ಬೆಂಗಳೂರು: ಕೋಲಾರ ಕೆಂದಟ್ಟಿ ಕೆರೆಯಲ್ಲಿ ಕಳೆದ ನವೆಂಬರ್ ೧೬ರಂದು ಶವವಾಗಿ ಪತ್ತೆಯಾಗಿದ್ದ ಎರಡೂವರೆ ವರ್ಷದ ಪುಟ್ಟ ಹೆಣ್ಣು ಮಗುವಿನ ತಂದೆ ತಮಿಳುನಾಡಿನ ವೆಲ್ಲೂರಿನಲ್ಲಿ ಪತ್ತೆಯಾಗಿದ್ದಾನೆ. ಬೆಂಗಳೂರಿನಲ್ಲಿ ಟೆಕ್ಕಿಯಾಗಿರುವ ರಾಹುಲ್ ಪರ್ಮಾರ್ ಮತ್ತು ಆತನ ಪುಟ್ಟ ಮಗಳು ಜಿಯಾ ಪರ್ಮಾರ್ ನಾಪತ್ತೆಯಾಗಿದ್ದಾರೆ ಎಂದು ಈ ಹಿಂದೆ ದೂರು ನೀಡಲಾಗಿತ್ತು. ಆದರೆ, ಅವರು ಪ್ರಯಾಣಿಸುತ್ತಿದ್ದ ನೀಲಿ ಕಾರು ಕೆಂದಟ್ಟಿ ಕೆರೆಯ ಮೇಲ್ಭಾಗದಲ್ಲಿ ಪತ್ತೆಯಾಗಿತ್ತು. ಮಗುವಿನ ಶವ ಕೆರೆಯ ಒಂದು ಭಾಗದಲ್ಲಿ ತೇಲುತ್ತಿತ್ತು. ರಾಹುಲ್ ಪರ್ಮಾರ್ ತನ್ನ ಮಗುವಿನ ಜತೆಗೆ ಕೆರೆಗೆ ಹಾರಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಆತನ ಶವ ಸಿಕ್ಕಿರಲಿಲ್ಲ. ಹೀಗಾಗಿ ನಿಗೂಢತೆ ಆವರಿಸಿತ್ತು.
ರಾಹುಲ್ ಪತ್ತೆಯಾಗಿದ್ದು ಹೇಗೆ?
ಈ ನಿಗೂಢ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೋಲಾರ ಎಸ್‌ಪಿ ಪಿ.ಡಿ. ದೇವರಾಜ್ ಅವರು ಆದೇಶಿಸಿದ್ದರು. ಅದರ ಪ್ರಕಾರ, ತನಿಖೆ ನಡೆಯುತ್ತಿತ್ತು. ಈ ನಡುವೆ, ರಾಹುಲ್ ತನ್ನ ಮಾವನಿಗೆ ಕರೆ ಮಾಡಿ, ಅಪರಿಚಿತ ವ್ಯಕ್ತಿಗಳು ತನ್ನನ್ನು ಅಪಹರಿಸಿದ್ದಾರೆ. ಮಗುವನ್ನು ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದ. ಕೂಡಲೇ ಮಾಹಿತಿ ಪಡೆದ ಪೊಲೀಸರು ಆತ ಮಾಡಿದ ಕರೆಯ ಆಧಾರದಲ್ಲಿ ಆತನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಆತ ಹೇಳುವ ಅಪಹರಣದ ಕಥೆ ನಿಜವೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.
ಆವತ್ತು ಆಗಿದ್ದೇನೆಂದರೆ..
ನವೆಂಬರ್ ೧೫ರಂದು ಬೆಳಗ್ಗೆ ಮಗಳನ್ನು ತಾನು ಶಾಲೆಗೆ ಬಿಡುವುದಾಗಿ ರಾಹುಲ್ ಪರ್ಮಾರ್ ಹೆಂಡತಿಗೆ ಹೇಳಿದ್ದ. ಆದರೆ, ಮಧ್ಯಾಹ್ನವಾದರೂ ಇಬ್ಬರೂ ಮನೆಗೆ ಮರಳದೆ ಇದ್ದ ಹಿನ್ನೆಲೆಯಲ್ಲಿ ಪತ್ನಿ ಶಾಲೆಗೆ ಹೋದರು. ಆದರೆ, ಆವತ್ತು ಮಗುವನ್ನು ಶಾಲೆಗೆ ಬಿಟ್ಟೇ ಇಲ್ಲ ಎನ್ನುವ ಮಾಹಿತಿ ಸಿಕ್ಕಿತು ಪತ್ನಿ ಕೂಡಲೇ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದರು.
ಕೂಡಲೇ ಎಲ್ಲ ಕಡೆ ಅಲರ್ಟ್ ಮಾಡಿದಾಗ ಸಿಮ್ ಕಾರ್ಡ್ ಮೂಲಕ ಮೊಬೈಲ್ ಟ್ರೇಸ್ ಮಾಡಲಾಯಿತು. ಮೊಬೈಲ್ ಕೆಂದಟ್ಟಿ ಕೆರೆಯ ಬಳಿ ಲೊಕೇಶನ್ ತೋರಿಸಿತು. ಕೆಂದಟ್ಟಿ ಕೆರೆ ಬಳಿ ಪೊಲೀಸರು ಹೋಗಿ ನೋಡಿದಾಗ ಕಾರಿನಲ್ಲಿ ಯಾರೂ ಇರಲಿಲ್ಲ. ಆದರೆ, ಮಗುವಿನ ಶವ ಕೆರೆಯಲ್ಲಿ ತೇಲುತ್ತಿತ್ತು. ತಂದೆ ಮತ್ತು ಮಗು ಇಬ್ಬರೂ ನೀರಿಗೆ ಹಾರಿರಬಹುದು ಎಂಬ ಶಂಕೆಯಲ್ಲಿ ಪೊಲೀಸರು ಎನ್‌ಡಿಆರ್‌ಎಫ್ ಸಹಾಯದೊಂದಿಗೆ ಇಡೀ ಕೆರೆಯನ್ನು ಜಾಲಾಡಿದರು. ಆದರೆ, ಆದರೆ, ರಾಹುಲ್‌ನ ಶವ ಸಿಗಲಿಲ್ಲ. ಇದು ಪೊಲೀಸರನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತು.
ರಾಹುಲ್ ನಿಗೂಢತೆ ಮತ್ತು ಅಪಹರಣ
ಪರ್ಮಾರ್ ಬೆಂಗಳೂರಿನ ಒಂದು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕೆಲವು ತಿಂಗಳ ಹಿಂದೆ ಉದ್ಯೋಗ ಕಳೆದುಕೊಂಡಿದ್ದ. ಈ ನಡುವೆ, ತನ್ನ ಮನೆಯಿಂದ ಚಿನ್ನಾಭರಣ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ. ದೂರು ನೀಡಿದ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತನೇ ತಪ್ಪೊಪ್ಪಿಕೊಂಡಿದ್ದ. ತಾನೇ ಪತ್ನಿಗೆ ಗೊತ್ತಾಗದಂತೆ ಹಣವನ್ನು ಅಡಮಾನ ಇಟ್ಟಿದ್ದಾಗಿ ಒಪ್ಪಿಕೊಂಡಿದ್ದ. ಇದು ಗಂಡ-ಹೆಂಡತಿಯ ನಡುವೆ ಜಗಳಕ್ಕೆ ಕಾರಣವಾಗಿತ್ತು.
ಏನಾಗಿದೆ ಎನ್ನುವುದು ನಿಗೂಢ
ಈಗ ನಿಜಕ್ಕೂ ಆಗಿರುವುದೇನು? ಸದಾ ಸುಳ್ಳು ಹೇಳುವ ರಾಹುಲ್ ಪರ್ಮಾರ್ ಈಗ ಹೇಳುವುದನ್ನು ಸತ್ಯ ಎಂದು ನಂಬುವ ಸ್ಥಿತಿಯಲ್ಲಿ ಪೊಲೀಸರೂ ಇಲ್ಲ. ನಿಜಕ್ಕೂ ಆತನ ಅಪಹರಣವಾಗಿತ್ತಾ? ಅಪಹರಿಸಿದವರು ಕಾರನ್ನು ಯಾಕೆ ಬಿಟ್ಟು ಹೋದರು? ಈತನೇ ಮಗುವನ್ನು ಕೊಂದು ಅಪಹರಣದ ನಾಟಕವಾಡಿದನೇ? ನಿಜಕ್ಕೂ ಅಪಹರಣವಾಗಿದ್ದರೆ ಯಾರು ಅಪಹರಿಸಿದವರು ಎನ್ನುವ ಪ್ರಶ್ನೆಗೆ ಪೊಲೀಸರು ರಾಹುಲ್‌ನಿಂದ ಉತ್ತರ ಪಡೆಯಬೇಕಾಗಿದೆ.
ಇದನ್ನೂ ಓದಿ | Suicide| ಎರಡೂವರೆ ವರ್ಷದ ಮಗುವಿನ ಜತೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಂದೆ: ಮನವ ಕಾಡುವ ಪುಟ್ಟ ಅಂಗಿ!