Site icon Vistara News

Courageous woman : ಹಳಿ ದಾಟುತ್ತಿದ್ದಾಗಲೇ ಹೊರಟೇಬಿಟ್ಟಿತು ರೈಲು; ಅಡಿಯಲ್ಲಿ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು?

Woman trapped under goods train

ಯಲಹಂಕ: ಆಯುಸ್ಸು ಒಂದು ಗಟ್ಟಿ ಇದ್ರೆ ಸತ್ರೂ ಬದುಕಿ ಬರಬಹುದು ಅನ್ನೋದನ್ನು ಆಗಾಗ ಕೇಳ್ತಾ ಇರ್ತೇವೆ. ಇಲ್ಲೊಬ್ಬ ಮಹಿಳೆಗೂ ಹಾಗೇ ಆಗಿದೆ. ರೈಲೊಂದು ಯಮರೂಪಿಯಾಗಿ ಪಕ್ಕಕ್ಕೆ ಬಂದು ನಿಂತಾಗ ಆಕೆ ಮೆರೆದ ಧೈರ್ಯ ಮತ್ತು ಸಮಯಪ್ರಜ್ಞೆ (Time sense) ಆಕೆಯ (Courageous woman) ಜೀವವನ್ನು ಉಳಿಸಿದೆ (Miraculous Escape). ಹಾಗಿದ್ದರೆ ಆಕೆಗೆ ಏನಾಗಿತ್ತು ಮತ್ತು ಆಕೆ ಬದುಕಿದ್ದು ಹೇಗೆ? (How woman escaped from death) ಈ ಸ್ಟೋರಿ ನೋಡಿ!

ಬೆಂಗಳೂರು ಹೊರವಲಯದ ಯಲಹಂಕ ಸಮೀಪದ ರಾಜಾನುಕುಂಟೆಯಲ್ಲಿ ರೈಲು ಹಳಿ (Railway track) ಬರುತ್ತದೆ. ಅದನ್ನು ದಾಟಿ ಹೋಗಲು ಕಾಲು ದಾರಿಯೂ ಇದೆ. ರೈಲು ಬಂದಾಗ ಜನರು ಕಾದು ನಿಂತು ದಾಟುತ್ತಾರೆ. ಈ ರಸ್ತೆಯಲ್ಲಿ ಆಗಾಗ ಗೂಡ್ಸ್‌ ರೈಲು ಅಡ್ಡಲಾಗಿ ನಿಂತಿರುತ್ತದೆ. ಸಾಮಾನ್ಯವಾಗಿ ಜನರು ನಿಂತ ರೈಲಿನ ಎರಡು ಬೋಗಿಗಳನ್ನು ಸೇರಿಸುವ ಜಾಗದಲ್ಲಿ ಬಗ್ಗಿಕೊಂಡು ದಾಟುತ್ತಾರೆ.

ಸೋಮವಾರ ಆ ಮಹಿಳೆ ಕೂಡಾ ಹಾಗೆಯೇ ಹಳಿ ದಾಟಲು ಮುಂದಾಗಿದ್ದರು. ನಿಂತಿದ್ದ ಗೂಡ್ಸ್ ರೈಲಿನ ಕೆಳಗೆ ನುಗ್ಗಿ ಹಳಿ ದಾಟಲು ಯತ್ನಿಸುತ್ತಿದ್ದಂತೆಯೇ (Woman trapped between track and train) ಒಮ್ಮಿಂದೊಮ್ಮೆ ರೈಲು ಹೊರಟೇ ಬಿಟ್ಟಿತು. ನಿಜವೆಂದರೆ, ಒಳಗೆ ಹೋಗಿರುವ ಮಹಿಳೆಗೆ ಹಳಿ ದಾಟಲು ಬೇಕಿದ್ದಿದ್ದು ಕೇವಲ ಒಂದೆರಡು ಸೆಕೆಂಡ್‌ ಮಾತ್ರ. ಆದರೆ, ಅಲ್ಲಿ ಅಷ್ಟು ಕೂಡಾ ಸಮಯ ಇರಲಿಲ್ಲ. ರೈಲು ಹೊರಟೇ ಬಿಟ್ಟಿತ್ತು.

ಮಹಿಳೆ ಬಗ್ಗಿ ನಿಂತಿದ್ದರು. ಒಂದು ಕ್ಷಣ ಹೆಚ್ಚು ಕಡಿಮೆಯಾದರೂ ರೈಲಿನ ಬೋಗಿಯ ಭಾಗ ಅವರನ್ನು ಕೆಡವಿ ಅವರ ಮೇಲೆ ಸಾಗಿ ಹೋಗುತ್ತಿತ್ತು. ಆಗ ಆ ಮಹಿಳೆಗೆ ಎಲ್ಲಿಂದ ಉಕ್ಕಿಬಂತೋ ಸಮಯಪ್ರಜ್ಞೆ ಕೂಡಲೇ ಅವರು ಹಳಿಗಳ ಮೇಲೆ ಉದ್ದಕ್ಕೆ ಮಲಗಿಬಿಟ್ಟರು!

ರೈಲಿನಡಿ ಸಿಲುಕಿ ಬಚಾವಾಗಿ ಬಂದ ಮಹಿಳೆಗೆ ಬಂಧುಗಳಿಂದ ಸಾಂತ್ವನ

ಮಲಗಿದಲ್ಲಿಗೇ ಮುಗಿಯುವುದಿಲ್ಲ. ಒಂದು ರೈಲು ತನ್ನ ಮೇಲೆ ಹರಿದು ಹೋಗುತ್ತಿದೆ ಎನ್ನುವ ಭಯವೇ ಸಾಕು. ಸಾಮಾನ್ಯದವರಾದರೆ ಎದೆಯೊಡದೇ ಸತ್ತು ಹೋಗಬಹುದು! ಜತೆಗೆ ತಲೆಯನ್ನು ಸ್ವಲ್ಪ ಎತ್ತಿದರೂ ಅದು ರೈಲಿನ ಅಡಿಗೆ ಬಡಿಯುವ ಅಪಾಯವಿತ್ತು. ಆದರೆ, ಮಹಿಳೆ ಅದೆಲ್ಲವನ್ನೂ ನಿಭಾಯಿಸಿಕೊಂಡು ರೈಲುಪೂರ್ತಿಯಾಗಿ ದಾಟಿ ಹೋಗುವವರೆಗೂ ಹಾಗೆಯೇ ಮಲಗಿದ್ದರು. ರೈಲು ದಾಟಿ ಹೋದಮೇಲೆಯೇ ಆಕೆ ಅಲ್ಲಿಂದ ಎದ್ದು ಬಂದರು!

ಇಷ್ಟೆಲ್ಲ ಆದರೂ ಆ ಮಹಿಳೆ ಸ್ವಲ್ಪವೂ ಭಯಗೊಂಡಿರಲಿಲ್ಲ. ನಾನು ಆರಾಮಾಗಿದ್ದೇನೆ ಎಂದು ಹೇಳಿಕೊಂಡರು. ಆಕೆ ಅಲ್ಲಿಂದ ಎದ್ದುಬರುತ್ತಿದ್ದಂತೆಯೇ ಆಕೆಯ ಬಂಧುವೊಬ್ಬರು ಓಡಿ ಹೋಗಿ ಅವರನ್ನು ತಬ್ಬಿಕೊಂಡರು.

ಇದನ್ನೂ ಓದಿ: Viral News : ಸೀರೆ ಎತ್ತಿ ವೆಡ್ಡಿಂಗ್​ ಫೋಟೋಶೂಟ್​ ಮಾಡಿದ ಯುವತಿ; ಹಾವು ಕಾಣ್ತಿದೆ ಎಂದ ನೆಟ್ಟಿಗರು

ಮಹಿಳೆ ರೈಲಿನಡಿ ಸಿಲುಕಿದ್ದನ್ನು ನೋಡಿ ಚಡಪಡಿಸಿದ ನಾಯಿ, ಬದುಕಿ ಬಂದಾಗ ಪಕ್ಕಕ್ಕೆ ಬಂದು ನಿಂತಿತು.

ಹಾಗೆ ಸುಧಾರಿಸಿಕೊಂಡ ಮಹಿಳೆ ತಾನು ಬದುಕಿನ ಬಂದ ಕಥೆಯನ್ನು ಹೇಳಿಕೊಂಡರು. ತಾನು ದಾಟುತ್ತಿದ್ದಾಗಲೇ ರೈಲು ಚಲಿಸಲು ಆರಂಭಿಸಿದ್ದು, ಏನು ಮಾಡಬೇಕು ಎಂದು ತೋಚದೆ ಎದೆ ಗಟ್ಟಿ ಮಾಡಿಕೊಂಡು ಅಲ್ಲೇ ಮಲಗಿದ್ದು, ರೈಲಿನ ಸದ್ದು ಕೇಳಿದರೆ, ನೋಡಿದರೆ ಎದೆಯೊಡೆಯಬಹುದು ಎಂದು ಕಣ್ಣು ಮತ್ತು ಕಿವಿಗಳೆರಡನ್ನೂ ಮುಚ್ಚಿಕೊಂಡಿದ್ದನ್ನು ಆಕೆ ನೆನಪಿಸಿಕೊಂಡರು.

ಮಹಿಳೆಯ ಈ ಸಾಹಸ, ಆಕೆ ರೈಲು ಹಳಿ ಮೇಲೆ ಮಲಗಿದ್ದ ದೃಶ್ಯ ಸ್ಥಳಿಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಮಯಪ್ರಜ್ಞೆಗೆ ಒಂದು ದೊಡ್ಡ ಉದಾಹರಣೆಯಾಗಿ ದಾಖಲಾಗಿದೆ. ಬದುಕಿಬಂದ ಈ ಮಹಿಳೆಯ ಸಾಹಸ ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ.

ಮಹಿಳೆ ಸಿಕ್ಕಿಬಿದ್ದ ಆ ಭಯಾನಕ ದೃಶ್ಯವನ್ನು ಇಲ್ಲಿ ನೋಡಿ..

ಇದು ಎಂದಿನ ಕಥೆ… ಮುಕ್ತಿ ಯಾವಾಗ?

ಅಂದ ಹಾಗೆ ರಾಜಾನುಕುಂಟೆಯ ಈ ಪರಿಸರದಲ್ಲಿ ಇದು ಎಂದಿನ ಗೋಳು. ಅದ್ದಿಗಾನಹಳ್ಳಿಯಿಂದ ರಾಜಾನುಕುಂಟೆಗೆ ಬರಲು ಇರುವ ಏಕೈಕ ಮಾರ್ಗ ಇದಾಗಿದ್ದು, ರೈಲುಹಳಿ ದಾಟಿಕೊಂಡೇ ಬರಬೇಕು. ತ್ರೀವೇ ಟ್ರಾಫಿಕ್‌ ಹೊಂದಿರುವ ಅತಿದಟ್ಟಣೆಯ ಟ್ರ್ಯಾಕ್‌ ಇದಾಗಿರುವುದರಿಂದ ಯಾವಾಗಲೂ ಒಂದಲ್ಲ ಒಂದು ಟ್ರ್ಯಾಕ್‌ನಲ್ಲಿ ರೈಲು ನಿಂತೇ ಇರುತ್ತದೆ. ಹೀಗಾಗಿ ರೈಲಿನ ಕೆಳಗೆ ನುಗ್ಗಿ ಸಂಚರಿಸುವ ಪರಿಸ್ಥಿತಿ ಇದ್ದೇಇದೆ. ಈ ಸಮಸ್ಯೆಯಿಂದ ನಮಗೆ ಮುಕ್ತಿ ಯಾವಾಗ ಎಂದು ಕೇಳುತ್ತಾರೆ ಇಲ್ಲಿನ ಜನ.

Exit mobile version