Site icon Vistara News

Zameer Ahmed : ಆರ್ಥಿಕ ಸಂಕಷ್ಟದಲ್ಲಿದ್ದ ಅಂತಾರಾಷ್ಟ್ರೀಯ ಕರಾಟೆಪಟು; ಸಚಿವ ಜಮೀರ್‌ರಿಂದ ಬಾಲಕನಿಗೆ ಸ್ವಂತ ದುಡ್ಡಲ್ಲಿ ಏರ್‌ ಟಿಕೆಟ್‌!

Minister Zameer Ahmed Khan helps international karate player boy

ಬೆಂಗಳೂರು: ಸಂಕಷ್ಟದಲ್ಲಿದ್ದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಟುವಾಗಿರುವ (International level karate player) ವಿದ್ಯಾರ್ಥಿಗೆ ಆರ್ಥಿಕ ಸಂಕಷ್ಟ ಇದೆ ಎಂದು ತಿಳಿದ ಸಚಿವ ಜಮೀರ್ ಅಹಮದ್ ಖಾನ್‌ (Zameer Ahmed Khan) ಸ್ಥಳದಲ್ಲಿಯೇ ಸಹಾಯ ಮಾಡಿದರು. ವಿದೇಶದಲ್ಲಿ ನಡೆಯುತ್ತಿರುವ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ (Karate Championship) ಭಾಗವಹಿಸುವ ಸಂಬಂಧ ಬಾಲಕನಿಗೆ ಸ್ವಂತ ದುಡ್ಡಿನಲ್ಲಿ ವಿಮಾನ ಟಿಕೆಟ್‌ ಬುಕ್‌ (Book flight tickets) ಮಾಡಿ ಮಾನವೀಯತೆ ಮೆರೆದರು.

ಇಲ್ಲಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ (KPCC Office) ಅಹವಾಲು ಸ್ವೀಕರಿಸಿದ ಸಚಿವ ಜಮೀರ್‌ ಅಹಮ್ಮದ್‌, ಈ ವೇಳೆ ಬಾಲಕನ ಸಂಕಷ್ಟಕ್ಕೆ ಸ್ಪಂದಿಸಿದರು. ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ (Hebbal Crescent English School) 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್ (Mohammad Tahir Amir) ಎಂಬ ಬಾಲಕ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಜಮೀರ್‌ ಅಹಮ್ಮದ್‌ ಭೇಟಿಗಾಗಿ ಕಾಯುತ್ತಿದ್ದ.

ಕೊನೆಗೂ ಸಿಕ್ಕಿದ ಅವಕಾಶ

ಪ್ರತಿಭೆ ಇದ್ದರೂ ಆರ್ಥಿಕ ಸಂಕಷ್ಟದಿಂದ ವಿದೇಶಕ್ಕೆ ತೆರಳಲು ಆಗುತ್ತಿಲ್ಲ ಎಂದು ಪರಿತಪಿಸುತ್ತಿದ್ದ ಬಾಲಕನಿಗೆ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಅವರನ್ನು ಭೇಟಿ ಮಾಡುವಂತೆ ಪರಿಚಯಸ್ಥರೊಬ್ಬರು ಸಲಹೆ ನೀಡಿದ್ದಾರೆ. ಇದರಂತೆ ಬಾಲಕ ಕೆಪಿಸಿಸಿ ಕಚೇರಿಗೆ ಜಮೀರ್‌ ಭೇಟಿ ನೀಡುವ ಬಗ್ಗೆ ತಿಳಿದುಕೊಂಡು ಅಲ್ಲಿಗೆ ಭೇಟಿ ನೀಡಿದ್ದ. ಕೊನೆಗೆ ಅಲ್ಲಿಗೆ ಬಂದ ಸಚಿವರ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.

ಇಂಡೋನೇಷ್ಯಾಕ್ಕೆ ಟಿಕೆಟ್‌ ಬುಕ್

ಸೆ.‌ 19ರಿಂದ 24ರ ವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ (Jakarta in Indonesia) ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ ಸ್ಪರ್ಧೆ‌ ಆಯೋಜನೆಗೊಂಡಿದೆ. ಈ ಚಾಂಪಿಯನ್‌ಶಿಪ್‌ಗೆ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್ ಆಯ್ಕೆಯಾಗಿದ್ದ. ಆದರೆ, ವಿದೇಶಕ್ಕೆ ಸ್ವಂತ ಖರ್ಚಿನಲ್ಲಿ ಕಳುಹಿಸುವಷ್ಟು ಮನೆಯಲ್ಲಿ ಆರ್ಥಿಕವಾಗಿ ಶಕ್ತರಾಗಿರಲಿಲ್ಲ. ಹೀಗಾಗಿ ತನ್ನ ಸಾಧನೆ ಹಾಗೂ ಸಮಸ್ಯೆ ಬಗ್ಗೆ ವಿವರಿಸಿದ್ದಾನೆ.

ಬಾಲಕನ ಅಹವಾಲು ಆಲಿಸಿದ ಸಚಿವ ಜಮೀರ್‌ ಅಹ್ಮದ್‌ ಖಾನ್‌, ತಕ್ಷಣವೇ ತಮ್ಮ ವೈಯಕ್ತಿಕ ವೆಚ್ಚದಲ್ಲಿ ವಿಮಾನ ಪ್ರಯಾಣಕ್ಕೆ ಟಿಕೆಟ್ ಬುಕ್‌ ಮಾಡಿಸಿದರು. ಸ್ಪರ್ಧೆಗೆ ಹೋಗಿ ಬರುವ ವಿಮಾನ ವೆಚ್ಚ 60 ಸಾವಿರ ರೂಪಾಯಿಯನ್ನು ಭರಿಸಿ ಸ್ಥಳದಲ್ಲಿಯೇ ಟಿಕೆಟ್ ಬುಕ್‌ ಮಾಡಿಸಿ ಶುಭ ಹಾರೈಸಿದರು.

ಇದನ್ನೂ ಓದಿ: Cauvery water dispute : ಕರ್ನಾಟಕದ ಜಲ ಸಂಕಷ್ಟಕ್ಕೆ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ: ಸಹಕಾರ ಕೋರಿದ ಸಿಎಂ ಸಿದ್ದರಾಮಯ್ಯ

ಟ್ವೀಟ್‌ನಲ್ಲಿ ವಿಷಯ ಹಂಚಿಕೊಂಡ ಸಚಿವ

“ಹೆಬ್ಬಾಳದ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ತಾಹೀರ್ ಆಮೀರ್ ಅವರು ಸೆ.19 ರಿಂದ 24 ವರೆಗೆ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದು, ಆರ್ಥಿಕ ಪರಿಸ್ಥಿತಿಯ ಕಾರಣ ಸ್ಪರ್ಧೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಅವರಿಗೆ ನನ್ನ ವೈಯಕ್ತಿಕ ಹಣದಲ್ಲಿ ಜಕಾರ್ತಾಗೆ ಹೋಗಿ ಬರುವ ವಿಮಾನ ಪ್ರಯಾಣ ವೆಚ್ಚ 60 ಸಾವಿರ ರೂ. ನೀಡಿ, ಟಿಕೆಟ್ ಬುಕ್ ಮಾಡಿಸಿಕೊಟ್ಟು ಶುಭ ಹಾರೈಸಿದೆ” ಎಂದು ಜಮೀರ್‌ ಅಹ್ಮದ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Exit mobile version