Site icon Vistara News

Election 2023 | ಚುನಾವಣೆಯಲ್ಲಿ ಸ್ಪರ್ಧೆಗೆ ಒಪ್ಪದ ಶಾಸಕ ವೀರಭದ್ರಯ್ಯ; ಜೆಡಿಎಸ್ ವರಿಷ್ಠರಿಗೆ ತಲೆನೋವಾದ ಮಧುಗಿರಿ ಕ್ಷೇತ್ರ

Election

ತುಮಕೂರು: ಮುಂದಿನ‌ ವಿಧಾನಸಭಾ ಚುನಾವಣೆಯಲ್ಲಿ (Election 2023) ಸ್ಪರ್ಧೆ ಮಾಡುವುದಿಲ್ಲ ಎಂದು ಮಧುಗಿರಿ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಹೇಳುತ್ತಿರುವುದು ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಆದರೆ, ಹೇಗಾದರೂ ಮಾಡಿ‌ ವೀರಭದ್ರಯ್ಯ ಅವರನ್ನು ಚುನಾವಣೆಯಲ್ಲಿ ಕಣಕ್ಕಿಳಿಸಲು ದಳಪತಿಗಳು ಹರಸಾಹಸ ಪಡುತ್ತಿದ್ದಾರೆ.

ಈಗಾಗಲೇ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಜೆಡಿಎಸ್‌ ತೊರೆದು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ. ಇದೀಗ ಮಧುಗಿರಿ ಶಾಸಕ ವೀರಭದ್ರಯ್ಯ ಕೂಡ ಆರೋಗ್ಯ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಹೇಗಾದರೂ ಮಾಡಿ ಅವರನ್ನು ಚುನಾವಣೆ ಸ್ಪರ್ಧೆಗೆ ಮನವೊಲಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ಏಕೆಂದರೆ ಈಗಾಗಲೇ ಇದು ಜೆಡಿಎಸ್‌ ಕೈಯಲ್ಲಿರುವ ಕ್ಷೇತ್ರವಾಗಿದೆ. ಒಂದು ವೇಳೆ ಇವರು ಕಣದಿಂದ ಹಿಂದೆ ಸರಿದಿದ್ದೇ ಆದರೆ, ಈ ಕ್ಷೇತ್ರವೂ ಕೈತಪ್ಪುವ ಭೀತಿ ಇದೆ. ಹೀಗಾಗಿ ಕ್ಷೇತ್ರವನ್ನು ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆದಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕ್ಷೇತ್ರದಲ್ಲಿ ನಡೆದಿರುವ ಕೆಲ ಘಟನೆಗಳಿಂದ ವೀರಭದ್ರಯ್ಯ ಅವರ ಮನಸ್ಸಿಗೆ‌ ನೋವಾಗಿದೆ. ಅವದೊಂದಿಗೆ ಈಗಾಗಲೇ ನಾನು ಮಾತನಾಡಿದ್ದೇನೆ. ಅವರ ಮನವೊಲಿಸಿ ‌ಮುಂದಿನ‌ ಚುನಾವಣೆಗೆ ನಿಲ್ಲಿಸುತ್ತೇನೆ.‌ ಮಧುಗಿರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲ ಸರಿಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಶಾಸಕ ವೀರಭದ್ರಯ್ಯ, ಈಗಾಗಲೇ ನನ್ನ ನಿರ್ಧಾರ ತಿಳಿಸಿದ್ದೇನೆ. ರಾಜಕೀಯ ಮಾತನಾಡಲ್ಲ ಎಂದು ತೆರಳಿದ್ದಾರೆ. ಆದರೆ, ಅವರ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ನೀವು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕು ಎಂದು ಒತ್ತಾಯಿಸಿದರು. ಆದರೆ, ಶಾಸಕರು ಈ ವೇಳೆ ಕಾರ್ಯಕರ್ತರಿಗೆ ಏನೂ ಹೇಳದೆ ಹೊರಟರು.

ಇದನ್ನೂ ಓದಿ | BJP Janasankalpa Yatre | ರಾಜ್ಯಕ್ಕೆ ಬಂಡೆ ಬೇಕಾಗಿಲ್ಲ, ಬಾಹುಬಲಿ ಬೊಮ್ಮಾಯಿ ಬೇಕಿದೆ: ಶ್ರೀರಾಮುಲು

Exit mobile version