ಹಾಸನ: ನಾನು ಒಂದು ಹಿಡಿ ರಾಗಿಯನ್ನೂ ಕದ್ದಿಲ್ಲ, ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ. ಸೋಮವಾರ ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣ ಮಾಡುತ್ತೇನೆ. ರಾಗಿ ಕಳ್ಳ ಎಂದು ಸುಳ್ಳು ಆರೋಪ ಮಾಡಿರುವ ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ, ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ಕೂಡ ಬಂದು ಆಣೆ ಪ್ರಮಾಣ ಮಾಡಲಿ ಎಂದು ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalinge Gowda) ಸವಾಲು ಹಾಕಿದ್ದಾರೆ.
ಶಿವಲಿಂಗೇಗೌಡ ರಾಗಿ ಕಳ್ಳ ಎಂದು ಬಿಜೆಪಿಯ ಎನ್.ಆರ್. ಸಂತೋಷ್ ಅರಸೀಕೆರೆಯ ಪ್ರತಿಭಟನಾಸಭೆಯಲ್ಲಿ ಈ ಹಿಂದೆ ಹೇಳಿದ್ದರು. ಅವರು ಹೇಳಿದ್ದು ನಿಜವೇ ಆದಲ್ಲಿ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ನಾನು ಹೇಳಿದ್ದೆ. ಆದರೆ ಅವರು ಈವರೆಗೆ ನನ್ನ ಸವಾಲು ಸ್ವೀಕರಿಸಿಲ್ಲ. ಈ ವಿಚಾರದಲ್ಲಿ ನಾನು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಹೀಗಾಗಿ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ನನ್ನ ಅಭಿಮಾನಿಗಳು ಸೇರಿ ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಹೊರಟಿದ್ದೇವೆ. ವಿನಾಕಾರಣ ನನ್ನ ಮೇಲೆ ರಾಗಿ ದಂಧೆ ಹಾಗೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿರುವವರಿಗೆ ಪರಮಾತ್ಮ ತಕ್ಕ ಶಿಕ್ಷೆ ಕೊಡಲಿ ಎಂದು ಪ್ರಾರ್ಥನೆ ಸಲ್ಲಿಸಲಿದ್ದೇವೆ ಎಂದರು.
ಇದನ್ನೂ ಓದಿ | Siddaramaiah | ಈ ಚುನಾವಣೆಯಲ್ಲಿ ಸಚಿವ ವಿ. ಸೋಮಣ್ಣನಿಗೆ ಸೋಲು ಖಚಿತ: ಸಿದ್ದರಾಮಯ್ಯ