ಬೆಳಗಾವಿ: ಯುಗಾದಿ ದಿನದಂದೇ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದ ಐತಿಹಾಸಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ (Karnataka Election) ಶಾಸಕಿ ಚಾಲನೆ ನೀಡಿದರು.
ಜಿಲ್ಲೆಯ ಹಿಂಡಲಗಾ ಗಣಪತಿ ದೇವಸ್ಥಾನ, ಸುಳೇಭಾವಿ ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚಾರ ಶುರು ಮಾಡಿದರು. ಅವರಿಗೆ ಸಹೋದರ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಸೇರಿ ಹಲವರು ಸಾಥ್ ನೀಡಿದರು.
ನಂತರ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ತಾಲೂಕಿನ ಶಕ್ತಿದೇವತೆ ಸುಳೇಭಾವಿ ಮಹಾಲಕ್ಷ್ಮಿ ಆಶೀರ್ವಾದ ಪಡೆದು ಪ್ರಚಾರವನ್ನು ಆರಂಭಿಸಿದ್ದೇನೆ. ಬಹಳಷ್ಟು ಹುರುಪು, ಶಕ್ತಿ, ವಿಶ್ವಾಸದಿಂದ ಮನೆಮಗಳಾಗಿ ಸೇವೆ ಸಲ್ಲಿಸಿದ್ದೇನೆ. ನಿಮ್ಮ ಆಶೀರ್ವಾದವೇ ನನಗೆ ಬಲ, ನನಗೆ ಬೆಂಬಲ. ಯಾವುದೇ ಜಾತಿ, ಭಾಷಾ ರಾಜಕಾರಣ ಮಾಡದೇ ಬಸವಣ್ಣನವರ ತತ್ವಗಳನ್ನು ಪಾಲಿಸುತ್ತಾ ರಾಜಕಾರಣ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | Panchamasali Reservation: ಮಾ. 24ಕ್ಕೆ ಸಿಹಿ ಸುದ್ದಿ ಸಾಧ್ಯತೆ; ಪಿಎಂ ಕಚೇರಿಯಿಂದ ಕರೆ ಬಂದಿದೆ ಎಂದರು ಬಸವ ಜಯಮೃತ್ಯುಂಜಯ ಶ್ರೀ
5 ಪರ್ಸೆಂಟ್ ರಾಜಕಾರಣ, 95 ಪರ್ಸೆಂಟ್ ಧರ್ಮಕಾರಣ, ಸಮಾಜಕಾರಣ ಮಾಡಿದ್ದೇನೆ. ಸತ್ಯಮೇವ ಜಯತೇ, ಸತ್ಯಕ್ಕೆ ಯಾವತ್ತೂ ಜಯವಿದೆ. ಐದು ವರ್ಷ ನಿಸ್ವಾರ್ಥತೆಯಿಂದ ಜನಸೇವೆ ಮಾಡಿದ್ದೇನೆ. ಮುಂದಿನ ಐದು ವರ್ಷ ಜನರ ಆಶೀರ್ವಾದ ಇರಲಿ. ಎಲ್ಲರೂ ಒಗ್ಗಟ್ಟಾಗಿ ಈ ಪರಿಸ್ಥಿತಿ ಎದುರಿಸೋಣ, ವಿಜಯಲಕ್ಷ್ಮಿ ಒಲಿದೇ ಒಲಿಯುತ್ತಾಳೆ ಎಂಬ ಭರವಸೆ ಇದೆ ಎಂದ ತಿಳಿಸಿದರು.