲಿನ ದರ ಏರಿಕೆ ಫಿಕ್ಸ್, ಚರ್ಚೆಯಾಗದ ಕೆಜಿ ಹಳ್ಳಿ ಗಲಭೆಯ ತನ್ವೀರ್ ಸೇಠ್ ಪತ್ರ
ಸಚಿವರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು
ಈ ಆಕ್ರೋಶದ ಮಾತುಗಳನ್ನು ಸಹನೆಯಿಂದಲೇ ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರಿಗೆ ಅಲ್ಪ ಸ್ಪಲ್ಪ ಅಸಮಾಧಾನ ಇರೋದು ಸಹಜ. ಆದರೆ, ಎಲ್ಲರನ್ನೂ ಸಮಾಧಾನಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಶಾಸಕರ ಅಭಿಪ್ರಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ ಎಂದು ಬುದ್ಧಿ ಮಾತು ಹೇಳಿದ್ದಾರೆ. ಜತೆಗೆ ಏನೇನು ಮಾಡಬೇಕು? ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಕೆಲ ಸಲಹೆಗಳನ್ನೂ ನೀಡಿದ್ದಾರೆ ಎನ್ನಲಾಗಿದೆ.