Site icon Vistara News

Minor girl found dead : ಮರದಲ್ಲಿ ಶವವಾಗಿ ಪತ್ತೆಯಾದಳು 15ರ ಬಾಲಕಿ; ಸಂಬಂಧಿಕ ಬಾಲಕರೇ ಏನಾದರೂ ಮಾಡಿದರೇ?

Eramma who found dead

ರಾಯಚೂರು: ಇನ್ನೂ ಕೇವಲ 15 ವರ್ಷದ, ಎಲ್ಲರ ಜತೆಗೆ ಆಟವಾಡಿಕೊಂಡು ಖುಷಿ ಖುಷಿಯಾಗಿದ್ದ ಪುಟ್ಟ ಹುಡುಗಿಯೊಬ್ಬಳು ಮರದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅವಳ ಶವ ಮರದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದೆ (Minor girl found dead). ಮೇಲ್ನೋಟಕ್ಕೆ ನೋಡಿದರೆ ಆಕೆ ತಾನಾಗಿ ಆತ್ಮಹತ್ಯೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಹಾಗಿದ್ದರೆ ಯಾರಾದರೂ ಕೊಂದು ನೇತು ಹಾಕಿದರೇ? ಹೌದಾಗಿದ್ದರೆ ಯಾರು? ಈ ಎಲ್ಲ ಪ್ರಶ್ನೆಗಳೊಂದಿಗೆ (Murder or suicide) ಭಯದಿಂದ ನಡುಗುತ್ತಿದೆ ರಾಯಚೂರು (Raichur News) ತಾಲೂಕಿನ ಕೆರೆಬುದೂರು ಗ್ರಾಮ.

ಕೆರೆಬುದೂರಿನ ಈರಮ್ಮ ಎಂಬ 15 ವರ್ಷದ ಬಾಲಕಿಯೇ ಶವವಾಗಿ ಪತ್ತೆಯಾದವಳು. ಆಕೆಯ ಜತೆಗೆ ಆಟವಾಡುತ್ತಿದ್ದ, ಸಂಬಂಧಿಕರೇ ಆಗಿರುವ ಅಪ್ರಾಪ್ತ ಬಾಲಕರೇ ಆಕೆಯನ್ನು ಏನಾದರೂ ಮಾಡಿದರೇ ಎನ್ನುವ ಭಯ ಅಲ್ಲಿ ಕಾಡುತ್ತಿದೆ. ಪೊಲೀಸರು ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈರಮ್ಮ ಅವರ ಕುಟುಂಬದ ಮೂಲ ಆಂಧ್ರ ಪ್ರದೇಶದ್ದು. ಈರಮ್ಮ ಪೆದ್ದಣ್ಣ ಎಂಬವರ ಮಗಳು. ಈರಮ್ಮ ಫಿನಾಯಿಲ್ ಮಾರಾಟ ಮಾಡುತ್ತಿದ್ದಳು. ಪೆದ್ದಣ್ಣ ಮತ್ತು ಅಣ್ಣ -ತಮ್ಮಂದಿರೆಲ್ಲ ಗಿಲ್ಲೆಸುಗೂರಿನಲ್ಲಿ ವಾಸವಾಗಿದ್ದಾರೆ. ಇದರ ಜತೆಗೆ ಕೆಲವರು ಇತರ ಸಂಬಂಧಿಕರು ಇದ್ದಾರೆ.

ಹೀಗಿದ್ದಳು ಈರಮ್ಮ

ಸಂಬಂಧಿಕರ ಮಕ್ಕಳದೇ ಆದ ಮೂವರು ಅಪ್ರಾಪ್ತರು ಈರಮ್ಮಳನ್ನು ಕೊಲೆ ಮಾಡಿ ನೇಣಿಗೆ ಹಾಕಿರಬಹುದೇ ಎಂಬ ದೊಡ್ಡ ಸಂಶಯವೊಂದು ಇಲ್ಲಿ ಮನೆ ಮಾಡಿದೆ. ಇದಕ್ಕೆ ಪೂರಕವಾಗಿ ಮೃತ ಈರಮ್ಮಳನ್ನು ಪ್ರೀತಿಸುವಂತೆ ಒಬ್ಬ ಬಾಲಕ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ಈರಮ್ಮ ಇದನ್ನು ವಿರೋಧಿಸಿದ್ದಾಳೆ. ಇದೇ ಸಿಟ್ಟಿನಲ್ಲಿ ಏನೋ ಎಡವಟ್ಟು ಆಗಿದೆ ಎನ್ನುವುದು ಗುಮಾನಿ.

ಮೂವರು ಮಕ್ಕಳು ಸೇರಿ ಈರಮ್ಮಳ ಮೇಲೆ ಒತ್ತಡ ಹಾಕಿದ್ದಾರೆ. ಆಕೆ ಒಪ್ಪದೆ ಇದ್ದಾಗ ಬಲ ಪ್ರಯೋಗ ಮಾಡಲಾಗಿದೆ ಎಂಬ ಆರೋಪವಿದೆ. ಅವರೇ ಆಕೆಯನ್ನು ಕೊಂದು ನೇಣಿಗೆ ಹಾಕಿದರೇ ಎಂಬ ಬಗ್ಗೆ ಸಂಶಯ ಜೋರಾಗಿದೆ. ಇದೀಗ ಇಡಪನೂರು ಪೊಲೀಸರು ಈ ವಿಚಾರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : Murder Case : ಆಸ್ತಿಗಾಗಿ ಅಣ್ಣನನ್ನೇ ಅಟ್ಟಾಡಿಸಿ ಚೂರಿ ಹಾಕಿದ ತಮ್ಮಂದಿರು

ಹೆತ್ತ ತಾಯಿಯಿಂದಲೇ ಮಗಳ ಕೊಲೆ

ತುಮಕೂರು: ಹೆತ್ತ ತಾಯಿಯೇ ನನ್ನ ಆರು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಭಯಾನಕ ಘಟನೆಯೊಂದು ನಡೆದಿದೆ. ತುಮಕೂರಿನ ಶಾಂತಿ ನಗರದಲ್ಲಿ ನಡೆದ ಈ ಘಟನೆ ಭಾರಿ ಆತಂಕವನ್ನು ಸೃಷ್ಟಿಸಿದೆ.

ತುಮಕೂರಿನ ಶಾಂತಿನಗರದಲ್ಲಿ ವಾಸವಾಗಿರುವ ಹೇಮಲತಾ ಎಂಬಾಕೆಯೇ ಕೊಲೆ ಮಾಡಿದ ದುಷ್ಟ ತಾಯಿ. ಆಕೆ ತನ್ನ ಆರು ವರ್ಷದ ಮಗಳು ತನ್ವಿತಾಳನ್ನು ಭೀಕರವಾಗಿ ಕೊಲೆ ಮಾಡಿದ್ದಾಳೆ.

ಶುಕ್ರವಾರ ಮನೆಯಲ್ಲಿದ್ದ ವೇಳೆ ಒಮ್ಮಿಂದೊಮ್ಮೆಗೆ ರೊಚ್ಚಿಗೆದ್ದ ಹೇಮಲತಾ ಮಗಳನ್ನು ಕೊರಳು ಕಟ್ಟಿಸಿ ಕೊಂದು ಹಾಕಿದ್ದಾಳೆ. ಮಗುವಿನ ಆರ್ತನಾದವನ್ನು ಕೇಳಿ ಅಕ್ಕಪಕ್ಕದವರು ಓಡಿ ಬಂದು ಆಕೆಯ ಕೈಯಿಂದ ಮಗುವನ್ನು ಬಿಡಿಸಿದಾಗ ತನ್ವಿತಾ ಪ್ರಾಣವನ್ನೇ ಕಳೆದುಕೊಂಡಿದ್ದಳು.

ತಾಯಿ ಹೇಮಲತಾಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಇದು ಕೊಲ್ಲುವಷ್ಟರ ಮಟ್ಟಿಗೆ ಏರಿದ್ದು ಹೇಗೆ? ಇಷ್ಟೆಲ್ಲ ಜೋರಾದ ಅಸ್ವಸ್ಥತೆ ಇದ್ದರೆ ಆಕೆಯ ಜತೆ ಈ ಪುಟ್ಟ ಮಗಳನ್ನು ಬಿಟ್ಟು ಹೋಗಿದ್ದು ಯಾಕೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ.

ತುಮಕೂರಿನ ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾಯಿ ಹೇಮಲತಾಳನ್ನು ಬಂಧಿಸಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version