ಬಳ್ಳಾರಿ: ಭಗವಂತ ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಿಮ್ಮಲ್ಲಿ ನಾನೊಬ್ಬ ಎಂದು ಸಚಿವ ಬಿ. ಶ್ರೀರಾಮುಲು ಅವರು ಹೇಳುವ ಮೂಲಕ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಿದ್ದಾರೆಂಬ ಕುರುಬ ಸಮುದಾಯದ ಅಸಮಾಧಾನವನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
ಬಳ್ಳಾರಿ ನಗರದಲ್ಲಿ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟಿಸಿ ಮಾತನಾಡುತ್ತಾ, ನಾವು ರಾಜಕೀಯಕ್ಕೋಸ್ಕರ ಮಾತನಾಡುತ್ತೇವೆ, ವೈಯಕ್ತಿಕವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ಏನು ಇರುವುದಿಲ್ಲ ಎಂದರು.
ಅವಕಾಶ ಸಿಕ್ಕರೆ ನಾನು ಮುಖ್ಯಮಂತ್ರಿ?
ನನಗೂ ಬಿಜೆಪಿಯಿಂದ ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿಯಾಗುವ ಅವಕಾಶ ಬಂದರೆ ಆಗಲಿ, ರಾಮುಲು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರನ್ನು ಕೇಳಿದರೆ ಅವರೂ ಒಪ್ಪುತ್ತಾರೆ. ಜಾತಿ ವ್ಯವಸ್ಥೆಯಲ್ಲಿ ಇವೆಲ್ಲಾ ಮಾಡಬೇಕು, ಇವು ರಾಜಕಾರಣದ ತಂತ್ರಗಾರಿಕೆ, ಇದೆಲ್ಲಾ ಮಾಡಿಕೊಂಡು ಹೋದರೆ ಮಾತ್ರ ರಾಜಕಾರಣಕ್ಕೆ ಅರ್ಥ ಬರುತ್ತದೆ ಎಂದರು.
ಹಿಂದುಳಿದ ಜಾತಿ ವಿಚಾರದಲ್ಲಿ ಸಿದ್ದು ನಾನು ಒಂದೇ
ಹಿಂದುಳಿದ ಜಾತಿಗಳನ್ನು ಒಂದು ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮತ್ತು ನಾವು ಮಾಡುತ್ತಿದ್ದೇವೆ. ಹಿಂದುಳಿದ ಸಮುದಾಯಗಳು ಒಂದಾದರೆ ರಾಜ್ಯ ಮತ್ತು ದೇಶದಲ್ಲಿ ಕ್ರಾಂತಿ ಮಾಡಬಹುದು, ನಮ್ಮಲ್ಲಿ ಒಗ್ಗಟ್ಟು ಪ್ರದರ್ಶನ ಆಗಬೇಕು. ಹಿಂದುಳಿದ ಜಾತಿ ವಿಚಾರ ಬಂದಾಗ ನಾನು ಮತ್ತು ಸಿದ್ದರಾಮಯ್ಯ ಎಲ್ಲರೂ ಕೂಡ ಒಂದೆ ಎಂದರು.
ಸಿದ್ದು ಇನ್ನೊಬ್ಬ ದೇವರಾಜ ಅರಸು ಆಗಬೇಕು
ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ರಾಜ್ಯದಲ್ಲಿ ನೀವು ಇನ್ನೊಬ್ಬ ದೇವರಾಜ ಅರಸು ಆಗಬೇಕೆಂದು ನಾನು ಹೇಳಿದ್ದೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಹೇಗೆ ಗೆದ್ದರೆಂದು ಒಮ್ಮೆ ಕೇಳಿ, ಅವರು ಬಹಿರಂಗವಾಗಿ ಹೇಳಲ್ಲ, ರಾತ್ರಿ ಹೋದರೆ ಕಿವಿಯಲ್ಲಿ ಹೇಳುತ್ತಾರೆ. ಹಿಂದುಳಿದ ಸಮುದಾಯವನ್ನು ನಾವು ಬಿಟ್ಟು ಕೊಡುವುದಕ್ಕೆ ರೆಡಿ ಇಲ್ಲ, ಏಕೆಂದರೆ ಅದು ನಮ್ಮ ಸಮುದಾಯ ಎಂದರು.
ನಾನು ಕುರುಬ ಸಮಾಜದ ವಿರೋಧಿಯಲ್ಲ
ನಾನು ಈ ಕಾರ್ಯಕ್ರಮಕ್ಕೆ ಬರುವುದಿಲ್ಲ, ರಾಜಕೀಯವಾಗಿ ಅವರ ನಾಯಕನನ್ನು ಎದುರಿಸುತ್ತಿರುತ್ತೇನೆ, ಕುರುಬ ಸಮುದಾಯಕ್ಕೆ ನನ್ನ ಬಗ್ಗೆ ಬಹಳ ಸಿಟ್ಟು ಇರುತ್ತೆ ಎಂದೆ. ಆದರೆ ಸೋಮಶೇಖರ ರೆಡ್ಡಿ ಹಾಗೇನಿಲ್ಲ ಎಂದು ಕರೆದುಕೊಂಡು ಬಂದರು. ರಾಜಕೀಯದಲ್ಲಿ ನಾನು ಮತ್ತು ಸಿದ್ದರಾಮಯ್ಯನವರು ಶ್ರೇಷ್ಠರಿದ್ದೇವೆ. ಯಾರೂ ಅನ್ಯಥಾ ಭಾವಿಸಬೇಡಿ ಎಂದರು.
ಇದನ್ನೂ ಓದಿ: Amrit Mahotsav | 150 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಸಚಿವ ಶ್ರೀರಾಮುಲು ಅವರಿಂದ ಧ್ವಜಾರೋಹಣ
ಒಮ್ಮೊಮ್ಮೆ ಸಿದ್ದರಾಮಯ್ಯ ಮತ್ತು ನಾನು ಏನೋ ಮಾತನಾಡುತ್ತಿರುತ್ತೇವೆ. ನೀವು ಏನೂ ತಿಳಿದುಕೊಳ್ಳಬಾರದು. ನಾವು ರಾಜಕೀಯಕ್ಕೋಸ್ಕರ ಮಾತನಾಡುತ್ತೇವೆ. ವೈಯಕ್ತಿಕವಾಗಿ ನಮಗೂ ಅವರಿಗೂ ಏನೂ ಇಲ್ಲ. ರಾಮುಲು ಅವರು ಕುರುಬ ಸಮಾಜ ಮತ್ತು ಸಿದ್ದರಾಮಯ್ಯ ವಿರುದ್ಧ ಎಂದು ತಿಳಿದುಕೊಳ್ಳಬಾರದು ಎಂದು ಹೇಳಿದರು.
ನಾನು ಯಾರಿಗೂ ಗುಲಾಮನಲ್ಲ
ಸಿದ್ದರಾಮಯ್ಯ ಮತ್ತು ನಾನು ಎರಡೆರಡು ಕ್ಷೇತ್ರದಲ್ಲಿ ನಿಂತು ಒಂದರಲ್ಲಿ ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದೇವೆ. ನನಗೆ ಯಾವುದೇ ವಿಚಾರ ಹೇಳುವುದಕ್ಕೆ ಯಾರದು ಭಯವಿಲ್ಲ. ನಾನು ಯಾರಿಗೂ ಗುಲಾಮನಲ್ಲ, ನಾನು ಯಾರ ಕೈಯಡಿ ಕೆಲಸ ಮಾಡುತ್ತಿಲ್ಲ ಎಂದರು.
ಸಿದ್ದರಾಮಯ್ಯ ಮತ್ತು ನಾನು ನೋಡುವುದಕ್ಕೆ ವಿರುದ್ಧ. ಆದರೆ ನಾವಿಬ್ಬರೂ ಬಹಳಷ್ಟು ದೋಸ್ತಿಗಳು. ನಾವು ಒಳಗೊಳಗೆ ಏನೋ ಮಾಡಿಕೊಳ್ಳುತ್ತೇವೆ ಎಂದು ಚಟಾಕಿ ಹಾರಿಸಿದರು. ಇಬ್ಬರೂ ರಾಜಕಾರಣದಲ್ಲಿರಬೇಕು. ಒಬ್ಬರು ಇದ್ದು, ಇನ್ನೊಬ್ಬರು ಹೊರಗಡೆ ಹೋಗುವುದಕ್ಕಾಗುವುದಿಲ್ಲ. ಏನೋ ಮಾಡಿಕೊಂಡು ಇಬ್ಬರೂ ವಿಧಾನಸಭೆ ಪ್ರವೇಶ ಮಾಡುತ್ತೇವೆ, ಏಕೆ ಯೋಚನೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಸಿದ್ದರಾಮಾನಂದ ಸ್ವಾಮಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಬಿ.ನಾಗೇಂದ್ರ, ಮೇಯರ್ ರಾಜೇಶ್ವರಿ, ಕುರುಬ ಸಂಘದ ಅಧ್ಯಕ್ಷ ಎರ್ರೆಗೌಡ, ಬುಡಾ ಅಧ್ಯಕ್ಷ ಪಾಲಣ್ಣ ಮತ್ತಿತರರು ಇದ್ದರು.
ಇದನ್ನೂ ಓದಿ: ಸಿದ್ದರಾಮೋತ್ಸವ ನಂತರ ಶ್ರೀರಾಮುಲುಗೆ ಹತಾಶೆ: ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ