ಉಡುಪಿ: ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ (Udupi Malpe beach) ಶನಿವಾರ ತಡರಾತ್ರಿ ಇಬ್ಬರು ಬಾಲಕಿಯರು ನೀರುಪಾಲಾಗಿದ್ದಾರೆ (Two girls drowned, one rescued). ಅವರಲ್ಲಿ ಒಬ್ಬಾಕೆಯನ್ನು ರಕ್ಷಿಸಲಾಗಿದ್ದು, ಒಬ್ಬಳು ಮೃತಪಟ್ಟಿದ್ದಾಳೆ. ಈ ಬಾಲಕಿಯರು ಮೂರು ದಿನಗಳ ಹಿಂದೆ ಮಡಿಕೇರಿಯಿಂದ ನಾಪತ್ತೆಯಾಗಿದ್ದರು (Girls from Madikeri) ಎಂದು ತಿಳಿದುಬಂದಿದೆ. ಆದರೆ, ಇಲ್ಲಿಗೆ ಹೇಗೆ ಬಂದರು, ಸಮುದ್ರಕ್ಕೆ ಹಾರಿದರೇ? ಆಡುತ್ತಿದ್ದಾಗ ನೀರುಪಾಲಾದರೇ (Missing Girls) ಎಂಬ ಅಂಶ ಇನ್ನೂ ಸ್ಪಷ್ಟವಾಗಿಲ್ಲ.
ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯಸಿ ವಿದ್ಯಾರ್ಥನಿಯರಾದ ಮಾನ್ಯ ಮತ್ತು ಯಶಸ್ವಿನಿ ಸಮುದ್ರದಲ್ಲಿ ನೀರುಪಾಲಾದವರು. ಅವರಲ್ಲಿ ಮಾನ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮೃತಪಟ್ಟರೆ, ನೀರಿನಲ್ಲಿ ಮುಳುಗೇಳುತ್ತಿದ್ದ ಯಶಸ್ವಿನಿಯನ್ನು ರಕ್ಷಿಸಲಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಹೊರಬಂದಿದ್ದಾಳೆ.
ಶನಿವಾರ ತಡರಾತ್ರಿ ಮಲ್ಪೆ ತೀರದಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಧಾವಿಸಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ಮೇಲೆತ್ತಿ ಹಾಕಿದರು. ಆದರೆ, ಅಷ್ಟು ಹೊತ್ತಿಗೇ ಮಾನ್ಯ ಉಸಿರು ಚೆಲ್ಲಿದ್ದಳು. ಮತ್ತೊಬ್ಬಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಯಶಸ್ವಿನಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಆಕೆ ನೀಡಿದ ಮಾಹಿತಿ ಪ್ರಕಾರ ಅವರಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು. ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್ ನೀಡಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ. ಅವರು ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಆರಂಭಗೊಂಡಿತ್ತು. ಅದರ ನಡುವೆಯೇ ಇದೀಗ ದುರಂತ ಸಂಭವಿಸಿದೆ.
ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾರೆ. ಅಲ್ಲಿ ಕುಳಿತಿದ್ದಾಗ ಕಡಲ ಅಲೆಗಳಿಗೆ ಸಿಲುಕಿದ್ದಾರೆ. ಒಂದು ಮಾಹಿತಿ ಪ್ರಕಾರ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿದೆ.
ಇವರಿಬ್ಬರೂ ಸುಮಾರು 12-14 ವರ್ಷದ ಪ್ರಾಯದ ಮಕ್ಕಳಾಗಿದ್ದು, ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಮಡಿಕೇರಿ ಭಾಗದಲ್ಲಿ ಮಕ್ಕಳು ಮನೆ ಬಿಟ್ಟು ಹೋಗಿ ಕಣ್ಮರೆಯಾಗುವ ಹಲವಾರು ಘಟನೆಗಳು ನಡೆದಿದ್ದು, ಹೆಚ್ಚಿನವರು ಮರಳಿ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
ಜುಲೈ 23ರಂದು ನಾಲ್ವರು ಮಕ್ಕಳು ನಾಪತ್ತೆಯಾಗಿದ್ದರು
ಕೊಡಗಿನಲ್ಲಿ ಹೆಣ್ಣು ಮಕ್ಕಳ ಕಾಣೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಜುಲೈ 23ರಂದು ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿ ಕೂಲಿ ಕಾರ್ಮಿಕ ಕುಟುಂಬದ ನಾಲ್ವರು ಬಾಲಕಿಯರು ನಾಪತ್ತೆಯಾದ ಬಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇವರಲ್ಲಿ ಇಬ್ಬರನ್ನು ಅವರ ಪೋಷಕರು ಶಾಲೆಗೆ ಹೋಗಲೆಂದು ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಅವರು ಮರಳಿ ಮನೆಗೆ ಬಂದಿರಲಿಲ್ಲ. ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆಂದು ಹೋದವರು ಅಲ್ಲಿಗೂ ಹೋಗದೆ ಮರಳಿಯೂ ಬಾರದೆ ಕಣ್ಮರೆಯಾಗಿದ್ದರು.
ಈ ನಿರ್ದಿಷ್ಟ ಪ್ರಕರಣದಲ್ಲಿ ಈ ಮಕ್ಕಳ ಹಿನ್ನೆಲೆ, ಅವರ್ಯಾಕೆ ಮನೆ ಬಿಟ್ಟು ಬಂದರು, ಮಲ್ಪೆಗೆ ಬಂದಿದ್ದು ಹೇಗೆ? ಇದರ ಹಿಂದೆ ಬೇರೆ ಜಾಲಗಳು ಕೆಲಸ ಮಾಡಿವೆಯೇ? ಮಕ್ಕಳು ಈ ರೀತಿಯಾಗಿ ಮನೆ ಬಿಟ್ಟು ಹೋಗುವ ಪರಿಸ್ಥಿತಿ ಯಾಕೆ ನಿರ್ಮಾಣವಾಗುತ್ತಿವೆ ಎನ್ನುವುದು ತನಿಖೆಯಿಂದ ತಿಳಿದುಬರಬೇಕಾಗಿದೆ.
ಇದನ್ನೂ ಓದಿ: Family Dispute : ಗರ್ಭಿಣಿ ಪತ್ನಿಯನ್ನು ತವರಿಗೆ ಕಳುಹಿಸಿ ಗಂಡ ಎಸ್ಕೇಪ್; ಮಗುವಿಗೆ 9 ತಿಂಗಳಾದರೂ ನಾಪತ್ತೆ, ಮನೆಗೂ ಬಾಗಿಲು!