ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಆಹ್ವಾನಿಸಿರಲಿಲ್ಲ ಎಂಬುದರಿಂದ ಆರಂಭವಾದ ರಾಜಕೀಯ ವಾಗ್ವಾದ ಇದೀಗ ಮತ್ತಷ್ಟು ಪ್ರತಿಮೆಗಳನ್ನು ಸ್ಥಾಪನೆ ಮಾಡುವ ಕುರಿತು ಜಟಾಪಟಿಗೆ ಕಾರಣವಾಗಿದೆ.
ಕೆಂಪೇಗೌಡರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೆ ಘೋಷಣೆ ಮಾಡಿದ್ದು, ಜಗಜ್ಯೋತಿ ಬಸವಣ್ಣನವರ ಪ್ರತಿಮೆಯನ್ನೂ ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಜಾತಿ ರಹಿತ, ದರ್ಮ ಸ್ಥಾಪನೆ ಆಗಬೇಕು ಎಂದು ಬಯಸಿದವರು ಬಸವಣ್ಣ, ಕುವೆಂಪು, ಕನಕದಾಸರು. ಇವರೆಲ್ಲರೂ ನಾಡಿನ ಮಹಾನ್ ಪುರುಷರು. ಬಸವಣ್ಣನವರ ಪ್ರತಿಮೆ ಸ್ಥಾಪನೆ ಮಾಡಲು ಕೂಡಲೇ ಯೋಜನೆ ರೂಪಿಸಬೇಕು. ಅದನ್ನು ಕಾರ್ಯಗತಗೊಳಿಸಬೇಕು. ಇದು ಸ್ವಾಭಾವಿಕವಾಗಿ ಎಲ್ಲಾ ಒತ್ತಾಯ. ಅದರ ಜತೆಗೆ ಕನಕದಾಸ, ವಿವೇಕಾನಂದ, ಕುವೆಂಪು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣಗೆ ಪಕ್ಷಾತೀತವಾಗಿ ಗೌರವ ಸಲ್ಲಿಸಬೇಕು.
ಕೆಆಸ್‌ಎಸ್ ಡ್ಯಾಮ್‌ನಲ್ಲಿ ಒಡೆಯರ್‌ರವರ ಪ್ರತಿಮೆ ಇರಲಿಲ್ಲ. ನಾನೇ ಆಸಕ್ತಿ ವಹಿಸಿ ಒಡೆಯರ್ ಹಾಗೂ ವಿಶ್ವೇಶ್ವರಯ್ಯ ಅವರ ಮೂರ್ತಿ ಮಾಡಿಸಿದೆ. ಇದಕ್ಕಾಗಿ 10 ಕೋಟಿ ರೂ. ಹಣ ಕೊಡಲಾಗಿತ್ತು. ಅದು ಈಗ ಅಂತಿಮ ಹಂತದಲ್ಲಿದೆ. ಇದನ್ನು ಮಾಡಿಸಿ ಎಂದು ನನಗೆ ಯಾರೂ ಹೇಳಿರಲಿಲ್ಲ. ಇದನ್ನು ಸಹ ನಾವೇ ಮಾಡಿದ್ದು ಎಂದು ಬಿಜೆಪಿಯವರು ಉದ್ಘಾಟನೆ ಮಾಡಿ ಹೇಳಬಹುದು. ಸಿದ್ದರಾಮಯ್ಯ ಕಾಲದಲ್ಲಿ ಮೂರ್ತಿ ಮಾಡಿದ್ದು. ಕೆಂಪೇಗೌಡರ ಪ್ರತಿಮೆ ಅನಾವರಣ ರಾಜಕೀಯ ಪ್ರೇರಿತ. ಅವರು ಕೆಂಪೇಗೌಡರಿಗೆ ಗೌರವ ಸಲ್ಲಿಸಬೇಕು ಎಂದು ಕಾರ್ಯಕ್ರಮ ಮಾಡಿಲ್ಲ ಎಂದರು.
ಬಸವಣ್ಣನವರ ಪ್ರತಿಮೆ ಸ್ಥಾಪನೆ ಬಗ್ಗೆ ಪ್ರತಿಕ್ರಿಯಿಸಿದ ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಧಾನಸೌಧದಲ್ಲಿ ಖಂಡಿತವಾಗಿಯೂ ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ. ಯಾರಿಗೆ ನಿರ್ಮಾಣ ಮಾಡುವುದಕ್ಕೆ ಆಗಿಲ್ಲವೋ, ಅದನ್ನು ನಾವು ಮಾಡುತ್ತೇವೆ. ಈಗಾಗಲೇ ಮುಖ್ಯಮಂತ್ರಿಗಳು ಇದನ್ನು ಘೋಷಣೆ ಮಾಡಿದ್ದಾರೆ. ಆದಷ್ಟು ಬೇಗ ಕಾರ್ಯರೂಪಕ್ಕೆ ತರುತ್ತೇವೆ ಎಂದರು.
ಇದನ್ನೂ ಓದಿ | ಹಿಂದು ವಿವಾದ ಬೆನ್ನಲ್ಲೇ ಟಿಪ್ಪು ಪ್ರತಿಮೆಯ ಕಿಡಿ; ಕಾಂಗ್ರೆಸ್ ನಾಯಕರಿಗೆ ಚೆಲ್ಲಾಟ, ಡಿಕೆಶಿಗೆ ಸಂಕಟ!