ಬೆಂಗಳೂರು: ಮುಸ್ಲಿಂ ಸಮುದಾಯದವರು ಪೂಜಿಸುವ ಮರದ ಕೆಳಗೆ ಇಟ್ಟಿದ್ದ ವಿವಿಧ ವಸ್ತುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ.
ಹೊರವಲಯದ ಆದಿಶಕ್ತಿ ನಗರದಲ್ಲಿ ಘಟನೆ ನಡೆದಿದೆ. ರಸ್ತೆ ಬದಿಯ ಮರದ ಕೆಳಕೆ ಕುರಾನ್, ಕಿಟ್ಟ, ಪೂಜಾ ಸಾಮಗ್ರಿ, ಧ್ವಜಗಳನ್ನು ಇರಿಸಲಾಗಿತ್ತು. ಈ ಸ್ಥಳವನ್ನು ಸ್ಥಳೀಯ ಮುಸ್ಲಿಮರು ಪೂಜಿಸುತ್ತಿದ್ದರು. ವರ್ಷಕ್ಕೊಮ್ಮೆ ನಡೆಯುವ ಉರುಸ್ ವೇಳೆಯಲ್ಲಿ ಹೆಚ್ಚಿನ ಪೂಜೆ ನಡೆಯುತ್ತಿತ್ತು. ಮಸೀದಿಯ ಕೂಗಳತೆ ದೂರದಲ್ಲೆ ಇರುವ ಜಾಗಕ್ಕೆ ಬೆಂಕಿ ಹಚ್ಚಿರುವುದು ಮಂಗಳವಾರ ಬೆಳಗ್ಗೆ ಬಂದು ನೋಡಿದಾಗ ಕಂಡುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಮುಸ್ಲಿಂ ಮಹಿಳೆ, ಈ ಮರದ ಕೆಳಗೆ ಜಂಡಾಗಳು, ಕುರಾನ್‌ಗಳು, ಕಿಟ್ಟಗಳನ್ನು ಇಡುತ್ತಿದ್ದೆವು. ಇಲ್ಲಿ ನಾವು ಮುಸ್ಲಿಮರೆಲ್ಲ ಸೇರಿಕೊಂಡು ಮಸೀದಿ ರೀತಿ ಮಾಡುತ್ತಿದ್ದೆವು. ಇಂದು ಎಲ್ಲವನ್ನೂ ಸುಟ್ಟು ಹಾಕಿದ್ದಾರೆ. ಇಲ್ಲಿ ಜಾತಿ ಭೇದ ಮಾಡಿ ಗಲಭೆ ಹುಟ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇಲ್ಲಿ ಎಲ್ಲರೂ ಒಂದಾಗಿಯೇ ಇರುತ್ತೇವೆ. ಹಿಂದು ಹುಡುಗರೂ ನಮ್ಮ ಜತೆಗೆ ಇರುತ್ತಾರೆ. ಯಾರು ಕೃತ್ಯ ಎಸಗಿದ್ದಾರೆ ಎನ್ನುವುದು ತಿಳಿಯದೆ ಯಾರ ಮೇಲೆಯೂ ಆರೋಪ ಮಾಡಲಾಗದು ಎಂದು ಸ್ಥಳೀಯ ಮುಸ್ಲಿಂ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ತಿಳಿದುಬರುತ್ತಿದ್ದಂತೆಯೇ ಸ್ಥಳಕ್ಕೆ ಎಸ್‌ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನರಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ.
ಇದನ್ನೂ ಓದಿ | ಮಳಲಿ ಮಸೀದಿ ವಿಚಾರದಲ್ಲಿ ತೀರ್ಪು ನೀಡದಂತೆ ಸಿವಿಲ್ ಕೋರ್ಟ್‌ಗೆ ಹೈಕೋರ್ಟ್ ಸೂಚನೆ