Site icon Vistara News

ಮುರುಘಾಶ್ರೀ ಪ್ರಕರಣ | ನಕ್ಸಲರ ಅಡ್ಡೆಯಾಗಿತ್ತು ಮಠ ಎಂದ ಯತ್ನಾಳ್‌: ಹೈಕೋರ್ಟ್‌ CJಗೆ ಪತ್ರ

Basanagowda pateel yatnal on Shivamogga violence

ಬೆಂಗಳೂರು: ಚಿತ್ರದುರ್ಗದ ಮುರುಘಾ ಮಠ, ಪ್ರಗತಿಪರರ ಹಾಗೂ ನಕ್ಸಲರ ಅಡ್ಡೆಯಾಗಿತ್ತು ಎಂದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮುರುಘಾಶ್ರೀಗಳ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ನಡೆಸಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ರಚನೆಯಾಗಲು ಕಾರಣರಾದ ಬಾಂಬೆ ಬಾಯ್ಸ್‌ (17 ಶಾಸಕರು) ಕುರಿತು ಮಾತನ್ನು ಆರಂಭಿಸಿದ ಯತ್ನಾಳ್‌, ಬಾಂಬೆ ಬಾಯ್ಸ್‌ರಿಂದ ಈ ಸರ್ಕಾರ ರಚನೆ ಆಗಿದೆ. ಅವರಿಗೆ ನೋವಾಗಿದೆ. ಸೂಕ್ತ ಸ್ಥಾನಮಾನ ಕೊಡುತ್ತೇನೆ ಎಂದು ಸಿಎಂ ಭರವಸೆ ಕೊಟ್ಡಿದ್ದಾರೆ. ಆದರೆ ನಾನು ನಾನು ಯಾವ ಬಾಯ್ಸ್ ವಿರುದ್ಧವೂ ಮಾತನಾಡಿಲ್ಲ. ನಾನು ಚಿತ್ರದುರ್ಗ ಬಾಯ್ಸ್ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.

ಚಿತ್ರದುರ್ಗದ ಮುರುಘಾ ಮಠದ ಪ್ರಕರಣದಲ್ಲಿ ಸುಪ್ರಿಂಕೋರ್ಟ್ ಅಥವಾ ಕರ್ನಾಟಕದ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ‌ ತನಿಖೆ ನಡೆಸಬೇಕು. ಅಪ್ರಾಪ್ತ ಬಾಲಕಿ‌ ಮೇಲಿನ ಲೈಂಗಿಕ‌ ಕಿರುಕುಳ ಆರೋಪ ಹಿನ್ನಲೆಯಲ್ಲಿ ಮಠದಲ್ಲಿನ ಆಗುಹೋಗುಗಳ ಬಗ್ಗೆ ತನಿಖೆ ಮಾಡಬೇಕು. ಮಠದ ವ್ಯವಹಾರ, ಬ್ಯಾಂಕ್ ವ್ಯವಹಾರ, ಆಸ್ತಿ ಬಗ್ಗೆ ಸಮಿತಿ ತನಿಖೆ ನಡೆಸಬೇಕು. ನಾಲ್ಕು ಸಮಾಜದ ಮುಖಂಡರ ನೇತೃತ್ವದ ಸಮಿತಿ ರಚಿಸಿ ತನಿಖೆಯನ್ನು ಮುಂದುವರಿಸಬೇಕು. ಈ ಕುರಿತು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಗೆ ಪತ್ರ ಬರೆಯುತ್ತೇನೆ ಎಂದರು.

ಸ್ವಾಮಿಗಳನ್ನು ಗದ್ದುಗೆಯಿಂದ ಕೆಳಗಿಳಿಸಿ,‌ ಮೂರು ತಿಂಗಳೊಳಗೆ ಒಳ್ಳೆಯ ಶ್ರೀಗಳನ್ನು ಗದ್ದುಗೆ ಏರಿಸಬೇಕು ಎಂದ ಯತ್ನಾಳ್‌, ಆ ಮೂಲಕ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ಈ ಪ್ರಕರಣದಿಂದ ಸಂಪೂರ್ಣ ವೀರಶೈವ ಲಿಂಗಾಯತರ ಸಮುದಾಯಕ್ಕೆ ಅವಮಾನವಾಗಿದೆ. ಅದೊಂದು ದೊಡ್ಡ ಶ್ರೀಮಂತ ಮಠ. ಮಠದ ಆಡಳಿತಾಧಿಕಾರಿ, ಮಠದ ಆಸ್ತಿಯನ್ನು ಮಾರಿದ್ದಾರೆ. ಲೀಸ್‌ಗೂ ಕೊಟ್ಟಿದ್ದಾರೆ. ಕೊಡಗಿನಲ್ಲಿ 10 ಸಾವಿರ ಎಕರೆ ಕಾಫಿ ಎಸ್ಟೇಟ್‌ ಇತ್ತು.‌ ಈಗ ಕೇವಲ 200 ಎಕರೆ ಇದೆ. ಮುರುಗಾ ಶ್ರೀ ಬಳಿ ಹೆಲಿಕಾಪ್ಟರ್ ಇದೆ. ಅದು ಅವರದ್ದೋ ಅಥವಾ ಅವರ ಪರ ಧ್ವನಿ ಎತ್ತುವವರು ಯಾರಾದರೂ ಕೊಟ್ಟಿದ್ದಾರೋ ಎಂಬ ಕುರಿತೂ ತನಿಖೆ ಆಗಬೇಕು ಎಂದರು.

ಲಿಂಗಾಯತ ಸಂಪ್ರದಾಯದ ರೀತಿ ಮಠ ನಡೆಯಬೇಕು.‌ ಆದರೆ ಅಲ್ಲಿ ಜಾತ್ಯಾತೀತರು, ಪ್ರಗತಿಪರರು, ನಕ್ಸಲರಿಗೆ ಬಸವ ಪ್ರಶಸ್ತಿ ಕೊಟ್ಡು ಬಸವ ಸಂಪ್ರದಾಯವನ್ನು ಹಾಳು ಮಾಡಿದ್ದಾರೆ. ಆ ಮಠ ಪ್ರಗತಿಪರರ, ನಕ್ಸಲರ ಅಡ್ಡೆ ಆಗಿತ್ತು. ಅದರ ಸಮಗ್ರ ತನಿಖೆ ಆಗಬೇಕು. ಯಾವುದೇ ಮಠದ ಸ್ವಾಮಿಗಳು ಅಲ್ಲಿನ ಸಂಪ್ರದಾಯದಂತೆ ನಡೆಯಬೇಕು. ಮಠದಲ್ಲಿ ಟಿಪ್ಪು ಸುಲ್ತಾನ್ ಮೂರ್ತಿ ನಿಲ್ಲಿಸಿದ್ದಾರೆ.‌ ನಕ್ಸಲರಿಗೆ, ಪಾಕಿಸ್ತಾನದ ಮಲಾಲಗೆ ಬಸವಶ್ರೀ ಪ್ರಶಸ್ತಿ ಕೊಟ್ಟಿದ್ದಾರೆ. ಅದು ಲಿಂಗಾಯತ ಮಠದ ಸಂಪ್ರದಾಯ ಅಲ್ಲ ಎಂದು ವಾಗ್ದಾಳಿ ನಡೆಸಿದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ಮಾಡಬೇಕು ಎಂದು ಪತ್ರ ಬರೆಯುವುದಾಗಿ ಹೇಳಿದರು.

ಮೀಸಲಾತಿಗೆ ಇದು ಕೊನೆ ಗಡುವು

ವೀರಶೈವ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್‌, ಈಗ ಎಲ್ಲಾ ಗಡುವು ಮುಗಿಯಿತು. ಈಗ ಅಂತಿಮ ಗಡುವು ಅಷ್ಟೇ. ಶಿಗ್ಗಾಂವ್‌ನಲ್ಲಿ ಸಿಎಂ ಬೊಮ್ಮಾಯಿ ಮನೆ ಮುಂದೆ ಸಮುದಾಯದವರೆಲ್ಲರೂ ಪ್ರತಿಭಟನೆ ಮಾಡುತ್ತಾರೆ. ಶಾಸಕರು ಇಲ್ಲಿ ಪ್ರತಿಭಟನೆ ಮಾಡುತ್ತೇವೆ. ಅದಕ್ಕೆ ಮಣಿಯದೇ ಇದ್ದರೆ ಬೆಂಗಳೂರಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ 25 ಲಕ್ಷ ಜನ ಸೇರಿ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ. ಚುನಾವಣೆ ಸಂಬಂಧ ಅಲ್ಲಿ ಒಂದು ಅಂತಿಮ ನಿರ್ಣಯ ಮಾಡುತ್ತೇವೆ ಎಂದರು.

ಇದನ್ನೂ ಓದಿ | ರಾಜಾ ಹುಲಿ ಇರ್ಲಿ, ಯಾರೇ ಇರ್ಲಿ ಮೊದ್ಲು ರಾಜೀನಾಮೆ ಕೊಡ್ಲಿ: ಬಿಎಸ್‌ವೈ ವಿರುದ್ಧದ ಎಫ್‌ಐಆರ್‌ ಆದೇಶಕ್ಕೆ ಯತ್ನಾಳ್‌ ಪ್ರತಿಕ್ರಿಯೆ

Exit mobile version