ಇಂಡಿ (ವಿಜಯಪುರ): ಇತ್ತೀಚೆಗೆ ಮಕ್ಕಳ ಕಳ್ಳರೆಂದು ಭಾವಿಸಿ ಅಪರಿಚಿತ ವ್ಯಕ್ತಿಗಳನ್ನು ಕಟ್ಟಿ ಹಾಕಿ ಹೊಡೆಯುವ ದುಷ್ಕೃತ್ಯಗಳು ಹೆಚ್ಚಾಗಿವೆ. ಆದರೆ, ವಿಜಯಪುರದ ಇಂಡಿ ತಾಲೂಕಿನ ಹೊಸಮನಿ ಹಟ್ಟಿಯಲ್ಲಿ ಕಳ್ಳರೆಂದು ಭಾವಿಸಿ ಕಾರ್ಮಿಕರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ.
ಸುಮಾರು ೧೨ ಮಂದಿ ಕಾರ್ಮಿಕರು ತಮಿಳುನಾಡಿನಿಂದ ಇಂಡಿಯ ಹೊಸಮನಿ ಹಟ್ಟಿಗೆ ಬಂದಿದ್ದರು. ಆದರೆ, ಜನರು ಅಪರಿಚಿತರು ಯಾರೋ ಬಂದಿದ್ದಾರೆ. ಕಳ್ಳತನ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಅವರ ಮೇಲೆ ಮುಗಿಬಿದ್ದರು.
ಹಲ್ಲೆ ಮಾಡಲು ಶುರು ಮಾಡುತ್ತಿದ್ದಂತೆಯೇ ೧೦ ಮಂದಿ ಕಾರ್ಮಿಕರು ಹೇಗೋ ತಪ್ಪಿಸಿಕೊಂಡು ಓಡಿ ಹೋದರು. ಕೈಗೆ ಸಿಕ್ಕಿದ ಇಬ್ಬರ ಮೇಲೆ ಗ್ರಾಮಸ್ಥರು ಬೇಕಾಬಿಟ್ಟಿ ಹಲ್ಲೆ ಮಾಡಿದ್ದಾರೆ.
ನಾವು ಕಳ್ಳರಲ್ಲ, ಕೂಲಿ ಮಾಡಲು ಬಂದಿದ್ದೇವೆ ಎಂದು ಹೇಳಿದರೂ ಯಾರೂ ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ. ಕಾರ್ಮಿಕರು ಎಂದಾದರೆ ಆ ಹತ್ತು ಜನ ಯಾಕೆ ಓಡಿ ಹೋದರು ಎಂದು ಪ್ರಶ್ನಿಸಿ ಉಳಿದ ಇಬ್ಬರ ಮೇಲೆ ಹಲ್ಲೆ ಮಾಡಿದರು. ಕಾರ್ಮಿಕರ ಕೈಕಾಲು ಕಟ್ಟಿ ಥಳಿಸಿದರು.
ಕೊನೆಗೆ ಅವರನ್ನು ಇಂಡಿ ಪಟ್ಟಣ ಪೊಲೀಸರಿಗೆ ಒಪ್ಪಿಸಲಾಯಿತು. ವಿಚಾರಣೆ ವೇಳೆ ಅವರು ಕಳ್ಳರಲ್ಲ ಎನ್ನುವುದು ಸ್ಪಷ್ಟವಾಯಿತು. ಇವರು ತಮಿಳುನಾಡಿನಿಂದ ಬಂದಿದ್ದು, ಭಾನುವಾರ ತಡ ರಾತ್ರಿ ಊರಿಗೆ ಹೊರಟಿದ್ದರು ಎಂದು ತಿಳಿದುಬಂತು.
ತೀವ್ರವಾಗಿ ಹಲ್ಲೆಗೊಳಗಾದ ಇಬ್ಬರಿಗೆ ಪೊಲೀಸರೇ ಚಿಕಿತ್ಸೆ ಕೊಡಿಸಿದ್ದಾರೆ. ಅಪರಿಚಿತರ ಮೇಲೆ ಏಕಾಏಕಿ ಹಲ್ಲೆ ಮಾಡಬಾರದೆಂದು ಹೊಸಮನಿ ಹಟ್ಟಿ ವಾಸಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇಂಡಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಬಾಲಕನ ಬಳಿ ದಾರಿ ಕೇಳಿದ ನಾಲ್ವರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಥಳಿಸಿದ ಗ್ರಾಮಸ್ಥರು