Site icon Vistara News

Missing Mystery : ಬೆಂಗಳೂರಿನಿಂದ ಕಾಣೆಯಾದ ಬಾಲಕನ ಪತ್ತೆ ಹಚ್ಚಿದ್ದು ಒಬ್ಬ ಪತ್ರಕರ್ತೆ! ಇಲ್ಲಿದೆ ರೋಚಕ ಕಥೆ!

Bangalore Boy missing and found

ಬೆಂಗಳೂರು: ರಾಜಧಾನಿಯ ವೈಟ್‌ ಫೀಲ್ಡ್‌ನಿಂದ ಕಳೆದ ಭಾನುವಾರ ಮಧ್ಯಾಹ್ನ ನಿಗೂಢವಾಗಿ ನಾಪತ್ತೆಯಾಗಿದ್ದ ಪರಿಣವ್‌ (Parinav Missing) ಎಂಬ 12 ವರ್ಷದ ಬಾಲಕ (12 year old boy missing) ಬುಧವಾರ ಬೆಳಗ್ಗೆ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ (Bangalore boy Found in Hyderabad) ಪತ್ತೆಯಾಗುವುದರೊಂದಿಗೆ ಇಡೀ ಕುಟುಂಬ ನೆಮ್ಮದಿಯ ನಿಟ್ಟುಸಿರುಬಿಟ್ಟಿದೆ. ನಿಜವೆಂದರೆ, ಆ ಮೂರು ದಿನಗಳಲ್ಲಿ ಆತ ನಡೆದುಕೊಂಡ ರೀತಿ, ತೋರಿದ ಚಾಣಾಕ್ಷತೆ, ಶಾಂತತೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಅವನ ಪಯಣ ನಿಜಕ್ಕೂ ರೋಚಕ. ಹಾಗಿದ್ದರೆ ಈ ಪರಿಣವ್‌ ಯಾರು? ಅವನು ಊರು ಬಿಟ್ಟು ಹೋಗಿದ್ದೇಕೆ? ಹೈದರಾಬಾದ್‌ನಲ್ಲಿ ಸಿಕ್ಕಿದ್ದು ಹೇಗೆ? (How Parinav found in Hyderabad) ಇಲ್ಲಿದೆ ಕಂಪ್ಲೀಟ್‌ ವಿವರ (Missing Mystery).

ಯಾರಿವನು 12 ವರ್ಷದ ಬಾಲಕ ಪರಿಣವ್‌?

ಪರಿಣವ್‌ನ ತಂದೆ ಸುಕೇಶ್‌ ಒಬ್ಬರು ಸಾಫ್ಟ್‌ ವೇರ್‌ ಎಂಜಿನಿಯರ್‌. ತಾಯಿ ನಿವೇದಿತಾ ಕೂಡಾ ಪ್ರೊಫೆಷನಲ್‌. ಸುಕೇಶ್‌ ಅವರಿಗೆ ಪರಿಣವ್‌ ಅಲ್ಲದೆ ಇನ್ನೊಬ್ಬ ಪುಟ್ಟ ಮಗನಿದ್ದಾನೆ. ಅವರು ವಾಸವಾಗಿರುವುದು ವೈಟ್‌ ಫೀಲ್ಡ್‌ನ ಹೋಪ್‌ ಫಾರ್ಮ್‌ ಸಿಗ್ನಲ್‌ ಸಮೀಪ ಇರುವ ಪ್ರೆಸ್ಟೀಜ್‌ ಮೇಬೆರ್ರಿ ವಿಲ್ಲಾದಲ್ಲಿ. ಇವರು ಮೂಲತಃ ಆಂಧ್ರ ಪ್ರದೇಶದ ನೆಲ್ಲೂರಿನವರು. ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದಾರೆ.

ಪರಿಣವ್‌ ಗುಂಜೂರಿನ ಡೀನ್ಸ್‌ ಅಕಾಡೆಮಿಯಲ್ಲಿ ಆರನೇ ತರಗತಿ ವಿದ್ಯಾರ್ಥಿ. ಅದರ ಜತೆಗೆ ವೈಟ್‌ ಫೀಲ್ಡ್‌ನ ಅಲೆನ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಟ್ಯೂಷನ್‌ಗೆ ಹೋಗುತ್ತಿದ್ದ. ಕಳೆದ ಭಾನುವಾರ (ಜನವರಿ 21) ಅವನು ಬೆಳಗ್ಗೆ 8.30ಕ್ಕೆ ಟ್ಯೂಷನ್‌ ಸೆಂಟರ್‌ಗೆ ಹೋಗಿದ್ದ. ಮಧ್ಯಾಹ್ನ 12.30ಕ್ಕೆ‌ ಸುಕೇಶ್‌ ಅವರು ಮಗನನ್ನು ಕರೆದುಕೊಂಡು ಬರಲೆಂದು ಟ್ಯೂಷನ್‌ ಸೆಂಟರ್‌ಗೆ ಹೋಗಿದ್ದರು. ಆದರೆ, ಅಷ್ಟು ಹೊತ್ತಿಗೆ ಪರಿಣವ್‌ ಅಲ್ಲಿ ಇರಲಿಲ್ಲ. ಈ ಟ್ಯೂಷನ್‌ ಸೆಂಟರ್‌ನಲ್ಲಿ 8 ವರ್ಷದೊಳಗಿನ ಮಕ್ಕಳನ್ನು ಪೋಷಕರು ಬಂದ ಮೇಲೆಯೇ ಕಳುಹಿಸುತ್ತಾರೆ. ದೊಡ್ಡ ಮಕ್ಕಳು ಅವರ ಪಾಡಿಗೆ ಹೋಗುತ್ತಾರೆ. ಹಾಗಾಗಿ 12 ವರ್ಷದ ಪರಿಣವ್‌ನನ್ನು ಟ್ಯೂಷನ್‌ ಕ್ಲಾಸ್‌ನವರು ಹೊರಗೆ ಹೋಗಲು ಬಿಟ್ಟಿದ್ದರು.

ಮಗ ಟ್ಯೂಷನ್‌ ಸೆಂಟರ್‌ನಿಂದ ಹೊರಗೆ ಬಂದಿದ್ದಾನೆ ಎಂದು ತಿಳಿದ ಸುಕೇಶ್‌ ಮನೆಗೆ ಬಂದರು. ಆದರೆ, ಪರಿಣವ್‌ ಇನ್ನೂ ಬಂದೇ ಇರಲಿಲ್ಲ. ಸ್ವಲ್ಪ ಹೊತ್ತು ಕಾದರೂ ಫಲ ಸಿಗಲಿಲ್ಲ. ಕೂಡಲೇ ಅವರು ತಮ್ಮ ಗೆಳೆಯರಿಗೆ, ಅಪಾರ್ಟ್‌ಮೆಂಟ್‌ ಅಸೋಸಿಯೇಷನ್‌ಗೆ ತಿಳಿಸಿದರು. ಪೊಲೀಸರಿಗೆ ದೂರು ನೀಡಲಾಯಿತು. ಪೊಲೀಸರು ಇದೊಂದು ಅಪಹರಣ ಕೇಸ್‌ ಆಗಿರಲೂಬಹುದು ಎಂಬ ನೆಲೆಯಲ್ಲಿ ಹುಡುಕಾಟ ಶುರು ಮಾಡಿದರು.

ಯಾಕೆಂದರೆ, ಪರಿಣವ್‌ ತುಂಬ ಶಾಂತ ಸ್ವಭಾವದ ಒಳ್ಳೆ ಹುಡುಗನಾಗಿದ್ದ. ಚೂಟಿಯಾಗಿದ್ದರೂ ತಂಟೆ ತರಲೆ ಹುಡುಗನಲ್ಲ. ಜತೆಗೆ ಮನೆ ಬಿಟ್ಟು ಓಡಿ ಹೋಗುವ ಯಾವುದೇ ಸನ್ನಿವೇಶ ಇರಲಿಲ್ಲ ಎಂದು ಮನೆಯವರು ಹೇಳಿದ್ದರು. ಹೀಗಾಗಿ ಹುಡುಕಾಟ ಶುರುವಾಯಿತು.

ಮೆಜೆಸ್ಟಿಕ್‌ನಲ್ಲಿ ಮಿಂಚಿ ಮರೆಯಾದ ಹುಡುಗ ಮತ್ತೆ ನಾಪತ್ತೆ!

ಕೂಡಲೇ ಗುಂಡು ಗುಂಡಗೆ ಇರುವ ಪರಿಣವ್‌ನ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಲಾಯಿತು. ಕೆಲವು ಕಡೆ ಪೋಸ್ಟರ್‌ಗಳನ್ನು ಹಾಕಲಾಯಿತು. ಪೊಲೀಸರು ನೂರಾರು ಸಿಸಿಟಿವಿಗಳನ್ನು ಚಕಚಕನೆ ಚೆಕ್‌ ಮಾಡಿದರು. ಅಂತಿಮವಾಗಿ ಪರಿಣವ್‌ ಸಂಜೆ 4.39ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಿಂತಿರುವುದು ಕಂಡುಬಂತು. ಹಳದಿ ಬಣ್ಣದ ಟೀ ಶರ್ಟ್‌, ಬೆನ್ನಿಗೊಂದು ಬ್ಯಾಗ್‌ ಹಾಕಿಕೊಂಡು ನಿಂತಿದ್ದ ಅವನು ಪತ್ತೆಯಾದ. ಆದರೆ, ಕೂಡಲೇ ಅಲ್ಲಿಗೆ ಧಾವಿಸಿದರೆ ಅವನು ನಾಪತ್ತೆ! ಪೊಲೀಸರು ಆತ ಅಲ್ಲಿಂದ ತಪ್ಪಿಸಿಕೊಂಡು ಬೇರೆ ಊರಿಗೆ ಹೋಗಿರಬಹುದು ಎಂದು ಹೇಳಿದರು. ಎಲ್ಲಿ ಹುಡುಕುವುದು ಎಂದು ಅರಿಯದೆ ಕೈಚೆಲ್ಲಿದರು. ಇದಾಗಿ ಮೂರು ದಿನಗಳೇ ಕಳೆದರು. ಹೆತ್ತವರು ಕಣ್ಣೀರು ಹಾಕುತ್ತಾ ಕುಳಿತರು. ಅದರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ʻನಮ್ಮ ಮಗ ನಿಮಗೆ ಕಂಡರೆ ಹೇಳಿʼ ಎಂದು ಫೋಟೊ ಹಾಕಿ ಅಂಗಲಾಚಿದರು.

Bengaluru boy goes missing from coaching centre, found in Hyderabad after 3 days

ಹೈದರಾಬಾದ್‌ನಲ್ಲಿ ಕಂಡಿದ್ದು ಅವನೇನಾ?

ಈ ನಡುವೆ, ಹೈದರಾಬಾದ್‌ನ ನ್ಯಾಂಪಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿ ತಂದೆ-ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಭಾವಚಿತ್ರವನ್ನು ಹೋಲುವ ಒಬ್ಬ ಹುಡುಗ ಕಾಣಿಸಿದ. ಅದು ಕಾಣಿಸಿದ್ದು ಬೆಂಗಳೂರಿನದ್ದೇ ಒಬ್ಬ ಮಹಿಳೆಗೆ ಎಂದರೆ ನೀವು ಅಚ್ಚರಿ ಪಡುತ್ತೀರಿ.!

ಅವರ ಹೆಸರು ವಂದನಾ ಮೆನನ್‌. ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ವಂದನಾ ಮೆನನ್‌ ಅವರು ವೃತ್ತಿ ಸಂಬಂಧಿತ ಕೆಲಸಗಳಿಗಾಗಿ ಬುಧವಾರ ಬೆಳಗ್ಗೆ ಹೈದರಾಬಾದ್‌ ತಲುಪಿದ್ದರು. ಅಲ್ಲಿ ನ್ಯಾಂಪಲ್ಲಿ ಸ್ಟೇಷನ್‌ನಲ್ಲಿದ್ದಾಗ ಅವರಿಗೆ ಈ ಹುಡುಗ ಕಂಡ. ಕಂಡ ಅನ್ನುವುದಕ್ಕಿಂತಲೂ ಅವರ ಕಣ್ಣುಗಳು ಕೂಡಾ ಹುಡುಕುತ್ತಿದ್ದವು.

ವಂದನಾ ಮೆನನ್‌ ವಾಸವಾಗಿರುವುದು ಬೆಂಗಳೂರಿನ ವೈಟ್‌ ಫೀಲ್ಡ್‌ನಲ್ಲೇ. ಹೀಗಾಗಿ ಅವರು ತಮ್ಮ ಭಾಗದ ಈ ಹುಡುಗನ ನಾಪತ್ತೆ ಮತ್ತು ಹುಡುಕಾಟದ ಕಥೆಯನ್ನು ವಾಟ್ಸ್‌ ಆಪ್‌ ಗ್ರೂಪ್‌ಗಳಲ್ಲಿ ಫಾಲೋ ಮಾಡುತ್ತಿದ್ದರು. ಒಂದು ಮಗು ಕಳೆದು ಹೋದ ನೋವು, ಹೆತ್ತವರ ಕಣ್ಣೀರನ್ನು ಅವರು ಸ್ವತಃ ಅನುಭವಿಸಿದ್ದರು. ಹೀಗಾಗಿ ಹೈದರಾಬಾದ್‌ಗೆ ವೈಯಕ್ತಿಕ ಕೆಲಸಕ್ಕೆ ಹೋಗಿದ್ದರೂ ಅವರಿಗೆ ಈ ಹುಡುಗನ ಚಿತ್ರವೇ ಕಾಡುತ್ತಿತ್ತು.

Boy Missing from Bangalore

ಹಾಗಿದ್ದರೆ ನ್ಯಾಂಪಲ್ಲಿ ಸ್ಟೇಷನ್‌ನಲ್ಲಿ ಏನು ನಡೆಯಿತು?

ʻʻನಾನು ನ್ಯಾಂಪಲ್ಲಿ ಮೆಟ್ರೋ ಸ್ಟೇಷನ್‌ನಲ್ಲಿದ್ದೆ. ನನಗೆ ಗಚಿಬೌಲಿಗೆ ಹೋಗಲು ರೈಲಿಗೆ ಕಾಯುತ್ತಿದ್ದೆ. ಆಗ ಅಲ್ಲಿ ಈ ಹುಡುಗನಂತೆಯೇ ಇರುವ ಹುಡುಗನೊಬ್ಬ ಟಿಕೆಟ್‌ ಕೊಳ್ಳಲು ಕ್ಯೂನಲ್ಲಿ ನಿಂತಿರುವುದು ಕಂಡಿತು. ಸೋಷಿಯಲ್‌ ಮೀಡಿಯಾದಲ್ಲಿ ಯಾವ ಡ್ರೆಸ್‌ನ ಚಿತ್ರಗಳನ್ನು ಹಾಕಲಾಗಿತ್ತೋ, ಅವನು ಶಾಲೆಗೆ ಯಾವ ಡ್ರೆಸ್‌ ಹಾಕಿಕೊಂಡಿದ್ದನೋ ಅದೇ ಬಟ್ಟೆಯನ್ನು ಹಾಕಿದ್ದ. ನಾನು ಕೂಡಲೇ ಅವನ ಬಳಿಗೆ ಹೋದೆ. ಕೂಡಲೇ ಏನೂ ಕೇಳಲಿಲ್ಲ. ಸುಮ್ಮನೆ ಲೋಕಾಭಿರಾಮವಾಗಿ ಮಾತನಾಡಿಸಿದೆ. ಎಲ್ಲಿ ಮನೆ ಎಂದೆಲ್ಲ ಕೇಳಿದೆ. ಅವನು ನಾನು ಬೆಂಗಳೂರಿನಲ್ಲಿರುವುದು, ವೈಟ್‌ ಫೀಲ್ಡ್‌ನಲ್ಲಿ ಅಂದ. ನಾನು ಅಲ್ಲೇ ಇರುವುದು ಎಂದು ನಾನು ಹೇಳಿದೆ. ಅವನ ಮಾತಿನಲ್ಲಿ ಅವನೇ ತಪ್ಪಿಸಿಕೊಂಡು ಬಂದ ಪರಿಣವ್‌ ಎನ್ನುವುದು ಸ್ಪಷ್ಟವಾಯಿತು. ನಾನು ಕೂಡಲೇ ನನ್ನ ಗಂಡನಿಗೆ ಕರೆ ಮಾಡಿದೆ. ಯಾರಿಗಾದರೂ ಹೇಳಿ ಪೋಷಕರಿಗೆ ವಿಷಯ ತಿಳಿಸಿ ಎಂದೆ. ನಾನು ಮಲಯಾಳಂನಲ್ಲಿ ಮಾತನಾಡಿದ್ದರಿಂದ ಅವನಿಗೆ ನಾನು ಮಾತನಾಡುತ್ತಿದ್ದುದೇನು ಎಂದು ಅರ್ಥವಾಗಲಿಲ್ಲ. ಅವನು ಶಾಂತವಾಗಿಯೇ ಇದ್ದ. ನಾನು ಕೂಡಾ ಶಾಂತವಾಗಿಯೇ ಮಾತನಾಡುತ್ತಿದ್ದೆ. ಅವನೊಂದಿಗೆ ಚೆನ್ನಾಗಿಯೇ ಮಾತನಾಡಿದ ನಾನು ಅದೇ ಹೊತ್ತಿಗೆ ಈ ವಿಚಾರವನ್ನು ಮೆಟ್ರೋ ಸಿಬ್ಬಂದಿಗೂ ದಾಟಿಸಿದೆ. ಅಷ್ಟು ಹೊತ್ತಿಗೆ ನನ್ನ ಗಂಡ ಪರಿಣವ್‌ನ ಹೆತ್ತವರನ್ನು ಸಂಪರ್ಕಿಸಿದ್ದರು. ಮತ್ತು ಹೆತ್ತವರು ನನಗೆ ವಾಟ್ಸ್‌ ಆಪ್‌ ಕಾಲ್‌ ಮಾಡಿದರು. ಅವನ ಜತೆಗೆ ಮಾತನಾಡಿದರು. ಬಳಿಕ ಈ ಬಾಲಕನ ತಂದೆ ಸುಕೇಶ್‌ ಅವರ ಗೆಳೆಯರೊಬ್ಬರು ಅಲ್ಲಿಗೆ ಬಂದು ಹುಡುಗನನ್ನು ಕರೆದುಕೊಂಡು ಹೋದರು. ನಾನು ನಿರಾಳವಾಗಿ ನನ್ನ ಕೆಲಸಕ್ಕೆ ತೆರಳಿದೆʼʼ ಎಂದು ವಂದನಾ ಮೆನನ್‌ ಅವರು ಇಂಡಿಯನ್‌ ಎಕ್ಸ್‌ಪ್ರೆಸ್‌ ಜತೆ ಮಾತನಾಡಿ ವಿವರಿಸಿದ್ದಾರೆ.

ಈ ನಡುವೆ, ಪರಿಣವ್‌ನ ತಾಯಿ ಸಂಭ್ರಮದಿಂದ ಕುಣಿದಾಡಿದ್ದಾರೆ. ನನ್ನ ಮಗ ಸಿಕ್ಕಿದ ಎಂದು ವಿಡಿಯೊ ಮಾಡಿ ಹಾಕಿದ್ದಾರೆ.

ಪರಿಣವ್‌ ಬಳಿ ಇದ್ದಿದ್ದು 100 ರೂ. ಮಾತ್ರ! ಹೈದರಾಬಾದ್‌ ತಲುಪಿದ್ದು ಹೇಗೆ?

ನಿಜವೆಂದರೆ ಪರಿಣವ್‌ ಮನೆಯಿಂದ ಹೊರಟಾಗ ಅವನ ಕೈಯಲ್ಲಿ ಇದ್ದದ್ದು ಕೇವಲ ನೂರು ರೂಪಾಯಿ ಮಾತ್ರ. ಹಾಗಿದ್ದರೆ ಅವನು ಹೈದರಾಬಾದ್‌ ತಲುಪಿದ್ದು ಹೇಗೆ?

ಅವನೇ ಹೇಳುವ ಪ್ರಕಾರ, ಅವನು ಮನೆಯಿಂದ ಮೆಜೆಸ್ಟಿಕ್‌ಗೆ ಬಂದಿದ್ದಾನೆ. ಅಲ್ಲಿಂದ ರೈಲ್ವೇ ನಿಲ್ದಾಣಕ್ಕೆ ಹೋಗಿದ್ದಾನೆ. ಅಲ್ಲಿಂದ ರೈಲಿನಲ್ಲಿ ಮೈಸೂರಿಗೆ ಹೋಗಿದ್ದಾನೆ. ಅಲ್ಲಿಂದ ಚೆನ್ನೈಗೆ ಹೋಗುವ ರೈಲು ಹತ್ತಿದ್ದಾನೆ. ಚೆನ್ನೈಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಹೈದರಾಬಾದ್!‌ ಆದರೆ, ಯಾವ ಮಾರ್ಗದಲ್ಲೂ ಅವನು ರೈಲಿನಲ್ಲಿ ಟಿಕೆಟ್‌ ಮಾಡಿಲ್ಲ!

ತನ್ನ ಬಳಿ ಇದ್ದ ನೂರು ರೂಪಾಯಿಯಲ್ಲೇ ಸ್ವಲ್ಪ ಸ್ವಲ್ವ ಖರ್ಚು ಮಾಡಿಕೊಂಡು ಸ್ವಲ್ಪ ಸ್ವಲ್ಪ ತಿಂದು ಎರಡು ದಿನ ಕಳೆದಿದ್ದಾನೆ.

ಇನ್ನೊಂದು ವಿಶೇಷವೆಂದರೆ ಅವನಲ್ಲಿ ಕೆಲವು ಪಾರ್ಕರ್‌ ಪೆನ್ನುಗಳಿದ್ದವು. ಅವುಗಳನ್ನು ಮಾರಿ ಒಂದಿಷ್ಟು ಹಣವನ್ನು ಪಡೆದುಕೊಂಡಿದ್ದಾನೆ. ಕೆಲವರು ಹುಡುಗ ಎಂಬ ಕಾರಣಕ್ಕೆ ಹೆಚ್ಚೇ ಹಣ ಕೊಟ್ಟಿದ್ದಾರೆ! ಹೀಗೆ ಬಹಳ ಕಷ್ಟದಿಂದ ದಿನ ದೂಡಿದ್ದ ಆ ಹುಡುಗ ಕೊನೆಗೂ ಸಿಕ್ಕಿದ್ದಾನೆ.

ಹಾಗಿದ್ದರೆ ಅವನು ಮನೆ ಬಿಟ್ಟು ಹೋಗಿದ್ದು ಯಾಕೆ?

ಎಲ್ಲರೂ ಹೇಳುವಂತೆ ಅವರದು ತುಂಬ ಒಳ್ಳೆಯ ಕುಟುಂಬ. ಇವನೂ ಸೀದಾ ಸಾದಾ ಹುಡುಗ. ಆದರೆ ಒಂದು ಸಣ್ಣ ಕಿರಿಕಿರಿ ಮಾಡಿಕೊಂಡಿದ್ದ. ಅದೇನೆಂದರೆ, ಅವನು ಹೋಮ್‌ ವರ್ಕ್‌ ಮಾಡಿರಲಿಲ್ಲ. ನೀನು ಹೋಮ್‌ ವರ್ಕ್‌ ಮಾಡಿಲ್ಲ ಎಂದು ನಿನ್ನ ತಂದೆಗೆ ಹೇಳುತ್ತೇವೆ ಎಂದು ಶಿಕ್ಷಕರು ಆತನಿಗೆ ಹೆದರಿಸಿದ್ದಾರೆ. ಇದರಿಂದ ಅವನಿಗೆ ಹೆದರಿಕೆಯಾಗಿದೆ ಎನ್ನಲಾಗಿದೆ. ಜತೆಗೆ ಪರೀಕ್ಷೆಯಲ್ಲೂ ಏನೋ ಕಿತಾಪತಿ ಮಾಡಿದ್ದ. ಹೀಗಾಗಿ ಭಯಗೊಂಡ ಅವನು ಮನೆಯವರ ಕೈಗೆ ಸಿಕ್ಕಿದರೆ ಕಷ್ಟ ಎಂದು ಮನೆಯನ್ನೇ ಬಿಟ್ಟು ಹೊರಟಿದ್ದಾನೆ. ಹಾಗೆ ಹೊರಟವನ ಜರ್ನಿಯೇ ಒಂದು ದೊಡ್ಡ ಕಥೆಯಾಗಿದೆ.

Exit mobile version