ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) : ಆಗಸ್ಟ್ 1ರಂದು ಕುಕ್ಕೆ ಸುಬ್ರಹ್ಮಣ್ಯ (Kukke Subrahmanya) ಪೊಲೀಸ್ ಠಾಣೆಯಲ್ಲಿ ಎರಡು ನಾಪತ್ತೆ ಪ್ರಕರಣಗಳು (Missing Case) ದಾಖಲಾಗಿದೆ. ಎರಡೂ ಬೇರೆ ಬೇರೆ ಘಟನೆಗಳಾಗಿದ್ದರೂ ನಾಪತ್ತೆಯಾಗಿರುವುದು ಮಹಿಳೆಯರು ಅನ್ನುವುದು ಗಮನಾರ್ಹ. ಒಬ್ಬ ಮಹಿಳೆ ಮಗುವಿನ ಜೊತೆ ದೇವಸ್ಥಾನಕ್ಕೆ ಬಂದು ನಾಪತ್ತೆಯಾಗಿದ್ದರೆ ಮತ್ತೊಬ್ಬರು ದಂತ ಚಿಕಿತ್ಸೆಗೆಂದು ಹೋದವರು ಮರಳಿ ಮನೆ ಸೇರಿಲ್ಲ.
ಬಿಳಿನೆಲೆ ಗ್ರಾಮದ ದೇವಸ್ಯದ ತೀರ್ಥಲತಾ
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ದೇವಸ್ಯದ ನಿವಾಸಿ ಮಾಯಿಲಪ್ಪ ಅವರ ಪುತ್ರಿ ತೀರ್ಥಲತಾ ಎಂಬವರನ್ನು ಗದಗದ ಮುಮಡರಗಿಯ ಶಿವರಾಜ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಇತ್ತೀಚೆಗೆ ಮನೆಗೆ ಬಂದ ತೀರ್ಥಲತಾ ಜುಲೈ 31ರಂದು ಹಲ್ಲು ನೋವಿನ ಕಾರಣದಿಂದ ದಂತ ವೈದ್ಯರ ಬಳಿ ಚಿಕಿತ್ಸೆಗೆ ಬಂದವರು ಮತ್ತೆ ಮನೆಗೆ ವಾಪಸಾಗಿಲ್ಲ. ಸಾಕಷ್ಟು ಹುಡುಕಾಟ ನಡೆಸಿದ್ರೂ ತೀರ್ಥಲತಾ ಕಾಣದ ಕಾರಣದಿಂದ ಅವರ ತಂದೆ ಮಾಯಿಲಪ್ಪ ಗೌಡ ಅವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಮಹಿಳೆ ಮಗುವಿನ ಜತೆ ಮಿಸ್ಸಿಂಗ್
ಬೆಂಗಳೂರು ಗ್ರಾಮಾಂತರದ ರಾಜಶೇಖರ್ ಎಂಬವರು ತನ್ನ ಪತ್ನಿ ಹರ್ಷಿತಾ ಮತ್ತು ಮೂರು ವರ್ಷ ಪ್ರಾಯದ ಮಗು ಭರತ್ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾರೆ. ದೇವರ ದರ್ಶನದ ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿದ್ದು ಅಲ್ಲಿಂದ ಪತ್ನಿ ಹಾಗೂ ಮಗು ಕಾಣೆಯಾಗಿದ್ದಾಗಿ ಹೇಳಿದ್ದಾರೆ. ಎಲ್ಲ ಕಡೆ ಹುಡುಕಾಡಿದರೂ ಪತ್ನಿ ಹಾಗೂ ಮಗು ಸಿಗದ ಕಾರಣ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾಜಶೇಖರ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಮೆಷಿನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಸ್ನೇಹಿತರ ಕುಟುಂಬದ ಜತೆ ಧರ್ಮಸ್ಥಳಕ್ಕೆ ಬಂದು ಅಲ್ಲಿಂದ ಆಗಸ್ಟ್ 1ರಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸುಬ್ರಹ್ಮಣ್ಯ ತಲುಪಿದ್ದರು. ದೇವರ ದರ್ಶನ ಮುಗಿಸಿಕೊಂಡು ಮಧ್ಯಾಹ್ನ 12.30ರ ಹೊತ್ತಿಗೆ ಅಂಗಡಿಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಒಬ್ಬೊಬ್ಬರು ಒಂದೊಂದು ಕಡೆ ಹೋದರು. ಎಲ್ಲರೂ ಮರಳಿ ಬಂದರೂ ಹರ್ಷಿತಾ ಮತ್ತು ಮಗು ಬರಲೇ ಇಲ್ಲ.
ಎಲ್ಲಿ ಹುಡುಕಿದರೂ ಸಿಕ್ಕಿಲ್ಲ, ಹಾಗಿದ್ದರೆ ಇದು ಪರಾರಿ ಪ್ರಕರಣವಾ?
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ದೊಡ್ಡದಾದರೂ ಊರು ಸಣ್ಣದು. ಹಾಗಾಗಿ ಇಲ್ಲಿ ಬಂದವರು ತಪ್ಪಿಸಿಕೊಂಡರೂ ಹುಡುಕಾಡುವುದು ಕಷ್ಟದ ಕೆಲಸವೇನೂ ಅಲ್ಲ. ಅದರಲ್ಲೂ ಆದಿ ಸುಬ್ರಹ್ಮಣ್ಯದಲ್ಲಿ ತಪ್ಪಿಸಿಕೊಂಡರೆ ಎಷ್ಟೇ ಜನಜಂಗುಳಿ ಇದ್ದರೂ ತಪ್ಪಿಸಿಕೊಂಡವರು ಅಲ್ಲೇ ಸಿಕ್ಕಿದ ಸಾಕಷ್ಟು ಉದಾಹರಣೆ ಇದೆ.
ಹೀಗಿರುವಾಗ ರಾಜಶೇಖರ್ ಅವರ ಪತ್ನಿ ಎಲ್ಲಿ ಹೋಗಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ತೀರ್ಥಲತಾ ಅವರ ಬಗ್ಗೆಯೂ ಯಾವುದೇ ಸುಳಿವು ಸಿಕ್ಕಿಲ್ಲ. ಸದ್ಯ ಪೊಲೀಸರು ಬಸ್ ನಿಲ್ದಾಣ, ದೇವಸ್ಥಾನದ ಆವರಣದಲ್ಲಿನ ಅಂಗಡಿಗಳಲ್ಲಿ ಹಾಗೂ ಕ್ಷೇತ್ರದ ಪ್ರಮುಖ ಸ್ಥಳದಲ್ಲಿನ ಸಿಸಿ ಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Children Missing : ಶಾಲೆಯಿಂದ ಮನೆಗೆ ಹೊರಟ ಮಕ್ಕಳು ಕ್ಷಣಾರ್ಧದಲ್ಲಿ ಮಿಸ್ಸಿಂಗ್; ಇದೊಂಥರಾ Chidren’s day out Story!
ಕೌಟುಂಬಿಕ ಕಾರಣದಿಂದ ಕಣ್ಮರೆಯಾದರೇ?
ತೀರ್ಥಲತಾ ಅವರನ್ನು ಗದಗಕ್ಕೆ ಮದುವೆ ಮಾಡಿಕೊಡಲಾಗಿತ್ತು. ಅವರು ತವರಿಗೆ ಮರಳಿದ ಬಳಿಕ ನಾಪತ್ತೆಯಾಗಿದ್ದಾರೆ. ಹರ್ಷಿತಾ ಅವರು ತಮ್ಮ ಪುಟ್ಟ ಮಗುವಿನೊಂದಿಗೆ ಕಣ್ಮರೆಯಾಗಿದ್ದಾರೆ. ಇದು ಯಾವುದೋ ತಕ್ಷಣದ ಕಾರಣದಿಂದ ಆಗಿರುವ ನಾಪತ್ತೆ ಪ್ರಕರಣವಲ್ಲ. ಮೊದಲೇ ತೀರ್ಮಾನವಾದಂತೆ ಇವರಿಬ್ಬರೂ ತಪ್ಪಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಮೊಬೈಲ್ ನಂಬರ್ ಟ್ರೇಸಿಂಗ್, ಸಿಸಿಟಿವಿ ಫೂಟೇಜ್‌ಗಳ ಆಧಾರದಲ್ಲಿ ಅವರನ್ನು ಹುಡುಕಲಾಗುತ್ತಿದೆ. ಸಿಕ್ಕಿದ ಬಳಿಕ ನಿಜವಾದ ಕಾರಣ ತಿಳಿಯಲಿದೆ.