ನವದೆಹಲಿ: ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ (Anna Bhagya) ಯೋಜನೆಗೆ ಅಕ್ಕಿ ಒದಗಿಸುವ ಟಾಸ್ಕ್‌ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ಕೇಂದ್ರ ಆಹಾರ ಸಚಿವ ಪೀಯೂಷ್ ಗೋಯೆಲ್ ಅವರನ್ನು ಕೊನೆಗೂ ಭೇಟಿಯಾಗಿ ಮಾತುಕತೆ ನಡೆಸಿದರಾದರೂ, ಕೇಂದ್ರ ಸರ್ಕಾರ ಅಕ್ಕಿ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮೂರು ದಿನದ ಹಿಂದೆ ನವದೆಹಲಿಗೆ ತೆರಳಿದ್ದ ಮುನಿಯಪ್ಪ, ಪೀಯೂಷ್ ಗೋಯೆಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಸಂಪುಟ ಸಹೋದ್ಯೋಗಿ ಡಾ. ಶಿವಾನಂದ ಪಾಟೀಲ್ ಅವರು ಗೋಯೆಲ್ ಭೇಟಿ ಮಾಡಿದ್ದರೂ ಮುನಿಯಪ್ಪ ಅವರಿಂದ ಸಾಧ್ಯವಾಗಿರಲಿಲ್ಲ. ಬೇಸರದಿಂದ ಬೆಂಗಳೂರಿಗೆ ಆಗಮಿಸಿದ್ದ ಮುನಿಯಪ್ಪ, ದೇವರ ಮೇಲೆ ಭಾರ ಹಾಕಿದ್ದರು. ಕೊನೆಗೂ ಪೀಯೂಷ್ ಗೋಯೆಲ್ ಶುಕ್ತವಾರ ಮದ್ಯಾಹ್ನ ನವದೆಹಲಿಯಲ್ಲಿ ಮುನಿಯಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಹೊರಬಂದ ಮುನಿಯಪ್ಪ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾನು ಆಶಾಭಾವನೆಯಿಂದ ಬಂದಿದ್ದೆ. ಪೀಯೂಷ್ ಗೋಯೆಲ್ ನಂಗೆ ಅಕ್ಕಿ ಕೊಡ್ತಾರೆ ಅಂತ ಅನ್ಕೊಂಡಿದ್ದೆ. ಆದ್ರೆ ಸಚಿವರು ಅಕ್ಕಿ ಕೊಡೋಕೆ ಆಗೋಲ್ಲ ಅಂತ ಹೇಳ್ಬಿಟ್ರು. ಕೇಂದ್ರದ ಬಳಿ ಅಕ್ಕಿ ಸ್ಟಾಕ್ ಇದೆ ಅಂತ ಎಷ್ಟೇ ಹೇಳಿದರೂ ಅವರು ಒಪ್ಪಿಲ್ಲ. ಅವರು ಅಕ್ಕಿ ಕೊಡೋಲ್ಲ ಅಂದ್ರು. ಹಣ ಕೊಡ್ತೀವಿ ಅಂದ್ರು ಸಹ ಕೊಟ್ಟಿಲ್ಲ. ಸಚಿವರು ಹಾರಿಕೆ ಉತ್ತರ ಕೊಟ್ರು ಎಂದು ಬೇಸರ ವ್ಯಕ್ತಪಡಿಸಿದರು.
ಜುಲೈ 1ಕ್ಕೆ ಅಕ್ಕಿ ಕೊಡ್ಬೇಕು, ಆದ್ರೆ ಸ್ವಲ್ಪ ತಡವಾಗಬಹುದು ಎಂದ ಮುನಿಯಪ್ಪ, ನಾವು 34 ರೂಪಾಯಿ ಪ್ರತಿ ಕೆಜಿ ಗೆ ಕೊಡ್ತೀವಿ ಅಂದ್ರು ಸಹ ಅವ್ರು ಅಕ್ಕಿ ಕೊಡ್ತಿಲ್ಲ. 31 ರೂಪಾಯಿಗೆ ಓಪನ್ ಮಾರ್ಕೆಟ್‌ನಲ್ಲಿ ಅಕ್ಕಿ ಸೇಲ್ ಮಾಡ್ತಿದ್ದಾರೆ. ನಾವು 34 ರೂ. ಕೊಡುತ್ತೇವೆ ಎಂದರೂ ಆಗೋಲ್ಲ ಎನ್ನುತ್ತಿದ್ದಾರೆ. ಇದರ ಹಿಂದಿರೋ ಅಂಶನೇ ನನಗೆ ಅರ್ಥ ಆಗ್ತಿಲ್ಲ. ಕೇಂದ್ರ ಸರ್ಕಾರದ ಹತ್ರ ಅಕ್ಕಿ ಸ್ಟಾಕ್ ಇದೆ. ಆದ್ರೂ ಅಕ್ಕಿ ನಮಗೆ ಕೊಡ್ತಿಲ್ಲ. ಇದ್ರ ಹಿಂದೆ ರಾಜಕೀಯ ದುರುದ್ದೇಶ ಕಾಣ್ತಾ ಇದೆ ಎಂದಿದ್ದಾರೆ.
ರಾಜ್ಯಕ್ಕೆ ಕೇಂದ್ರ ಅಕ್ಕಿ ನೀಡದೆ ಅನ್ಯಾಯ ಮಾಡುತ್ತಿದೆ ಅಂತ ಕಾಂಗ್ರೆಸ್ ಆರೋಪ ಮಾಡುತ್ತಾ ಬಂದಿದೆ. ಪೀಯೂ ಗೊಯಲ್ ಭೇಟಿಗೂ ಸಹ ಸಮಯಾವಕಾಶ ನೀಡ್ತಿಲ್ಲ ಅಂತ ಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಗರಿಬ್ ಕಲ್ಯಾಣ ಯೋಜನೆ ಅಡಿಯಲ್ಲಿ ಈಗಾಗಲೇ 5 ಕಿಲೋ ಅಕ್ಕಿಯನ್ನು 80 ಕೋಟಿ ಜನರಿಗೆ ನೀಡುತ್ತಿದೆ. ಉಳಿದ 60 ಕೋಟಿ ಜನರಿಗೆ ಅಕ್ಕಿ ಬೆಲೆ ಏರಿಕೆ ಬಿಸಿ ತಟ್ಟಬಾರದು ಎಂಬ ಉದ್ದೇಶದಿಂದ ಖಾಸಗಿ ಟ್ರೇಡರ್ ಗಳಿಗೆ ಅಕ್ಕಿ ಮಾರಾಟ ಮಾಡಲು ನಿರ್ಧಾರ ಮಾಡಿದೆ. ರಾಜ್ಯಗಳಿಗೆ ಸದ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಕೆ ಇಲ್ಲ ಎಂದು ಹೊಸ ನೀತಿ ಪ್ರಕಟ ಮಾಡಿದೆ. ಕರ್ನಾಟಕದಂತೆ ಬೇರೆ ಮತ್ತಿತರ ರಾಜ್ಯಗಳೂ ಉಚಿತ ಅಕ್ಕಿ ಘೋಷಣೆ ಮಾಡಿದಲ್ಲಿ ಭವಿಷ್ಯದಲ್ಲಿ FCIಗೆ ಹೊರೆ ಆಗುವ ಸಾಧ್ಯತೆ ಕೂಡ ಇದೆ. ಆಗ ಉಚಿತ ಅಕ್ಕಿ ನೀಡುವ ರಾಜ್ಯಗಳಿಗೆ ಹೆಚ್ಚು ಅಕ್ಕಿ ಪೂರೈಕೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಕೇಂದ್ರದಿಂದ ಅಕ್ಕಿ ಪೂರೈಕೆ ಸ್ಥಗಿತ ಮಾಡಿದೆ.
ಇದನ್ನೂ ಓದಿ: Congress Guarantee: ಹೋದ ದಾರಿಗೆ ಸುಂಕವಿಲ್ಲ ಸಿದ್ದರಾಮಯ್ಯ!: ಅಕ್ಕಿಗಾಗಿ ತುಳಿದ ಸಂಘರ್ಷದ ಮಾರ್ಗವೇ ಮುಳುವಾಯಿತೇ?