ಮಂಗಳೂರು: ಸುರತ್ಕಲ್‌ನ ಬಟ್ಟೆ ಅಂಗಡಿಯೊಂದರ ಮುಂದೆ ಮೊಹಮ್ಮದ್ ಫಾಜಿಲ್‌ನನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳ ತಂಡದ ಗುರಿ ಬೇರೆಯೇ ಇತ್ತು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ.
ದುಷ್ಕರ್ಮಿಗಳು ಬೆಳ್ಳಾರೆಯ ನೆಟ್ಟಾರಿನಲ್ಲಿ ನಡೆದ ಪ್ರವೀಣ್ ಹತ್ಯೆಗೆ ಪ್ರತಿಯಾಗಿ ಕೆಎಫ್‌ಡಿಯಲ್ಲಿ ಸಕ್ರಿಯವಾಗಿದ್ದ, ಸುರತ್ಕಲ್‌ನ ಮೊಬೈಲ್ ಅಂಗಡಿ ಮಾಲೀಕ ಫಾರೂಕ್ ಎಸ್.ಕೆ.ಯ ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಆದರೆ, ಆತ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಫಾಜಿಲ್ ಕೊಲೆಯಾಗಿ ಹೋಗಿದ್ದಾನೆ ಎನ್ನುವುದು ಈಗಿರುವ ಮಾಹಿತಿ.
ಆರಂಭಿಕ ಹಂತದಲ್ಲೇ ಫಾಜಿಲ್ ಕೊಲೆಯ ವಿಚಾರದಲ್ಲಿ ಹಲವು ಅನುಮಾನಗಳಿದ್ದವು. ಯಾಕೆಂದರೆ, ಫಾಜಿಲ್ ಯಾವುದೇ ಅನಾಹುತಕಾರಿ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ಅವನಿಗೆ ಧಾರ್ಮಿಕವಾದ ದ್ವೇಷಗಳಿರಲಿಲ್ಲ. ಹೀಗಾಗಿ ಧರ್ಮದ ಆಧಾರದಲ್ಲಿ ಕೊಲೆ ನಡೆದಿರಲಿಕ್ಕಿಲ್ಲ ಎಂಬ ಮಾತಿತ್ತು. ಆದರೆ, ಕೋಮು ಸಂಘರ್ಷ ಸಂಭವಿಸಿದಾಗ ಜೀವಕ್ಕೆ ಜೀವ ಎಂಬ ನೆಲೆಯಲ್ಲಿ ಯಾರಾದರೂ ಕೊಂದು ಹಾಕಿರಬಹುದೇ ಎಂಬ ಸಂಶಯವಿತ್ತು. ಈ ನಡುವೆ, ಫಾರೂಕ್ ನ ಹೆಸರು ಕೂಡಾ ಕೇಳಿಬಂದಿತ್ತು. ಫಾರೂಕ್‌ಗೆ ಸ್ಕೆಚ್ ಹಾಕಿದವರು ತಪ್ಪಿ ಫಾಜಿಲ್‌ನನ್ನು ಕೊಂದಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಈ ಮಿಸ್ಟೇಕನ್ ಐಡೆಂಟಿಟಿ ವಾದ ನಿಜವಾಗುವ ಸಾಧ್ಯತೆ ಇದೆ.
ಮಧ್ಯಾಹ್ನದಿಂದಲೇ ಬೆನ್ನಟ್ಟಿದ್ದರು
ಫಾಜಿಲ್ ಕೊಲೆಯಾದ ಅಂಗಡಿಯ ಪಕ್ಕದಲ್ಲೇ ಮೊಬೈಲ್ ಅಂಗಡಿ ಹೊಂದಿರುವ ಫಾರೂಕ್ ಎಸ್.ಕೆ. ಕೆಎಫ್‌ಡಿ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಎನ್ನಲಾಗಿದೆ. ಹೀಗಾಗಿ ಆತನ ಮೇಲೆ ಕಣ್ಣಿತ್ತು. ಈ ನಡುವೆ, ಪ್ರವೀಣ್ ಹತ್ಯೆಗೆ ಪ್ರತಿಕಾರ ತೀರಿಸಲು ಕಾದಿದ್ದ ಕೆಲವರು ಫಾರೂಕ್‌ನನ್ನೇ ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.
ಹೀಗಾಗಿ ಜು.28ರ ಮಧ್ಯಾಹ್ನದಿಂದಲೇ ಹಂತಕರ ತಂಡ ಫಾರೂಕ್ ಬೆನ್ನು ಬಿದ್ದಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಮುಕ್ಕ ಬಳಿಯಿಂದ ಫಾಲೋ ಮಾಡಲಾಗಿತ್ತು. ಆದರೆ, ಕಪ್ಪು ಬಣ್ಣದ ಕಾರೊಂದು ತನ್ನ ಹಿಂದೆ ಅನುಮಾನಾಸ್ಪದವಾಗಿ ಬರುತ್ತಿರುವುದನ್ನು ಗಮನಿಸಿದ್ದ ಫಾರೂಕ್ ದಾರಿ ತಪ್ಪಿಸಿದ್ದ. ಬಳಿಕ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಮಧ್ಯಾಹ್ನದ ಬಳಿಕ ಸಂಜೆ ಸ್ಕೆಚ್
ಈ ನಡುವೆ ಮಧ್ಯಾಹ್ನ ಟಾರ್ಗೆಟ್ ಮಿಸ್ ಆಯಿತು ಎಂದು ತಿಳಿದ ಹಂತಕರು ರಾತ್ರಿ ಮತ್ತೆ ಪ್ಲ್ಯಾನ್ ಮಾಡಿದರು ಎನ್ನಲಾಗಿದೆ. ಅಂತೆಯೇ ರಾತ್ರಿ ಸುಮಾರು ೭.೪೫ರ ಹೊತ್ತಿಗೆ ಬಿಳಿ ಬಣ್ಣದ ಕಾರಿನಲ್ಲಿ ಸುರತ್ಕಲ್‌ಗೆ ಎಂಟ್ರಿ ಕೊಟ್ಟಿರುವುದು ಸಿಸಿ ಟಿವಿ ಫೂಟೇಜ್‌ಗಳಿಂದಾಗಿ ಬೆಳಕಿಗೆ ಬಂದಿದೆ. ಫಾರೂಕ್‌ನ ಅಂಗಡಿ ಬಳಿಯೇ ಹಲವು ಸುತ್ತು ಹೊಡೆದ ಕಾರು ಅವನಿಗಾಗಿ ಕಾದು ಕುಳಿತಿತ್ತು. ಆದರೆ, ಮಧ್ಯಾಹ್ನದ ಅನುಮಾನಾಸ್ಪದ ಘಟನೆಗಳಿಂದ ಹೆದರಿದ್ದ ಫಾರೂಕ್ ಸಂಜೆಯೂ ತನ್ನ ಮೊಬೈಲ್ ಅಂಗಡಿಗೆ ಬಂದಿರಲಿಲ್ಲ.
ಈ ನಡುವೆ, ೮.೧೫ರವರೆಗೂ ಫಾರೂಕ್‌ಗಾಗಿ ಕಾದಿದ್ದ ತಂಡ ಅವನು ತಪ್ಪಿಸಿಕೊಂಡ ಎಂಬ ಹತಾಶೆಯಿಂದ ಅಂತಿಮವಾಗಿ ಅಲ್ಲಿ ಕೈಗೆ ಸಿಕ್ಕಿದ ಫಾಜಿಲ್ ಮೇಲೆ ಅಟ್ಯಾಕ್ ಮಾಡಿದೆ ಎಂದು ಹೇಳಲಾಗುತ್ತಿದೆ.ಿ
ಇದನ್ನೂ ಓದಿ| ಫಾಜಿಲ್ ಹತ್ಯೆಗೆ ಮಿಸ್ಟೇಕನ್ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ