Site icon Vistara News

Mischievous Girls : ಕಡಿಮೆ ಅಂಕ ನೀಡಿದ ಶಿಕ್ಷಕಿ ವಾಟರ್ ಬಾಟಲ್‌ಗೆ ಮಾತ್ರೆ ಹಾಕಿದ ವಿದ್ಯಾರ್ಥಿನಿಯರು!

putting tablet in Drinking water bottle

ಉಳ್ಳಾಲ (ಮಂಗಳೂರು): ಶಾಲಾ ಪರೀಕ್ಷೆಯ ಗಣಿತ ವಿಷಯದಲ್ಲಿ (Mathematics Exam) ಕಡಿಮೆ ಅಂಕ ನೀಡಿದರೆಂಬ ದ್ವೇಷಕ್ಕೆ ಆರನೇ ತರಗತಿ ವಿದ್ಯಾರ್ಥಿನಿಯರಿಬ್ಬರು (Mischievous Girls) ಗಣಿತ ಶಿಕ್ಷಕಿಯ (Maths Teacher) ನೀರಿನ ಬಾಟಲಿಗೆ ಅವಧಿ ಮುಗಿದ ಮಾತ್ರೆ ಹಾಕಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಈ ಮಾತ್ರೆ ಬೆರೆತ ನೀರನ್ನು ಸೇವಿಸಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿದ್ದಾರೆ.

ಉಳ್ಳಾಲದ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಇದಾಗಿದ್ದು, ಇದೀಗ ಶಾಲೆಯ ಆಡಳಿತ ಮಂಡಳಿ ತುರ್ತು ಎಸ್ ಡಿಎಂಸಿ ಸಭೆ ನಡೆಸಿ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ನಿರ್ಧರಿಸಿದೆ.

ಏನಿದು ಮಾತ್ರೆ ಬೆರೆಸಿದ ಘಟನೆ?

ಶಾಲೆಯಲ್ಲಿ ನಡೆಯುವ ಘಟಕ ಪರೀಕ್ಷೆಯ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಅಲ್ಲದೇ ಸರಿಯಿದ್ದ ಉತ್ತರಕ್ಕೆ ಶಿಕ್ಷಕಿ ತಪ್ಪು ಹಾಕಿದ್ದಾರೆ ಅನ್ನುವ ದ್ವೇಷವೂ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು.

ಇದರ ಸೇಡು ತೀರಿಸುವ ಸಲುವಾಗಿ ತನ್ನ ಸ್ನೇಹಿತೆಯೊಬ್ಬಳ ಸಹಾಯ ಪಡೆದುಕೊಂಡ ಆರನೇ ತರಗತಿ ವಿದ್ಯಾರ್ಥಿನಿ ಶಿಕ್ಷಕಿಯ ನೀರಿನ ಬಾಟಲಿಗೆ ಮಾತ್ರೆ ಹಾಕಲು ಪ್ಲ್ಯಾನ್‌ ಮಾಡಿದ್ದಳು. ಅದರಂತೆ ಎಲ್ಲಿಂದಲೋ ಅವಧಿ ಮುಗಿದ ಮಾತ್ರೆಗಳನ್ನು (Date Expired tablets) ತಂದಿದ್ದಳು.

ಸ್ಟಾಫ್ ರೂಮ್ ನಲ್ಲಿ ಶಿಕ್ಷಕಿಯರಿಲ್ಲದ ಸಂದರ್ಭ ನೋಡಿಕೊಂಡು ಇಬ್ಬರೂ ವಿದ್ಯಾರ್ಥಿನಿಯರು ಸೇರಿ ಗಣಿತ ಶಿಕ್ಷಕಿಗೆ ಸೇರಿದ ವಾಟರ್ ಬಾಟಲಿಗೆ ತಾವು ತಂದ ಮಾತ್ರೆಗಳನ್ನು ಹಾಕಿದ್ದಾರೆ. ಇದೇ ಬಾಟಲಿಯ ನೀರನ್ನು ಗಣಿತ ಶಿಕ್ಷಕಿ ಜತೆ ಇನ್ನೋರ್ವ ಶಿಕ್ಷಕಿಯೂ ಕುಡಿದಿದ್ದಾರೆ.

ಸ್ವಲ್ಪ ಹೊತ್ತಿನಲ್ಲಿ ಶಿಕ್ಷಕಿಯೊಬ್ಬರಿಗೆ ಅಸ್ವಸ್ಥತೆ ಕಂಡುಬಂದಿದೆ. ಇನ್ನೋರ್ವ ಶಿಕ್ಷಕಿಗೆ ಮುಖದಲ್ಲಿ ಊತ ಉಂಟಾಗಿದೆ. ನೀರಿನ ರುಚಿಯಲ್ಲಿ ಬದಲಾವಣೆ ಕಂಡುಬಂದು ಸೂಕ್ಷ್ಮವಾಗಿ ಗಮನಿಸಿದಾಗ ನೀರಲ್ಲಿ ಮಾತ್ರೆಗಳಿರುವುದು ಕಂಡುಬಂದಿದೆ. ಈ ಕುರಿತು ವಿಚಾರಿಸಿ ಸಿಸಿಟಿವಿ ಗಮನಿಸಿದಾಗ ವಿದ್ಯಾರ್ಥಿನಿಯರ ಕೃತ್ಯ ಬೆಳಕಿಗೆ ಬಂದಿದೆ.

ಇಷ್ಟು ಸಣ್ಣ ವಯಸ್ಸಲ್ಲಿ ಇಷ್ಟೊಂದು ಕ್ರಿಮಿನಲ್‌ ಐಡಿಯಾ!

ಸಣ್ಣ ವಯಸ್ಸಿನಲ್ಲಿ ಇಷ್ಟೊಂದು ಕಾರುಬಾರು ಮಾಡುವ ವಿದ್ಯಾರ್ಥಿನಿಯ ನಡೆಗೆ ಇಡೀ ಶಾಲಾ ಆಡಳಿತ ಮಂಡಳಿ, ಹೆತ್ತವರು ನಿಬ್ಬೆರಗಾಗಿದ್ದಾರೆ‌. ಇಂತಹ ದೃಶ್ಯವನ್ನು ಬೇರೆ ಎಲ್ಲಿಯಾದರೂ ಮಾಡಿರುವುದನ್ನು ಕಂಡು ಕೃತ್ಯ ಎಸಗಿದರೋ? ಅಥವಾ ಯಾರಾದರೂ ಹೇಳಿಕೊಟ್ಟರೇ ಅನ್ನುವ ಅನುಮಾನ ಇತರೆ ಹೆತ್ತವರಲ್ಲಿ ಮೂಡಿದೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಮಕ್ಕಳಲ್ಲಿರುವ ಭಾವನೆಗಳನ್ನು ಹೆತ್ತವರು ಹಾಗೂ ಶಿಕ್ಷಕರು ಅರಿಯಬೇಕಿದೆ. ಶಿಕ್ಷಣವನ್ನು ಸ್ಪರ್ಧೆಯಂತೆ ಕಲಿಸುವ ಪರಿಣಾಮ ಇಂತಹ ವಿಕಾರತೆಗಳು ಎದುರಾಗುತ್ತಿವೆ ಎಂದು ಕೆಲವರು ಹೇಳಿದ್ದಾರೆ.

ವಿದ್ಯಾರ್ಥಿನಿಯರ ವಿಚಾರಣೆ ನಡೆಯಲಿ ಎಂದ ಸಾರ್ವಜನಿಕರು

ಶಾಲೆಯ ಆಡಳಿತ ಮಂಡಳಿ ಇದೀಗ ಕೃತ್ಯವೆಸಗಿದ ವಿದ್ಯಾರ್ಥಿನಿಯರನ್ನು ಟಿಸಿ ಕೊಟ್ಟು ಕಳುಹಿಸಿದೆ. ಆದರೆ, ಇಷ್ಟೇ ಸಾಲದು ಈ ಬಗ್ಗೆ ಪೊಲೀಸ್‌ ತನಿಖೆ ನಡೆಯಲಿ ಎಂದು ಕೆಲವು ಹೆತ್ತವರು ಒತ್ತಾಯಿಸಿದ್ದಾರೆ.

ಆಡಳಿತ ಮಂಡಳಿಯು ಪ್ರಕರಣವನ್ನು ಮುಚ್ಚಿ ಹಾಕುವುದಕ್ಕಾಗಿ ತಕ್ಷಣ ಟಿ.ಸಿ ಕೊಟ್ಟು ಕಳುಹಿಸುವ ಕೆಲಸ ಮಾಡುತ್ತದೆ. ಇದರ ಮೂಲಕ ಶಾಲೆಯ ಹೆಸರಿಗೆ ಕಳಂಕ ಬಾರದೆಂದು ನೋಡಿಕೊಳ್ಳುತ್ತದೆ. ಪ್ರಕರಣ ಕಾನೂನು ವ್ಯಾಪ್ತಿಗೆ ಬಂದರೆ ಮಾತ್ರ ವಿದ್ಯಾರ್ಥಿ ನಿಯರ ಸಮಾಲೋಚನೆ ಸಾಧ್ಯ. ಈ ಮೂಲಕ ಸಣ್ಣ ಮನಸ್ಸುಗಳಲ್ಲಿರುವ ಗೊಂದಲಗಳ ನಿವಾರಣೆ ಸಾಧ್ಯ. ಭವಿಷ್ಯದಲ್ಲಿ ತಪ್ಪು ಹಾದಿ ಹಿಡಿಯುವುದನ್ನು ತಪ್ಪಿಸಬಹುದು. ಶಿಕ್ಷಣ ಇಲಾಖೆಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ಇದನ್ನೂ ಓದಿ: Bengaluru News : ಪೆನ್ನು ಹಿಡಿಯೋ ಕೈಯಲ್ಲಿ ಸಿಗರೇಟ್‌! ಹುಡುಗಿಯರೂ ಸ್ಟ್ರಾಂಗ್‌ ಗುರು

ಅದೇ ಹೊತ್ತಿಗೆ ಮಕ್ಕಳು ಸಣ್ಣ ವಯಸ್ಸಿನಲ್ಲಿ ಮಾಡುವ ಇಂಥ ಕಿತಾಪತಿಗಳ ವಿಚಾರದಲ್ಲಿ ಶಾಲೆಯ ಶಿಕ್ಷಕರು ಸಂಯಮದಿಂದ ವರ್ತಿಸಬೇಕು. ಅವರ ಶೈಕ್ಷಣಿಕ ಜೀವನ ಹಾಳು ಮಾಡುವ ಬದಲು ಬುದ್ಧಿಮಾತಿನ ಮೂಲಕ ತಿದ್ದಬೇಕು ಎನ್ನುವ ಮಾತುಗಳೂ ಕೇಳಿಬರುತ್ತಿವೆ.

Exit mobile version