ದಾಸರಹಳ್ಳಿ: ರಾಜ್ಯ ವಿಧಾನಸಭಾ ಚುನಾವಣಾ (Karnataka Election 2023) ಕಣ ದಿನೇ ದಿನೆ ರಂಗು ಪಡೆದುಕೊಳ್ಳುತ್ತಲಿದೆ. ಮತ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಇತ್ತ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ, ಅಭ್ಯರ್ಥಿ ಆರ್. ಮಂಜುನಾಥ್ ಅವರು ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬೆಳಗ್ಗೆಯಿಂದಲೇ ಕ್ಷೇತ್ರದ ಹಲವು ಕಡೆ ಭೇಟಿ ನೀಡಿ ಮತ ಶಿಕಾರಿಯನ್ನು ನಡೆಸುತ್ತಿದ್ದಾರೆ.
ಭಾನುವಾರ ಬೆಳಗ್ಗೆ ಸಹ ಕ್ಷೇತ್ರದ ಹಲವು ಕಡೆ ಸಂಚಾರ ಮಾಡಿರುವ ಮಂಜುನಾಥ್ ಅವರು, “ಮನೆ ಮನೆಗೆ ಮಂಜಣ್ಣ, ದಾಸರಹಳ್ಳಿಗೆ ಮಂಜಣ್ಣ” ಎಂಬ ಕಾರ್ಯಕ್ರಮದಲ್ಲಿ ಪ್ರಚಾರ ಕಾರ್ಯವನ್ನು ಕೈಗೊಂಡಿದ್ದಾರೆ. ಶೆಟ್ಟಿಹಳ್ಳಿ ಕಮ್ಮಗೊಂಡನಹಳ್ಳಿ, ಅಬ್ಬಿಗೆರೆ ಪಾರ್ಕ್, ವಿನಾಯಕ ಲೇಔಟ್, ಶೆಟ್ಟಿಹಳ್ಳಿ ಮರ ಚಿಕ್ಕಸಂದ್ರ, ಸಪ್ತಗಿರಿ ಕಾಲೇಜು, ಬಾಬಣ್ಣ ಬಡಾವಣೆ ಹೀಗೆ ಇನ್ನೂ ಮುಂತಾದ ಪ್ರದೇಶಗಳಿಗೆ ರ‍್ಯಾಲಿ ಮೂಲಕ ಮತ ಯಾಚನೆ ನಡೆಸಿದರು.
ಕ್ಷೇತ್ರದೆಲ್ಲಡೆ ಸಂಚಾರ ಮಾಡುತ್ತಿದ್ದು, ಎಲ್ಲ ಕಡೆ ಜನರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಶಾಸಕರಿಗೆ ಹೋದ ಕಡೆಯಲ್ಲಿ ಗೌರವ ಸಿಗುತ್ತಿದ್ದು, ಮಹಿಳೆಯರು ಆರತಿ ಎತ್ತಿ ವಿಜಯಶಾಲಿಯಾಗುವಂತೆ ಆಶೀರ್ವಾದ ಮಾಡುತ್ತಿದ್ದರು.
ಇದನ್ನೂ ಓದಿ: Karnataka Election: ಯತ್ನಾಳ್ ಕ್ಷೇತ್ರದಲ್ಲಿ ಚುನಾವಣೆಯಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ, ಕಾರಣ ಏನು?
ಈ ವೇಳೆ ಮಾತನಾಡಿದ ಶಾಸಕ ಆರ್. ಮಂಜುನಾಥ್ ಅವರು, ಬಡವರ ಪರವಾಗಿ, ಅಸಹಾಯಕರಿಗೆ ಜೀವನ ಭದ್ರತೆ ಒದಗಿಸುವ ಹಾಗೂ ವಾಸ್ತವದಲ್ಲಿ ಅನುಷ್ಠಾನಗೊಳಿಸಬಹುದಾದ ಆಶ್ವಾಸನೆಯನ್ನು ಜೆಡಿಎಸ್ ಹೊಂದಿದೆ. ದೇಶದಲ್ಲೇ ಇದು ಮಾದರಿಯಾಗಿದೆ. ರೈತರು, ಮಹಿಳೆಯರು, ವೃದ್ಧರು, ಶ್ರಮಿಕರನ್ನು ಒಳಗೊಂಡಂತೆ ಸಮಾಜದ ಎಲ್ಲ ವರ್ಗದ ಬಡವರ ಜೀವನ, ಆರ್ಥಿಕ ಮಟ್ಟ ಸುಧಾರಣೆಗೆ ಇದು ಪೂರಕವಾಗಿದ್ದು, ಜನತೆ ಜೆಡಿಎಸ್ ಪಕ್ಷವನ್ನು ಆಶೀರ್ವದಿಸಲು ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.