ಬೆಂಗಳೂರು: ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಆಗಿದ್ದಾಗ ಸರ್ಕಾರ ಪತನವಾಗುವುದಕ್ಕಿಂತ ಮುಂಚೆ ತಮ್ಮನ್ನು ಸಿಎಂ ಮಾಡಿದರೆ ಸರ್ಕಾರವನ್ನು ಉಳಿಸುವುದಾಗಿ ಬಂಡಾಯವೆದ್ದಿದ್ದ ಶಾಸಕರು ಬೇಡಿಕೆಯನ್ನು ಇಟ್ಟಿದ್ದರು ಎಂಬ ಡಿ.ಕೆ. ಶಿವಕುಮಾರ್ (DK Shivakumar) ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಸಚಿವ, ಆರ್. ಆರ್. ನಗರ ಶಾಸಕ ಮುನಿರತ್ನ (MLA Munirathna), ಡಿಕೆಶಿ ನಮ್ಮನ್ನು ಭೇಟಿ ಮಾಡಲು ಮುಂಬೈಗೆ ಬಂದಾಗ ಅವರನ್ನು ನಾವಿದ್ದ ಖಾಸಗಿ ಹೋಟೆಲ್‌ನ ಗೇಟ್ ಒಳಗೇ ಬಿಟ್ಟಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಮುನಿರತ್ನ, ಮುಂಬೈಗೆ ಡಿ.ಕೆ. ಶಿವಕುಮಾರ್ ಅವರು ಬಂದಾಗ ಅವರನ್ನು ಗೇಟ್ ಒಳಗಡೆಯೇ ಬಿಟ್ಟಿಲ್ಲ. ಡಿಕೆಶಿ ಅವರು ಎಲ್ಲಿಂದ ಮಾತನಾಡಿದ್ದಾರೋ ಗೊತ್ತಿಲ್ಲ. ಇಂದು ರಾಜಕೀಯದ ಲಾಭಕ್ಕೋ, ಸ್ವಾರ್ಥಕ್ಕೋ ಅವು ಹೀಗೆ ಮಾತನಾಡುತ್ತಿರುವುದು. ಆದರೆ, ಅಂದು ಬಾಂಬೆಯಲ್ಲಿ ಡಿಕೆಶಿಯನ್ನು ಹೋಟೆಲ್ ಗೇಟ್ ಒಳಗೇ ಬಿಡಲಿಲ್ಲ. ಹಾಗಾಗಿ ಅಂದು ಅವರು ಗೇಟ್ ಮುಂದೆ ಹೈಡ್ರಾಮಾ ಮಾಡಿಕೊಂಡು ಬೆಂಗಳೂರಿಗೆ ವಾಪಸ್ ಹೋದರು ಅಷ್ಟೇ ಎಂದು ತಿಳಿಸಿದರು.
ಬಾಂಬೆಗೆ ಹೋಗಿದ್ದ 17 ಜನರಲ್ಲಿ ಯಾರೂ ಈ ಬೇಡಿಕೆಯನ್ನೇ ಇಟ್ಟಿರಲಿಲ್ಲ. ಯಾರನ್ನೇ ಕೇಳಿದರೂ ಒಂದೇ ಮಾತಲ್ಲಿ ಅಂಥದ್ದೇನೂ ಇಲ್ಲ ಎಂದು ಹೇಳುತ್ತಾರೆ ಎಂಬುದಾಗಿ ಮುನಿರತ್ನ ತಿರುಗೇಟು ನೀಡಿದರು.
ಅಹೋರಾತ್ರಿ ಧರಣಿ ಎಚ್ಚರಿಕೆ
ನನ್ನ ಕ್ಷೇತ್ರದ ಅನುದಾನದ ವಿಚಾರವಾಗಿ ಬೆಳಗಾವಿ ಅಧಿವೇಶನದಲ್ಲಿ ನ್ಯಾಯ ಒದಗಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದರು. ಅಧಿವೇಶನದಲ್ಲಿ ನನಗೆ ನ್ಯಾಯ ಸಿಗದಿದ್ದರೆ ಅಹೋರಾತ್ರಿ ಧರಣಿ ಮಾಡುತ್ತೇನೆ. ನನ್ನ ಅನುದಾನ ಸಿಗದಿದ್ದರೆ ಅಹೋರಾತ್ರಿ ಧರಣಿ ಮುಂದುವರಿಸುತ್ತೇನೆ ಎಂದು ಶಾಸಕ ಮುನಿರತ್ನ ಘೋಷಣೆ ಮಾಡಿದ್ದಾರೆ.
ತೆಲಂಗಾಣದಲ್ಲಿ ಅಚ್ಚರಿ ಫಲಿತಾಂಶ; ಬಿಜೆಪಿಯದ್ದೇ ಸರ್ಕಾರ
ತೆಲಂಗಾಣ ಚುನಾವಣೆಯಲ್ಲಿ (Telangana election) ಎಕ್ಸಿಟ್ ಪೋಲ್ ಬಂದಿದೆ. ಆದರೆ, ಅದೆಲ್ಲ ಸತ್ಯಕ್ಕೆ ದೂರವಾದದ್ದು. ತೆಲಂಗಾಣದಲ್ಲಿ ಅಚ್ಚರಿ ಫಲಿತಾಂಶ ಬರಲಿದೆ. ನಾವು ಅಲ್ಲಿ ಸರ್ಕಾರ ರಚನೆ ಮಾಡುತ್ತೇವೆ. ಅವರ ತಂತ್ರ ಫಲಿಸೋದಿಲ್ಲ. ಸಮೀಕ್ಷೆ ಬಗ್ಗೆ ನಾವು ಮಾತನಾಡಲ್ಲ. ಅವಕ್ಕೆ ಎಷ್ಟು ಹಿನ್ನಡೆ ಆಗಿದೆ ಎಂಬುದು ನಿಮಗೆ ಗೊತ್ತಿದೆ ಎಂದು ಮುನಿರತ್ನ ಹೇಳಿದರು.
ಕರ್ನಾಟಕ ಜನತೆಗೆ ಗ್ಯಾರಂಟಿ (Congress Guarantee scheme) ವಂಚನೆ ಆಗಿದೆ. ಬೆಂಗಳೂರಿನ ದುಡ್ಡನ್ನು ತೆಗೆದುಕೊಂಡು ಹೋಗಿ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆ ಎಂದು ಮುನಿರತ್ನ ಕಿಡಿಕಾರಿದರು.
ಇದನ್ನೂ ಓದಿ: Assembly Session : ಈ ಅಧಿವೇಶನದಲ್ಲಿ 2 ಭಾಷೆಗೆ ಪ್ರಾತಿನಿಧ್ಯ; ಭಾಷಾ ಪಟ್ಟಿಗೆ ತುಳು, ಬಂಜಾರ ಸೇರ್ಪಡೆ?
ಡಿ.ಕೆ. ಶಿವಕುಮಾರ್ ಒಬ್ಬ ದಡ್ಡ
ರಾಜ್ಯದಲ್ಲಿ ಐದು ಗ್ಯಾರಂಟಿಯಲ್ಲಿ ಒಂದು ಗ್ಯಾರಂಟಿ ಅನುಷ್ಠಾನ ಇನ್ನೂ ಬಾಕಿ ಇದೆ. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ತೆಲಂಗಾಣಕ್ಕೆ ಹೋಗಿ ಹೇಳುತ್ತಾರೆ. ನಾವು ನಮ್ಮ ಸರ್ಕಾರದಿಂದ ರಾಜ್ಯದಲ್ಲಿ ಐದು ಗಂಟೆ ರೈತರಿಗೆ ವಿದ್ಯುತ್ ಕೊಡುತ್ತಿದ್ದೇವೆ ಎಂದು. ಆದರೆ, ಅದಕ್ಕೆ ಅಲ್ಲಿನ ಮುಖ್ಯಮಂತ್ರಿ ತಿರುಗೇಟು ನೀಡಿದ್ದು, ನಮ್ಮ ರಾಜ್ಯದಲ್ಲಿ 24 ಗಂಟೆ ಕರೆಂಟ್ ಕೊಡುತ್ತಿದ್ದೇವೆ. ಇವರು ಯಾರೋ ಬಂದು 5 ಗಂಟೆ ಕರೆಂಟ್ ಕೊಡುತ್ತಾರಂತೆ. ಅವರೊಬ್ಬರ ದಡ್ಡ ಎಂದು ಹೇಳಿದ್ದಾರೆಂಬುದಾಗಿ ಹೇಳಿಕೆ ನೀಡಿದ್ದರು ಎಂದು ಮುನಿರತ್ನ ಲೇವಡಿ ಮಾಡಿದರು.