ಶಿವಮೊಗ್ಗ: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಜೋರಾಗುತ್ತಿದೆ. ಒಂದು ಕಡೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದ್ದರೆ, ಇನ್ನೊಂದು ಕಡೆ ಹಾಲಿ ಶಾಸಕರಿಗೆ ಟಿಕೆಟ್ ಕೊಡದಂತೆ ವಿರೋಧ ವ್ಯಕ್ತವಾಗುತ್ತಿದೆ. ಈಗ ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿರುದ್ಧ ಭಿನ್ನಮತ ಭುಗಿಲೆದ್ದಿದೆ. ಯಾವುದೇ ಕಾರಣಕ್ಕೂ ಅವರಿಗೆ ಟಿಕೆಟ್ ನೀಡಬಾರದು ಎಂದು ಒಂದು ಬಣ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಬಳಿ ಪಟ್ಟುಹಿಡಿದಿದೆ.
ಸಾಗರ ಬಿಜೆಪಿಯ ಕೆಲವು ಕಾರ್ಯಕರ್ತರಿಂದ ಈ ಬಗ್ಗೆ ಸಭೆ ನಡೆದಿದ್ದು, ಈ ವೇಳೆ ಶಾಸಕ ಹಾಲಪ್ಪ, ಆರ್‌ಎಸ್‌ಎಸ್ ನಡೆ ಬಗ್ಗೆ ಖಂಡನೆ ವ್ಯಕ್ತವಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಪದ್ಮನಾಭ ಭಟ್, ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಜೆಪಿ ಎಂದರೆ ದೇಶ, ಧರ್ಮ ಹಾಗೂ ಸನಾತನ ಹಿಂದು ಧರ್ಮದ ಸಿದ್ಧಾಂತವನ್ನು ಇಟ್ಟುಕೊಂಡು ಬಂದಿರುವ ಪಕ್ಷ. ಅದೇ ಸಿದ್ಧಾಂತವನ್ನು ನಂಬಿ ನಾವು ಹಲವಾರು ವರ್ಷಗಳಿಂದ ಬಿಜೆಪಿಯಲ್ಲಿ ನಿಷ್ಠೆಯಿಂದ ಕೆಲಸವನ್ನು ಮಾಡುತ್ತಾ ಮನೆ ಮಠ ಬಿಟ್ಟು ಪಕ್ಷಕ್ಕಾಗಿ ದುಡಿದಿದ್ದೇವೆ. ಅಲ್ಲದೆ, ಕಳೆದ ಬಾರಿ ಇದೇ ಶಾಸಕ ಹಾಲಪ್ಪ ಅವರನ್ನು ನಾವು ಒಗ್ಗಟ್ಟಾಗಿ ಗೆಲ್ಲಿಸಿದ್ದೇವೆ. ಆದರೆ ನಮ್ಮನ್ನು ಶಾಸಕರು ರೌಡಿಗಳ ಮೂಲಕ, ತಮ್ಮ ಬೆಂಬಲಿಗರ ಮೂಲಕ ಹೀನಾಯವಾಗಿ ನಡೆಸಿಕೊಡರು. ನಾವು ಪಕ್ಷವನ್ನು ಬಿಟ್ಟು ಹೋಗುವ ರೀತಿಯಲ್ಲಿ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಈಗಿರುವ ಶಾಸಕರಿಗೆ ಯಾವ ಬಿಜೆಪಿಯ ಸಿದ್ಧಾಂತವೂ ಇಲ್ಲವಾಗಿದೆ. ಹಿಂದುತ್ವ ಹಾಗೂ ಧರ್ಮದ ಬಗ್ಗೆ ಅಭಿಮಾನವೇ ಇಲ್ಲವಾಗಿದೆ. ಅಧಿಕಾರದ ಮದದಲ್ಲಿ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ ಎಂದು ಕಿಡಿಕಾರಿದರು.
ಎಲ್ಲವನ್ನೂ ಹಣದಲ್ಲಿ ಕೊಂಡುಕೊಳ್ಳಬಹುದು ಎನ್ನುವ ಧೈರ್ಯದಲ್ಲಿ ನಮ್ಮನ್ನು ತುಳಿಯುತ್ತಿದ್ದಾರೆ, ಸಂಘಪರಿವಾರವಾದ ವಿಶ್ವ ಹಿಂದು ಪರಿಷತ್, ಬಜರಂಗದಳದ ಅಂಗ ಸಂಸ್ಥೆಯ ಕಾರ್ಯಕರ್ತರನ್ನು ಕಡೆಗಣಿಸಿ ಮನಸೋ ಇಚ್ಛೆ ಅಧಿಕಾರದ ದರ್ಪದಲ್ಲಿ ಮೆರೆದಿದ್ದಾರೆ. ಶಾಸಕರ ವಿರುದ್ಧ ಮಾತನಾಡುವರ ಮನೆ ಮೇಲೆ ಕಲ್ಲು ಹೊಡೆಸುವುದು, ರೌಡಿಗಳು, ತಮ್ಮ ಬೆಂಬಲಿಗರಿಂದ ದೂರವಾಣಿಯಲ್ಲಿ ಬೆದರಿಕೆ ಹಾಕಿಸುವುದನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಎಸ್‌ವೈ ಭೇಟಿಯಾದ ನಿಯೋಗ
ಹಾಲಪ್ಪನವರಿಗೆ ಟಿಕೆಟ್ ನೀಡಬೇಡಿ ಎಂದು ಹೇಳಿದರೆ ಕೇಳುವುದಿಲ್ಲ. ಶಾಸಕ ಹರತಾಳು ಹಾಲಪ್ಪ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಪಟ್ಟು ಹಿಡಿಯಲಾಗಿದೆ. ಟಿಕೆಟ್ ನೀಡದಂತೆ ಪಟ್ಟು ಹಿಡಿದ ಬಿಜೆಪಿ ಮುಖಂಡರು ಹಾಗೂ ಕೆಲವು ಸಂಘ ಪರಿವಾರದ ಮುಖಂಡರು ಸೇರಿ 2 ದಿನಗಳ ಹಿಂದೆ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಹಾಲಪ್ಪ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಲಾಗಿದೆ.
ಇದನ್ನೂ ಓದಿ: Rahul Gandhi: ಇಂದು ಕರ್ನಾಟಕಕ್ಕೆ ರಾಹುಲ್ ಗಾಂಧಿ; ಬೆಳಗಾವಿಯಲ್ಲಿ ಚುನಾವಣೆ ರಣಕಹಳೆ
ಸಾಗರದ ಆಶ್ರಯ ಸಮಿತಿ ಅಧ್ಯಕ್ಷ ಯು.ಎಚ್. ರಾಮಪ್ಪ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕೆ.ಎನ್.ಶ್ರೀಧರ್, ಶಿಮುಲ್ ಅಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ, ವೀರಶೈವ ಮುಖಂಡರಾದ ಜಗದೀಶ್ ಗೌಡ, ಕುಮಾರ್, ವಸಂತ್, ಬಿಜೆಪಿ ಮುಖಂಡರಾದ ಸತೀಶ್ ಹಕ್ಕರೆ, ರಾಘವೇಂದ್ರ ಶೇಟ್, ಕೃಷ್ಣಮೂರ್ತಿ ಮಂಕಳಲೆ ಹಲವರನ್ನೊಳಗೊಂಡ ನಿಯೋಗವು ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ.
ಗೂಂಡಾಗಿರಿ ಆರೋಪ
ಈ ಸಂಬಂಧ ಸಾಗರದಲ್ಲಿ ಭಾನುವಾರ (ಮಾ. 19) ಸಭೆ ನಡೆಸಿದ ಬಿಜೆಪಿ ಮುಖಂಡರು, ಹರತಾಳು ಹಾಲಪ್ಪ ಸಾಗರದಲ್ಲಿ ಶಾಸಕರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ. ಶಾಸಕರ ಬೆಂಬಲಿಗರ ಗೂಂಡಾಗಿರಿ ಮಿತಿಮೀರಿದೆ. ಬಿಜೆಪಿ ಮುಖಂಡರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ. ಜತೆಗೆ ಸಂಘ ಪರಿವಾರದ ಮುಖಂಡರಿಗೆ ಧಮ್ಕಿ ಹಾಕಲಾಗುತ್ತಿದೆ. ಹಾಲಪ್ಪ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.
ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ನೀಡಿದರೆ ಚುನಾವಣೆಯಿಂದ ದೂರ ಉಳಿಯುವುದಾಗಿ ಎಚ್ಚರಿಕೆ ನೀಡಲಾಗಿದೆ. ಹಾಲಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಲು ಮುಖಂಡರು ತೀರ್ಮಾನ ಕೈಗೊಂಡಿದ್ದು, ಇನ್ನೊಂದು ವಾರದೊಳಗೆ ಪತ್ರ ಬರೆಯಲು ತಯಾರಿ ಮಾಡಿಕೊಳ್ಳಲಾಗಿದೆ. ಹಾಲಪ್ಪ ಹೊರತುಪಡಿಸಿ ಪಕ್ಷದ ಯಾರಿಗೇ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ಒಂದು ವೇಳೆ ಹಾಲಪ್ಪ ಅವರಿಗೆ ಟಿಕೆಟ್ ನೀಡಿದಲ್ಲಿ ಅನಿವಾರ್ಯವಾಗಿ ಸೋಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: Tipu Sultan: ʼಉರಿಗೌಡ ನಂಜೇಗೌಡ’ ಸಿನಿಮಾ ನಿರ್ಮಾಣ ಕೈಬಿಟ್ಟ ಮುನಿರತ್ನ; ನಿರ್ಮಲಾನಂದ ಸ್ವಾಮೀಜಿ ಸೂಚನೆ
ಈಗಾಗಲೇ ಎಂಡಿಎಫ್ ಕಾಲೇಜು ಗಲಾಟೆಯಲ್ಲಿ ಬ್ರಾಹ್ಮಣ, ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡಿರುವ ಹಾಲಪ್ಪ, ಇದೀಗ ಬಿಜೆಪಿ ಪಕ್ಷದ ಮುಖಂಡರ ವಿರೋಧವನ್ನೂ ಎದುರಿಸುತ್ತಿದ್ದಾರೆ.