Site icon Vistara News

Missing Case | ಚಂದ್ರಶೇಖರ್ ಸಾವು ಪ್ರಕರಣ ಸಿಒಡಿಗೆ ಇಲ್ಲವೆಂದ ಸರ್ಕಾರ; ಮೇಲ್ನೋಟಕ್ಕೆ ಕೊಲೆ ಎಂದ ಬಿಎಸ್‌ವೈ

ವಿಜಯನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್‌ (Missing Case‌ death mystery) ಸಾವು ಪ್ರಕರಣವನ್ನು ಸಿಒಡಿಗೆ ವಹಿಸುವುದಿಲ್ಲ. ನಮ್ಮ ಪೊಲೀಸರೇ ಸಮರ್ಥರಿದ್ದಾರೆ. ಅವರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮಾಡುತ್ತೇವೆ. ನಮ್ಮ ಪೊಲೀಸರು ಉತ್ತಮವಾಗಿ ತನಿಖೆ ನಡೆಸುತ್ತಿರುವುದರಿಂದ ಸಿಒಡಿಗೆ ತನಿಖೆಯನ್ನು ವಹಿಸುವುದಿಲ್ಲ ಎಂದು ಹೇಳಿದರು.

ನಮ್ಮ ಪೊಲೀಸರು ಎಲ್ಲ ಆಯಾಮಗಳಲ್ಲೂ ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಅವರೇ ಈ ಪ್ರಕರಣವನ್ನು ಸಂಪೂರ್ಣವಾಗಿ ನಿಭಾಯಿಸುತ್ತಾರೆ. ನಾನೊಬ್ಬ ಗೃಹ ಮಂತ್ರಿಯಾಗಿ ತನಿಖೆ ಹಂತದಲ್ಲಿರುವ ಪ್ರಕರಣದ ಬಗ್ಗೆ ಮಾತನಾಡಿದರೆ ಅದಕ್ಕೆ ಮತ್ತೊಂದು ಅರ್ಥ ಹಾಗೂ ಆಯಾಮವನ್ನು ಕಲ್ಪಿಸಲಾಗುತ್ತದೆ. ಹಾಗಾಗಿ ತನಿಖೆ ನಡೆದ ಬಳಿಕವೇ ನಾವು ಉತ್ತರ ನೀಡುತ್ತೇವೆ ಎಂದು ಆರಗ ಹೇಳಿದರು.

ಇದನ್ನೂ ಓದಿ | Missing Case | ಚಂದ್ರು ಸಾವು ಸಹಜ ಅಲ್ಲ, ಕಿಡ್ನ್ಯಾಪ್‌ ಆಗಿದೆ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿ ಎಂದ ರೇಣುಕಾಚಾರ್ಯ

ಶಿವಮೊಗ್ಗದಲ್ಲಿ ನಿರಂತರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವಿಚಾರವಾಗಿ ಮಾತನಾಡಿದ ಆರಗ ಜ್ಞಾನೇಂದ್ರ, ಈ ಹಿಂದೆಯೂ ಶಿವಮೊಗ್ಗದಲ್ಲಿ ಪ್ರಕರಣಗಳು ಹೆಚ್ಚು ನಡೆಯುತ್ತಿದ್ದವು. ಆ ಲೆಕ್ಕದಲ್ಲಿ ಈ ಅವಧಿಯಲ್ಲಿ ಬಹಳವೇ ಕಡಿಮೆಯಾಗಿದೆ. ಕೊತ್ವಾಲ್ ರಾಮಚಂದ್ರ, ಹೆಬ್ಬೆಟ್ಟು ಮಂಜು ಅವರ ಕಾಲದಿಂದಲೂ ಸಹ ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆ ನಡೆಯುತ್ತಲೇ ಇತ್ತು. ಈಗ ಯಾವುದೋ ಎರಡ್ಮೂರು ಘಟನೆಗಳು ಆಗಿವೆ. ಅಷ್ಟು ಮಾತ್ರಕ್ಕೆ ಶಿವಮೊಗ್ಗದಲ್ಲಿ ಕ್ರೈಂ ಹೆಚ್ಚಾಗಿವೆ, ಹೆಚ್ಚುತ್ತಿವೆ ಎಂದು ಹೇಳಬೇಡಿ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಮೇಲ್ನೋಟಕ್ಕೆ ಕೊಲೆ ಎಂದೆನಿಸುತ್ತದೆ: ಬಿ.ಎಸ್.‌ ಯಡಿಯೂರಪ್ಪ
ರೇಣುಕಾಚಾರ್ಯ ಅವರ ಸಹೋದರನ ಸಾವಿನ ಪ್ರಕರಣವು ಅತ್ಯಂತ ದುಃಖ ತಂದಿದೆ. ಸಾವಿನ ಬಗ್ಗೆ ವಾಸ್ತವಾಂಶ ತಿಳಿದು ತನಿಖೆ ನಡೆಸಲಾಗುವುದು. ಮೇಲ್ನೋಟಕ್ಕೆ ಕೊಲೆ ಎಂದು ಅನ್ನಿಸುತ್ತದೆ. ತನಿಖೆ ಮಾಡಿದಾಗ ಸತ್ಯ ಹೊರಬರಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಯೂ ಚರ್ಚಿಸಿದ್ದೇನೆ. ಅವರು ಸೂಕ್ತ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಂತಿಮ ದರ್ಶನ ಪಡೆದ ಬಿಎಸ್‌ವೈ
ರೇಣುಕಾಚಾರ್ಯ ಅವರ ಸಹೋದರನ ಮಗ ಚಂದ್ರಶೇಖರ್‌ ಸಾವಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಬಿಎಸ್‌ವೈ ರೇಣುಕಾಚಾರ್ಯ ಅವರ ಸ್ವಗ್ರಾಮ ಕುಂದೂರಿನ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದರು. ಬಳಿಕ ರೇಣುಕಾಚಾರ್ಯಗೆ ಸಾಂತ್ವನ ಹೇಳಿದ ಬಿಎಸ್‌ವೈ, ಮಾನಸಿಕ ಸ್ಥೈರ್ಯ ತುಂಬಿದರು.

ಇದನ್ನೂ ಓದಿ | Missing Case | ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ; ಕಾರಿನ ಮುಂದೆ ಗೋಳಿಟ್ಟ ರೇಣುಕಾಚಾರ್ಯ

ಎಫ್‌ಎಸ್‌ಎಲ್‌ ತಂಡದಿಂದ ಸತತ ಶೋಧ
ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌) ತಂಡದ ಏಳು ಅಧಿಕಾರಿಗಳಿಂದ ಕೆಲವು ಗಂಟೆಯಿಂದ ಸತತ ಪರಿಶೀಲನೆ ನಡೆದಿದೆ. ಕಾರು ಪತ್ತೆಯಾಗಿರುವ ತುಂಗಾ ಮೇಲ್ದಂಡೆ ನಾಲಾ ಸೇತುವೆ ಬಳಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಪರಿಶೀಲನೆ ನಡೆದಿದ್ದು, ಕಾರು ಅಪಘಾತಕ್ಕೊಳಗಾಗಿದೆಯೇ? ಅಥವಾ ಇನ್ಯಾವುದೋ ಕಾರಣವಿದೆಯೇ? ಯಾರೋ ಕೊಲೆ ಮಾಡಿ ಅಪಘಾತ ಎಂಬಂತೆ ಸೃಷ್ಟಿ ಮಾಡಿದ್ದಾರೆಯೇ ಎಂಬಿತ್ಯಾದಿ ಅಂಶಗಳನ್ನೊಳಗೊಂಡಂತೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡವು ಪರಿಶೀಲನೆಯನ್ನು ನಡೆಸುತ್ತಿದೆ ಎನ್ನಲಾಗಿದೆ.

ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್‌ಪಿ ರಿಷ್ಯಂತ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ತನಿಖೆಯ ಪ್ರತಿ ಸಂಗತಿಗಳನ್ನೂ ಗಮನಿಸುತ್ತಿದ್ದಾರೆ. ಈ ವೇಳೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಶವ ದೊರೆತ ಸ್ಥಳದಲ್ಲಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮೂಲಕ ವಿಧಿವಿಜ್ಞಾನ ತಂಡಕ್ಕೆ ಸಹಕಾರ ನೀಡುತ್ತಿದ್ದಾರೆ.

ಇದನ್ನೂ ಓದಿ | Chandru death | ಜಾಲ ತಾಣಗಳಲ್ಲಿ ಚಂದ್ರಶೇಖರ್‌ ಚಿತ್ರ, ವಿಡಿಯೊ ಹಂಚಿಕೊಂಡು ಕಣ್ಣೀರಿಟ್ಟ ರೇಣುಕಾಚಾರ್ಯ

ಏನಿದು ಪ್ರಕರಣ?
ಕಳೆದ ಭಾನುವಾರ (ಅ. ೩೦) ರಾತ್ರಿ ಗೌರಿಗದ್ದೆಗೆ ಹೋಗಿ ಬಂದಿದ್ದ ಚಂದ್ರಶೇಖರ್‌ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ, ತನಿಖೆಯನ್ನು ಚುರುಕುಗೊಳಿಸಿದ್ದರು. ಆದರೆ, ಗುರುವಾರ (ನ.೩) ಮಧ್ಯಾಹ್ನ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಕಾರಿನ ಬಿಡಿಭಾಗಗಳು ಬಿದ್ದಿರುವ ಬಗ್ಗೆ ಸುದ್ದಿ ಬಂದಿತ್ತು. ಪರಿಶೀಲನೆ ನಡೆಸಿದಾಗ ಕಾರು ನಾಲೆಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಕಾರನ್ನು ಮೇಲೆತ್ತಿದಾಗ ಚಂದ್ರಶೇಖರ್‌ ಮೃತಪಟ್ಟಿರುವುದು ತಿಳಿದುಬಂದಿದೆ.

Exit mobile version