Site icon Vistara News

ವೋಟು ಹಾಕಿಲ್ಲವೆಂದು ತಳಕಲ್ ಕೆರೆಗೆ ನೀರು ಹರಿಸದ ಶಾಸಕ ಪಿಟಿಪಿ: ಇಟ್ಟಗಿ ಹೋಬಳಿ ಜನರ ಪ್ರತಿಭಟನೆ

ತಳಕಲ್

ಪಾಂಡುರಂಗ ಜಂತ್ಲಿ, ವಿಜಯನಗರ
ಅದು ಹತ್ತಾರು ಹಳ್ಳಿಗಳ ಜೀವನಾಡಿ ಆಗಿರುವ ಕೆರೆ. ಆ ಕೆರೆ ಭರ್ತಿಯಾದರೆ ವರ್ಷಗಟ್ಟಲೇ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ, ಆ ಕೆರೆ ತುಂಬಿಸಲು ಸ್ವತಃ ಶಾಸಕರೇ ಬಿಡುತ್ತಿಲ್ಲವಂತೆ. ಹೂವಿನ ಹಡಗಲಿ ತಾಲೂಕಿನ ಇಟ್ಟಗಿ ಹೋಬಳಿಯ ಎಂಟರಿಂದ ಹತ್ತು ಹಳ್ಳಿಗಳ ಅಭಿವೃದ್ಧಿಗೆ ಶಾಸಕ ಹೂವನಹಡಗಲಿ ಶಾಸಕ ಪಿ.ಟಿ ಪರಮೇಶ್ವರ್​ ಅಡ್ಡಗಾಲು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.​

ಹೂವಿನ ಹಡಗಲಿ ತಾಲೂಕಿನ ಇಟ್ಟಗಿ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 8-10 ಹಳ್ಳಿಗಳು ಬರುತ್ತವೆ. ಈ ಹಳ್ಳಿಗಳ ಅಭಿವೃದ್ಧಿಗೆ ಶಾಸಕ ಪಿ.ಟಿ ಪರಮೇಶ್ವರ್ ಶ್ರಮಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಏಕೆಂದರೆ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಹಳ್ಳಿಗಳಲ್ಲಿನ ಮತದಾರರು ಮತ ಹಾಕಿಲ್ಲ ಎಂಬ ಕಾರಣಕ್ಕೆ ತಳಕಲ್​ ಕೆರೆಗೆ ನೀರು ಬಿಡಲು ಸ್ವತಃ ಶಾಸಕ ಅಡ್ಡಗಾಲು ಹಾಕಿದ್ದಾರೆ ಎಂದು ಆಪಾದಿಸಿದ್ದಾರೆ.

ಕಮಿಷನ್​ ಕಟ್ಟಿದ್ದೇವೆ, ನಮ್ಮ ಪಾಲಿನ ಕೆಲಸ ಮಾಡಿದ್ದೇವೆ ಎಂದ ಕಾಂಟ್ರಾಕ್ಟರ್ಸ್
ತಳಕಲ್ ನಿಂದ ಸುಮಾರು ಎಂಟರಿಂದ ಹತ್ತು ಕಿ.ಮೀ ದೂರದಲ್ಲಿ​​​ ಮಾಲವಿ ಜಲಾಶಯ ಭರ್ತಿ ಆಗಿದೆ. ಮಾಲವಿ ಜಲಾಶಯಕ್ಕೆ ತುಂಗಭದ್ರಾ ನದಿಯ ನೀರನ್ನು ಹರಿಸಲಾಗಿದ್ದು, ಜಲಾಶಯ ಭರ್ತಿಗೆ ಕೇವಲ 20 ಅಡಿಯಷ್ಟು ಮಾತ್ರ ಬಾಕಿಯಿದೆ. ಗದಗ ಮತ್ತು ಮುಂಡರಗಿ ತಾಲೂಕಿನ ಬಹುತೇಕ ಹಳ್ಳಿಗಳು ಸಿಂಗಟಾಲೂರು ಏತನೀರಾವರಿ ಯೋಜನೆಯ ನೀರನ್ನು ಬಳಸಿಕೊಂಡು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿವೆ. ತಾಲೂಕಿಗೆ ಹತ್ತಿರದಲ್ಲೇ ಇರುವ ತಳಕಲ್ ಕೆರೆಗೆ ನೀರು ತುಂಬಿಸಲಾಗುತ್ತಿಲ್ಲ ಎಂದರೇ ಹೇಗೆ? ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಕೆರೆಗೆ ನೀರು ಹರಿಸಲು ರೈತರು ಒತ್ತಾಯಿಸಿದ್ದಾರೆ. ಆದರೆ, ಇಟ್ಟಗಿ ಹೋಬಳಿಯ ತಳಕಲ್​​​ ಕೆರೆಗೆ ನೀರು ಹರಿಸುವ ವಿಚಾರಕ್ಕೆ ಗುತ್ತಿಗೆದಾರರನ್ನು ಕೇಳಿದರೆ, ಶಾಸಕ ಪರಮೇಶ್ವರ್​​​ ಹಾಗೂ ಮೇಲಾಧಿಕಾರಿಗಳಿಗೆ ಕಮಿಷನ್ ಕೊಟ್ಟಿದ್ದೇವೆ, ನಮ್ಮ ಪಾಲಿಗೆ ಬಂದ ಕೆಲಸ ಮಾಡಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ.

ಕಾಟಾಚಾರಕ್ಕೆ ಅಧಿಕಾರಿಗಳಿಂದ ತಳಕಲ್​​​ ಕೆರೆ ವೀಕ್ಷಣೆ
ಕೆರೆಗೆ ನೀರು ತುಂಬಿಸುವ ವಿಚಾರಕ್ಕೆ ಹಲವು ದಿನಗಳಿಂದ ಹೋರಾಟ ನಡೆಯುತ್ತಲೇ ಇದೆ. ಆದರೆ ಆ ಹೋರಾಟ ತೀವ್ರತೆ ಪಡೆದುಕೊಳ್ಳುವ ಲಕ್ಷಣ ಕಾಣುತ್ತಿದ್ದಂತೆ ಇಟ್ಟಗಿ ಹೋಬಳಿಯ ಜಲಸಂಪನ್ಮೂಲ ಇಲಾಖೆಯ ನೀರಾವರಿ ಹಾಗೂ ಕೇಂದ್ರ ವಲಯದ ಮುಖ್ಯ ಅಭಿಯಂತರ ಕೆ. ದುರುಗಪ್ಪ, ತಳಕಲ್​​​​ ಕೆರೆಗೆ ಭೇಟಿ ಕೊಟ್ಟು ತಳಕಲ್​​ ಕೆರೆ ವೀಕ್ಷಣೆ ಮಾಡಿದ್ದಾರೆ. ಕೆರೆಗೆ ನೀರು ತುಂಬಿಸುವ ವಿಚಾರಕ್ಕೆ ಮಾತನಾಡಿ, ಕೆರೆಗೆ ನೀರು ಸರಬರಾಜು ಮಾಡುವ ಮೋಟಾರಿನಲ್ಲಿ ಯಾವುದೇ ಸಮಸ್ಯೆಗಳಿಲ್ಲ. ನೀರು ಹೊರಹಾಕುವ ಪಂಪ್‌ನಲ್ಲಿ ಸಮಸ್ಯೆ ಕಂಡುಬಂದಿದೆ. ಸ್ಥಳೀಯವಾಗಿ ರಿಪೇರಿ ಕೆಲಸಮಾಡಲು ಸಾಧ್ಯವಾಗದೆ ಪಂಪ್‌ ಅನ್ನು ಮಹಾರಾಷ್ಟ್ರದ ಸಾಂಗ್ಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

15 ದಿನಗಳೊಳಗೆ ಪಂಪ್ ಸರಿಹೋಗಲಿದ್ದು, ನಂತರ ದಿನಗಳಲ್ಲಿ ಕೆರೆಗೆ ನೀರು ಖಂಡಿತ ಹರಿಸುತ್ತೇವೆ ಎಂದಿದ್ದಾರೆ. ನಿರಂತರ ಜ್ಯೋತಿ ಇರುವ ಕಾರಣದಿಂದ ವಿದ್ಯುತ್‌ನ ಸಮಸ್ಯೆ ಇರುವುದಿಲ್ಲ ಅಂತ ಭಾವಿಸಿದ್ದೆವು. ಆದರೆ ಪದೇಪದೆ ವಿದ್ಯುತ್ ಸಮಸ್ಯೆ ಕಾಡುತ್ತಿದ್ದರಿಂದ ಸರ್ಕಾರ ಈ ಸಮಸ್ಯೆಯನ್ನು ನೀಗಿಸಲು ಈಗಾಗಲೆ 1.91 ಲಕ್ಷ ರೂಪಾಯಿ ಹಣಕಾಸಿನ ನೆರವು ನೀಡಿದೆ. ಮುಂದಿನ ದಿನಗಳಲ್ಲಿ ವಿದ್ಯುತ್‌ ಸಮಸ್ಯೆಯೂ ನೀಗಲಿದೆ ಎಂದಿದ್ದಾರೆ.

ಅಧಿಕಾರಿಗಳು ಶಾಸಕರ ಕೈಗೊಂಬೆಯಂತೆ ಕೆಲಸ: ಎಂ.ಪಿ ಸುಮಾ ಆರೋಪ
ತಳಕಲ್ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುತ್ತಮುತ್ತಲಿನ ಗ್ರಾಮದ ಜನತೆಯು ಕಳೆದ ಚುನಾವಣೆಯಲ್ಲಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಶಾಸಕ ಪಿ. ಟಿ ಪರಮೇಶ್ವರ್​​​ ನಾಯಕ್​​ ಈ ಭಾಗದ ಅಭಿವೃದ್ಧಿ ಕಡೆಗೆ ಗಮನ ನೀಡುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಕೆರೆಗೆ ನೀರು ತುಂಬಿಸುವಂತೆ ಸ್ಥಳೀಯ ರಾಜಕಾರಣಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಬೇಜವ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ. ಇದರಿಂದ ರೈತರು ಬೇಸತ್ತು ಹೋಗಿದ್ದು, ಸ್ಥಳೀಯ ನೀರಾವರಿ ಅಧಿಕಾರಿಗಳು ಶಾಸಕ ಪಿ.ಟಿ.ಪರಮೇಶ್ವರ್​​​​ ಕೈಗೊಂಬೆಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ದಿವಂಗತ ಎಂ.ಪಿ ಪ್ರಕಾಶ್​​ ಪುತ್ರಿ ಎಂ.ಪಿ ಸುಮಾ ಆರೋಪಿಸಿದ್ದಾರೆ.

ಕೆರೆಗೆ ನೀರು ಹರಿಸಲು ಯಾಕೆ ವಿಳಂಬ ಮಾಡುತ್ತಿದ್ದೀರಿ ಎಂದು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಕಳಪೆ ಕಾಮಗಾರಿಯಾಗಿದೆ. ಪಂಪ್‌ಸೆಟ್ ಕೆಟ್ಟಿದೆ, ದುರಸ್ತಿ ಕೆಲಸಕ್ಕೆ ದೂರದ ಊರಿಗೆ ಕಳುಹಿಸಲಾಗಿದೆ ಎಂಬ ಹಾರಿಕೆ ಉತ್ತರಗಳನ್ನು ನೀಡುತ್ತಿದ್ದಾರೆ. ಅಲ್ಲದೇ ತಳಕಲ್​​ ಕೆರೆಗೆ ಈಗಾಗಲೆ ಕೆರೆಗೆ ಎರಡು ಭಾರಿ ನೀರು ಹರಿಸಲಾಗಿದೆ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೇ ಈವರೆಗೂ ಒಂದು ಹನಿ ನೀರು ಕೂಡ ತಳಕಲ್​​​ ಕೆರೆಗೆ ಹರಿದುಬಂದಿಲ್ಲ. ಹಾಗಿದ್ದರೆ ಸರ್ಕಾರದಿಂದ ಬಂದ ಕೋಟ್ಯಂತರ ರೂಪಾಯಿ ಹಣವನ್ನು ಶಾಸಕ ಪರಮೇಶ್ವರ್​​​​ ನುಂಗಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಈ ಸಮಸ್ಯೆಗೆ ಬೇಗ ಪರಿಹಾರ ನೀಡೋದನ್ನು ಬಿಟ್ಟು ಶಾಸಕ ಪಿ.ಟಿ ಪರಮೇಶ್ವರ್​​​ ದ್ವೇಷ ರಾಜಕಾರಣ ಮಾಡ್ತಿದ್ದಾರೆ ಎಂದು ದೂರಿದ್ದಾರೆ.

ರೈತರ ಹೋರಾಟಕ್ಕೆ ಹೂವಿನ ಹಡಗಲಿ ಶಾಂತವೀರ ಸ್ವಾಮೀಜಿ ಸಾಥ್​​​!
ತಳಕಲ್​​​ ಕೆರೆಗೆ ನೀರು ತುಂಬಿಸುವ ಹೋರಾಟಕ್ಕೆ ಹೂವಿನಹಡಗಲಿ ಶಾಖಾ ಗವಿಮಠದ ಡಾ. ಹಿರಿಯ ಶಾಂತವೀರ ಸ್ವಾಮೀಜಿ ಅವರು ತಳಕಲ್​​ ಕೆರೆ ತುಂಬಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಎಂ.ಪಿ ಸುಮಾ ಹಾಗೂ ರೈತರಿಗೆ ಸಾಥ್ ಕೊಟ್ಟಿದ್ದಾರೆ. ಕೆರೆಗೆ ನೀರು ತುಂಬಿಸುವ ವಿಚಾರಕ್ಕೆ ಸ್ವಾಮೀಜಿ ಮಾತನಾಡಿ, ಮನುಷ್ಯನ ಉಡುಗೆ, ತೊಡುಗೆ ಮತ್ತು ದಿನಬಳಕೆ ವಸ್ತುಗಳನ್ನು ಯಾಂತ್ರಿಕ ರೂಪದಲ್ಲಿ ಪಡೆಯಬಹುದು. ಆದರೆ ರೈತ ಬೆಳೆಯುವ ಜೋಳ, ಭತ್ತ, ಕಬ್ಬು ಇನ್ನಿತರ ಬೆಳೆಗಳನ್ನು ರೈತ ಬೆಳೆದರೆ ಮಾತ್ರ ನಮಗೆ ಸಿಗಲಿದೆ. ದೇಶಕ್ಕೆ ಬೆನ್ನೆಲುಬು ಎಂದು ಹೇಳುವ ರೈತನ ಬದುಕು ಅಭಿವೃದ್ಧಿ ಹೊಂದಬೇಕಾದರೆ ರೈತನ ಜೀವನಾಡಿ ತಳಕಲ್​​​ ಕೆರೆಗೆ ನೀರು ತುಂಬಿಸಬೇಕಾದ ಅನಿವಾರ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದರು.

ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ
ರೈತಾಪಿ ವರ್ಗದ ಜೀವನಾಡಿ ಆಗಿರುವ ತಳಕಲ್ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ನೂರಾರು ರೈತರು, ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಶಾಸಕ ಪಿಟಿ ಪರಮೇಶ್ವರ್​ ಹಾಗೂ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಕೆರೆ ಹೋರಾಟ ಸಮಿತಿಯಿಂದ ಜಲಸಪನ್ಮೂಲ ಅಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ. ತಳಕಲ್ ಕೆರೆ ಅಚ್ಚುಕಟ್ಟು ಪ್ರದೇಶದ ಗ್ರಾಮಸ್ಥರು, ಹೋರಾಟ ಸಮಿತಿಯ ಪದಾಧಿಕಾರಿಗಳು ಸರ್ವಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | Rain News | ವಿಜಯಪುರದಲ್ಲಿ ಮಳೆ ಅವಾಂತರ : ಡೋಣಿ ನದಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ, ಸಂಪರ್ಕ ಕಡಿತ

Exit mobile version