ರಾಯಚೂರು: ಏಳು ವರ್ಷದ ಮಗುವನ್ನೂ ಬಿಟ್ಟು ಮನೆ ತೊರೆದು ಹೋಗಿದ್ದ ವಿವಾಹಿತ ಶಿಕ್ಷಕಿ ಸುಹಾಸಿನಿ (೨೯) ಅವರನ್ನು ಪೊಲೀಸರು ಮಂತ್ರಾಲಯದಲ್ಲಿ ಪತ್ತೆ ಹಚ್ಚಿ ಮನೆಗೆ ಕರೆ ತಂದಿದ್ದಾರೆ. ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ ಅವರು ಅ.20ರಂದು ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಆಕೆ ಸಲೀಂ ಎಂಬ ಮುಸ್ಲಿಂ ಯುವಕನ ಜೊತೆ ಹೋಗಿರುವುದಾಗಿ ಸುಹಾಸಿನಿ ಅವರ ತಾಯಿ ನಿರ್ಮಲಾ ಅವರು ಈ ಕುರಿತು ಆರೋಪ ಮಾಡಿದ್ದರು. ಈ ಬಗ್ಗೆ ವಿಸ್ತಾರ ನ್ಯೂಸ್ ವರದಿ ಮಾಡಿದ ಬೆನ್ನಿಗೇ ಪೊಲೀಸರು ಅಲರ್ಟ್ ಆಗಿ ಪತ್ತೆಗೆ ಮುಂದಾಗಿದ್ದರು. ಹೀಗಾಗಿ ತಿಂಗಳ ಹಿಂದಿನ ನಾಪತ್ತೆ ಪ್ರಕರಣಕ್ಕೆ ಮತ್ತೆ ಜೀವ ಬಂದಿತ್ತು.
ತಾನು ಸುಹಾಸಿನಿಯ ಕ್ಲಾಸ್‌ಮೇಟ್ ಎಂಬ ನೆಪವೊಡ್ಡಿ ಸಲೀಂ ಪದೇ ಪದೆ ಮನೆಗೆ ಬರುತ್ತಿದ್ದ. ಯಾರೂ ಇಲ್ಲದ ವೇಳೆ ಮನೆಗೆ ಬಂದು ಸರಸವಾಡುತ್ತಿದ್ದ. ಮದುವೆ ಆಗಿ ಮಕ್ಕಳಿದ್ದರೂ ಶಿಕ್ಷಕಿ ಸುಹಾಸಿನಿ ಜೊತೆ ಸಲೀಂ ಸಂಪರ್ಕ ಹೊಂದಿದ್ದಾನೆ. ಒಂದು ತಿಂಗಳ ಹಿಂದೆ ಮನೆಯಲ್ಲಿ ವಿಚಾರ ಗೊತ್ತಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ಸುಹಾಸಿನಿ ಮನೆಯವರು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಸುಹಾಸಿನಿ ಅವರಿಗೆ ಲಿಂಗರಾಜ ಎಂಬುವರ ಜತೆ ೧೦ ವರ್ಷದ ಹಿಂದೆ ಮದುವೆಯಾಗಿತ್ತು. ಯರಮರಸ್ ಬಳಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸುಹಾಸಿನಿಗೆ ೭ ವರ್ಷದ ಮಗುವಿದೆ. ಲವ್ ಜಿಹಾದ್ ಆರೋಪ ಹೊತ್ತಿರುವ ಸಲೀಂ, ರಾಯಚೂರು ನಗರದ ಹೊರವಲಯದ ಪೊತಗಲ್ ಗ್ರಾಮದ ನಿವಾಸಿ. ಈತ ಗಂಜ್‌ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ. ಸಲೀಂಗೆ ಮದುವೆಯಾಗಿ ಒಂದು ಹೆಣ್ಣು ಮಗು ಇದೆ. ಆದರೂ ಈತ ಶಿಕ್ಷಕಿ ಸುಹಾಸಿನಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಸುಹಾಸಿನಿ ತಾನು ಸಲೀಂನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದರು ಎನ್ನಲಾಗಿದೆ. ಡೈವೋರ್ಸ್ ಆಗದೆ ಬೇರೆ ಮದುವೆ ಆಗುವುದು ಹೇಗೆ ಎಂದು ಮನೆಯಲ್ಲಿ ಚರ್ಚೆಯಾದಾಗ ಅಕ್ಟೋಬರ್ ೨೦ರಂದು ಸಿಟ್ಟಿನಲ್ಲಿ ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಸಲೀಂ ಮೇಲೆ ದೂರು ಕೊಟ್ಟರೂ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ ಎಂದು ಮನೆಯವರು ಆರೋಪಿಸಿದ್ದರು.
ಠಾಣೆಗೆ ಕರೆತಂದ ಪೊಲೀಸರು
ಇದೀಗ ಸುಹಾಸಿನಿ ಅವರನ್ನು ಮಂತ್ರಾಲಯದಲ್ಲಿ ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ರಾಯಚೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.
ಮಂತ್ರಾಲಯದಲ್ಲಿ ತಾನು ಇದ್ದ ಬಗ್ಗೆ, ಸಲೀಂ ಜತೆಗಿನ ಸ್ನೇಹದ ಬಗ್ಗೆ ಅವರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ. ಸಲೀಂ ಜತೆಗೇ ಇರುವುದಾಗಿ ಸುಹಾಸಿನಿ ಹೇಳಿದ್ದಾರೆನ್ನಲಾಗಿದೆ. ಇದನ್ನು ವಿಡಿಯೊ ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ವಿಚಾರಣೆಯ ಬಳಿಕ ಮುಚ್ಚಳಿಕೆ ಬರೆಸಿಕೊಂಡು ಸುಹಾಸಿನಿ ಅವರನ್ನು ಪೋಷಕರ ಕೈಗೆ ಒಪ್ಪಿಸಲಾಗಿದೆ.
ಸುಹಾಸಿನಿ ಮನೆಗೆ ಹಿಂದು ಸಂಘಟನೆಗಳ ಭೇಟಿ
ಈ ನಡುವೆ ಇದೊಂದು ಲವ್ ಜಿಹಾದ್ ಪ್ರಕರಣವೆಂಬ ಆರೋಪ ಕೇಳಿಬರುತ್ತಿದ್ದಂತೆಯೇ ಗುರುವಾರ ರಾತ್ರಿಯೇ ಹಿಂದುಪರ ಸಂಘಟನೆಗಳು ಶಿಕ್ಷಕಿಯ ಮನೆಗೆ ಭೇಟಿ ನೀಡಿ ಮನವೊಲಿಕೆಗೆ ಪ್ರಯತ್ನಿಸಿವೆ.
ಭೇಟಿಯ ಬಳಿಕ ಮಾದ್ಯಮಗಳಿಗೆ ಹೇಳಿಕೆ ನೀಡಿದ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತೆ ಸುವರ್ಣ, ʻʻಮೊಬೈಲ್, ಫ್ರೆಂಡ್ ಶಿಪ್ ಹೆಸರಿನಲ್ಲಿ ಬಲೆ ಹಾಕಲಾಗುತ್ತದೆ. ಈ ಕೃತ್ಯ ಎಸಗಲು ಒಂದು ಟೀಂ ಮಾಡಿಕೊಂಡಿರುತ್ತಾರೆ. ಮಹಿಳೆಯರ ದೌರ್ಬಲ್ಯದ ವಿಚಾರಗಳನ್ನು ಹುಡುಕುತ್ತಾರೆ. ಅವರು ಆರ್ಥಿಕವಾಗಿ ದುರ್ಬಲವಾಗಿದ್ದಾರಾ? ಮಾನಸಿಕವಾಗಿ ವೀಕ್ ಆಗಿದ್ದಾರಾ ಎಂದು ಶೋಧಿಸಿ ಗಾಳ ಹಾಕುತ್ತಾರೆ. ಈ ವಿಚಾರದಲ್ಲಿ ಹಿಂದು ಹೆಣ್ಣು ಮಕ್ಕಳು ಹುಷಾರಾಗಿರಬೇಕುʼʼ ಎಂದು ಹೇಳಿದರು.
ಮನೆಯಲ್ಲಿರುವ ಸುಹಾಸಿನಿ
ಈ ನಡುವೆ, ಸುಹಾಸಿನಿ ಅವರ ತಾಯಿ ನಿರ್ಮಲಾ ಅವರು ಹೇಳಿಕೆ ನೀಡಿ, ʻʻನಮ್ಮ ಮನೆಗೆ ಧೈರ್ಯ ತುಂಬಿದ ಹಿಂದು ಸಂಘಟನೆಗಳಿಗೆ ಧನ್ಯವಾದ. ಪುನಃ ನಮ್ಮ ಮಗಳು ಮನೆಗೆ ಬಂದಿದ್ದು ಖುಷಿಯಾಗಿದೆ. ಮನೆಗೆ ಬಂದ ಬಳಿಕ ನಾವು ಯಾವುದೇ ವಿಚಾರ ಪ್ರಸ್ತಾಪಿಸಿಲ್ಲ. ಸುಹಾಸಿನಿ ಮಗ ಪುಲ್ ಖುಷಿಯಾಗಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ | ಮಗುವನ್ನೂ ಬಿಟ್ಟು ಪ್ರಿಯತಮನ ಜತೆ ಶಿಕ್ಷಕಿ ಪರಾರಿ, ಲವ್ ಜಿಹಾದ್ ಆರೋಪ