Site icon Vistara News

Belagavi Winter Session: ಹಕ್ಕುಚ್ಯುತಿ ಮಂಡಿಸಿದ ಶಾಸಕ ಹರೀಶ್ ಪೂಂಜಾ; ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ರೆಫರ್

harish poonja in Belagavi Winter Session

ಬೆಳಗಾವಿ: ತಮ್ಮ ಮೇಲೆ ಎಫ್‌ಐಆರ್‌ ಹಾಕಿದ ಅರಣ್ಯಾಧಿಕಾರಿಗಳ ಮೇಲೆ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ (Belthangady MLA Harish Poonja) ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ (Belagavi Winter Session) ಹಕ್ಕು ಚ್ಯುತಿ ಮಂಡಿಸಿದ್ದಾರೆ, ಇದನ್ನು ಸ್ಪೀಕರ್‌ ಯು.ಟಿ. ಖಾದರ್‌ (Speaker UT Khader) ಅವರು ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ರವಾನಿಸಿದ್ದಾರೆ.

ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾಗಿದ್ದಂತಹ ಅರಣ್ಯ ಭೂಮಿಯ (Forest Land) ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ (Reserve Forest) ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ (State Government) ನಿರ್ಧಾರದಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಸಂಘರ್ಷ ನಡೆದಿತ್ತು. ಬೆಳ್ತಂಗಡಿಯ ಕಳೆಂಜ ಗ್ರಾಮದ ಅಮ್ಮಿನಡ್ಕದಲ್ಲಿ ರೈತರೊಬ್ಬರ ಮನೆಯನ್ನು ಕಿತ್ತುಹಾಕುತ್ತಿರುವ ವೇಳೆ ರೈತರ ಪರ ನಿಂತಿದ್ದ ಶಾಸಕ ಹರೀಶ್‌ ಪೂಂಜಾ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದರು. ಇದಕ್ಕೆ ಆಕ್ರೋಶವನ್ನು ಹೊರಹಾಕಿರುವ ಹರೀಶ್‌, ತಮ್ಮ ಹಕ್ಕಿಗೆ ಚ್ಯುತಿ ತರಲಾಗಿದೆ. ಎಫ್‌ಐಆರ್‌ ದಾಖಲು ಮಾಡಿದ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡಿಸುವುದಾಗಿ ಶಾಸಕ ಹರೀಶ್‌ ಪೂಂಜಾ ಒತ್ತಾಯಿಸಿದ್ದಾರೆ. ಇದಕ್ಕೆ ಪಕ್ಷಾತೀತವಾಗಿ ಸದನ ಸದಸ್ಯರು ಬೆಂಬಲ ಸೂಚಿಸಲಾಗಿದೆ. ಇದೇ ವೇಳೆ ಸ್ಪೀಕರ್‌ ಯು.ಟಿ. ಖಾದರ್‌, ಅವರು ಇದನ್ನು ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: HD Kumaraswamy: ಕೆಲವು ವರ್ಗಗಳ ಓಲೈಕೆ ಸಿಎಂ ಅಜೆಂಡಾ: ಎಚ್.ಡಿ. ಕುಮಾರಸ್ವಾಮಿ ಕಿಡಿ

ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಆರಂಭವಾದರೂ ಸದನದಲ್ಲಿ ಗದ್ದಲ ಮುಂದುವರಿದಿತ್ತು. ಸದನದ ಬಾವಿಗಿಳಿದಿದ್ದ ವಿರೋಧ ಪಕ್ಷದ ಸದಸ್ಯರು ಹಕ್ಕು ಚ್ಯುತಿ ಮಂಡಿಸಲು ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಇದಕ್ಕೆ ಜೆಡಿಎಸ್ ಸದಸ್ಯರು ಸಾಥ್‌ ನೀಡಿದ್ದರು.

ಬೆಳ್ತಂಗಡಿ ಶಾಸಕರ ಹಕ್ಕುಚ್ಯುತಿ ಮಂಡನೆ ಮಾಡಬೇಕಿದೆ. ಅರಣ್ಯ ಇಲಾಖೆಯವರು ಮನೆ ತೆರವು ಮಾಡಲು‌ ಹೋಗಿದ್ದರು. ಈ ವೇಳೆ ಶಾಸಕರಿಗೆ ಹಕ್ಕುಚ್ಯುತಿ ಆಗಿದೆ. ಸದನದಲ್ಲಿ ಮಾತನಾಡಲು ಅವಕಾಶ ನೀಡಬೇಕು ಎಂದು ಸುನೀಲ್ ಕುಮಾರ್ ಮನವಿ ಮಾಡಿದರು. ಆದರೆ, ಅವಕಾಶ ಕೊಡದಿದ್ದಕ್ಕೆ ಸದನದಲ್ಲಿ ಗದ್ದಲ ಮುಂದುವರಿದಿತ್ತು. ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಮಧ್ಯ ಪ್ರವೇಶ ಮಾಡಿ, ನಾನು ಬರಗಾಲ ಬಗ್ಗೆ ತಡವಾಗಿ ಚರ್ಚೆ ಮಾಡುತ್ತೇನೆ. ಈಗ ಶಾಸಕರಿಗೆ ಹಕ್ಕುಚ್ಯುತಿ ಮಂಡನೆ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ಮನವಿಯನ್ನು ನಿರಾಕರಿಸಿದ ಸ್ಪೀಕರ್‌ ಯು.ಟಿ. ಖಾದರ್‌, ನಾಳೆ ಬೆಳಗ್ಗೆ ಅವಕಾಶ ‌ನೀಡುತ್ತೇನೆ. ಈಗ ಬರಗಾಲ ಬಗ್ಗೆ ಚರ್ಚೆ ನಡೆಯಲಿ ಎಂದು ಮನವಿ ಮಾಡಿದರು. ಆದರೂ ಬಿಜೆಪಿ ಸದಸ್ಯರು ಪಟ್ಟು ಬಿಡದೆ ಈಗಲೇ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಶಾಸಕನ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದೆ. ಹಕ್ಕು ಚ್ಯುತಿ ಪಡೆದುಕೊಂಡು ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಈಗಲೇ ಹಕ್ಕುಚ್ಯುತಿ ಸಮಿತಿಗೆ ರೆಫರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕ್ಯಾಬಿನೆಟ್‌ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧದ ಕೇಸ್‌ ಅನ್ನು ವಾಪಸ್ ತೆಗೆದುಕೊಳ್ಳುತ್ತೀರಿ. ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲು ಮಾಡಿಕೊಳ್ಳುತ್ತೀರಿ. ಇದು ಯಾವ ನ್ಯಾಯ ಎಂದು ಶಾಸಕ ಸುನೀಲ್ ಕುಮಾರ್ ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಶಾಸಕರ ಬಿಗಿಪಟ್ಟಿಗೆ ಮಣಿದ ಸ್ಪೀಕರ್ ಯು.ಟಿ. ಖಾದರ್, ಹಕ್ಕುಚ್ಯುತಿ ಮಂಡನೆ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದುಕೊಂಡರು.

ಕಾಂಗ್ರೆಸ್‌ ಆಕ್ಷೇಪ

ಹಕ್ಕುಚ್ಯುತಿಗೆ ಪ್ರಸ್ತಾಪಕ್ಕೆ ಅವಕಾಶ ಕೊಟ್ಟಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬರದ ಚರ್ಚೆ ನಡುವೆ ಹಕ್ಕುಚ್ಯುತಿ ಪ್ರಸ್ತಾಪಕ್ಕೆ ಅವಕಾಶ‌ ಏಕೆ ಎಂದು ಪ್ರಶ್ನೆ ಮಾಡಿದರು. ಶಾಸಕ ಬೇಳೂರು ಗೋಪಾಲಕೃಷ್ಣ, ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದರು.

ಇದು ಅಧಿಕಾರಿಗಳ ರಾಜ್ಯವೇ? ಆರ್. ಅಶೋಕ್‌

ಈ ವೇಳೆ ಶಾಸಕರ ಹಕ್ಕಿಗೆ ಚ್ಯುತಿ ಮಾಡಲು ಬಿಜೆಪಿ ಮುಂದಾದಾಗ ಅಧಿಕಾರಿಗಳ ಸಮರ್ಥನೆಗೆ ಈಶ್ವರ್ ಖಂಡ್ರೆ ನಿಂತುಕೊಂಡರು. ಇದರಿಂದ ಬಿಜೆಪಿ ಶಾಸಕರು ಕೆರಳಿ ಕೆಂಡವಾದರು. “ಇದು ಅಧಿಕಾರಿಗಳ ರಾಜ್ಯವೇ?
ಒಬ್ಬ ಶಾಸಕನ ಬಳಿ ಡಿಎಫ್‌ಒ ಮುಚ್ಚಳಿಕೆ ಬರಿಸಿಕೊಳ್ಳುತ್ತಾನೆ ಎಂದರೆ ಈ ವಿಧಾನಸಭೆ, ಶಾಸಕರು ಯಾಕೆ ಇರಬೇಕು? ಇದು ಅಧಿಕಾರಿಗಳ ರಾಜ್ಯವೇ?” ಎಂದು ಆರ್‌. ಅಶೋಕ್‌ ಆಕ್ರೋಶ ಹೊರಹಾಕಿದರು.

ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಮಾನವ – ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದೆ. ನಗರಕ್ಕೆ ಕಾಡು ಪ್ರಾಣಿಗಳು ಬರುತ್ತಿವೆ. ಇದಕ್ಕೆ ಯಾರು ಹೊಣೆ? ಅರಣ್ಯ ಅತಿಕ್ರಮಣವಾದರೆ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅತಿಕ್ರಮಣ ಸಮರ್ಥನೆ ಮಾಡಿದರೆ ಅರಣ್ಯ ನಾಶವಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Elephant Arjuna: ಮಾವುತರಿಗೆ ಪ್ರತಿ ವರ್ಷ ಅರ್ಜುನ ಹೆಸರಲ್ಲಿ ಪ್ರಶಸ್ತಿ ನೀಡಿ: ದಿನೇಶ್‌ ಗೂಳಿಗೌಡ ಒತ್ತಾಯ

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್.‌ ಅಶೋಕ್, ಅರಣ್ಯ ರಕ್ಷಣೆ ಮಾಡುವುದರ ಪರವಾಗಿ ನಾವೂ ಇದ್ದೇವೆ. ಮಾನವ ಕಾಡು ಪ್ರಾಣಿ ಸಂಘರ್ಷ ಸಾಮಾನ್ಯವಾಗಿದೆ. ಅರಣ್ಯ ಒತ್ತುವರಿ ಜಮೀನು ರೈತರಿಗೆ ಕೊಡಬೇಕು ಎಂದು ಸಾಕಷ್ಟು ಹೋರಾಟ ನಡೆದಿದೆ. ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಆಗಿದೆ ಎಂದು ಆರೋಪ ಬಂದಿತ್ತು. ನಾವು ಕೂಡಲೇ ಹಕ್ಕು ಬಾಧ್ಯತಾ ಸಮಿತಿಗೆ ನೀಡಿದ್ದೇವೆ. ಅಧಿಕಾರಿಗಳನ್ನು ಕೇಳುವವರು ಹೇಳುವವರು ಯಾರೂ ಇಲ್ಲದಂತಾಗಿದೆ. ಶಾಸಕರ ಮೇಲೆ ಎಫ್ಐಆರ್ ಹಾಕುತ್ತಾರೆ ಎಂದರೆ ಏನು ಅರ್ಥ ಬರುತ್ತದೆ? ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ಕೇಸ್ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು. ಬಳಿಕ ಸ್ಪೀಕರ್‌ ಯು.ಟಿ. ಖಾದರ್‌, ಹಕ್ಕು ಬಾಧ್ಯತಾ ಸಲಹಾ ಸಮಿತಿಗೆ ನಿರ್ಣಯವನ್ನು ರವಾನಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version