ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲೇ ಸಚಿವರ ವಿರುದ್ಧ ಹಲವು ಶಾಸಕರು ಅಸಮಾಧಾನ ಹೊರಹಾಕಿ ಸಿಎಂಗೆ ಪತ್ರ ಬರೆದಿದ್ದರು. ಇದೀಗ ಸ್ವಪಕ್ಷದ ಮತ್ತೊಬ್ಬ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಅಸಮಾಧಾನ ಹೊರಹಾಕಿರುವುದು ಕಂಡುಬಂದಿದೆ.
ಅನುದಾನ ಬಿಡುಗಡೆಯಾಗದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಉಗಾರ ಪಟ್ಟಣದಲ್ಲಿ ಮಾತನಾಡಿರುವ ಅವರು, ಏನೂ ಇಲ್ಲದೇ ನಾವು ಖಾಲಿ ಕುಳಿತಿದ್ದೇವೆ. ಬಸವೇಶ್ವರ ಏತ ನೀರಾವರಿ ಯೋಜನೆ ಕುರಿತು ಹತ್ತು ಬಾರಿ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿದ್ದೇನೆ. ಈವರೆಗೂ ಆ ಯೋಜನೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಬಸವೇಶ್ವರ ಏತ ನೀರಾವರಿ ಯೋಜನೆ ಮುಂದಿಟ್ಟುಕೊಂಡೇ ನಾನು ಚುನಾವಣೆ ಗೆದ್ದಿದ್ದು. ಜನರಿಗೆ ಆಶ್ವಾಸನೆ ಕೊಟ್ಟಿದ್ದೇವೆ, ಜನರಿಗೆ ಬಹಳ ನಿರೀಕ್ಷೆ ಇದೆ. ಮೊದಲೇ ಬರಗಾಲ, ಎಲ್ಲಿ ಹೋದರೂ ಜನ ಪ್ರಶ್ನೆ ಮಾಡುತ್ತಾರೆ. ಪ್ರವಾಹದ ವೇಳೆ ಕೆರೆ ತುಂಬಿಸಿದರೆ ಈಗ ಜನ ಜಾನುವಾರುಗಳಿಗೆ ಆಧಾರವಾಗುತ್ತಿತ್ತು. ಒಂದು ಟಿಸಿ ಬೇಕಾದ್ರೆ ನೀವೆ ಹಣ ಕೊಡಿ ಎಂದು ರೈತರಿಗೆ ಹೇಳುತ್ತಾರೆ. ಮೂರ್ನಾಲ್ಕು ಲಕ್ಷ ರೂ.ಗಳನ್ನು ರೈತರು ನೀಡಲು ಆಗಲ್ಲ. ಆಡಳಿತ ಸುಧಾರಣೆ ಆಗಬೇಕು ಎಂದು ಹೇಳಿದ್ದೇನೆ. ಇಂಧನ ಸಚಿವರು ಸಮಸ್ಯೆ ಸರಿಪಡಿಸುವ ಭರವಸೆ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | JDS Politics : ಜೆಡಿಎಸ್‌ನಲ್ಲಿ ರಾಜ್ಯಾಧ್ಯಕ್ಷರಿಗೆ ನಿರ್ಧಾರ ಮಾಡುವ ಹಕ್ಕಿಲ್ಲ; ಅ. 16ಕ್ಕೆ ನನ್ನ ನಿರ್ಧಾರವೆಂದ ಸಿ.ಎಂ. ಇಬ್ರಾಹಿಂ
ಕ್ಷೇತ್ರದ ಜನರು ಸಮುದಾಯ ಭವನ, ದೇವಸ್ಥಾನಗಳಿಗೆ ಹಣ, ನೀರಾವರಿ ಯೋಜನೆ ಕೇಳುತ್ತಿದ್ದಾರೆ. ಏನು ಇಲ್ಲದೇ ನಾವು ಖಾಲಿ ಕುಳಿತುಕೊಂಡಿದ್ದೇವೆ. ಎಂಎಲ್‌ಎ ಫಂಡ್ ಕೊಟ್ಟಿದ್ದೀವಿ ಎಂದಿದ್ದಾರೆ, ಎರಡು ತಿಂಗಳಾದರೂ ಈವರೆಗೂ ಆದೇಶ ಬಂದಿಲ್ಲ. ಐವತ್ತು ಲಕ್ಷ ರೂ. ನೀಡಿದ್ದೀವಿ ಎಂದಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪತ್ರ ಬರಬೇಕಿತ್ತು, ಇನ್ನೂ ಬಂದಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ: ರಾಜು ಕಾಗೆ
ಸರ್ಕಾರದ ವಿರುದ್ಧ ಅಸಮಾಧಾನ ವಿಚಾರ ಶಾಸಕ ರಾಜು ಕಾಗೆ ಪ್ರತಿಕ್ರಿಯಿಸಿ, ನಾನು ಸರ್ಕಾರ ವಿರುದ್ಧವಾಗಲಿ, ಪರವಾಗಲಿ ಮಾತನಾಡಿಲ್ಲ. ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ಯಾವುದೇ ಸರ್ಕಾರಕ್ಕೆ ಆಗಲಿ, ಯಾರಿಗೆ ವೈಯಕ್ತಿಕವಾಗಿ ಆಗಲಿ ಮುಜುಗರ ತರುವ ಹೇಳಿಕೆ ನೀಡಿಲ್ಲ. ಶಾಸಕಾಂಗ, ಕಾರ್ಯಾಂಗ ವೈಫಲ್ಯತೆ ಬಗ್ಗೆ ಮಾತನಾಡಿದ್ದಾನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನನ್ನ ಹೇಳಿಕ ತಪ್ಪಾಗಿ ಅರ್ಥೈಸಿಕೊಂಡರೆ ಅದು ನನ್ನ ತಪ್ಪಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಎಂಟು ಬಾರಿ ಚುನಾವಣೆ ಸ್ಪರ್ಧಿಸಿ, ಐದು ಬಾರಿ ಗೆದ್ದಿದ್ದೀನಿ. ನಾನು ಮೊದಲ ಬಾರಿ ಎಂಎಲ್‌ಎ ಆಗಿದ್ದ ವೇಳೆ ಇದ್ದ ವ್ಯವಸ್ಥೆ, ಈಗಿನ ವ್ಯವಸ್ಥೆಗೆ ಅಜಗಜಾಂತರ ವ್ಯತ್ಯಾಸ ಇದೆ. ಇವತ್ತು ಜನಸಾಮಾನ್ಯರಿಗೂ ನ್ಯಾಯ ಸಿಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು. ಶಾಸಕಾಂಗ, ನ್ಯಾಯಾಂಗ ವ್ಯವಸ್ಥಿತವಾಗಿ ತಮ್ಮ ಕರ್ತವ್ಯ ಮಾಡಿದ್ದೆ ಆದರೆ ಸಾಮಾಜಿಕ ನ್ಯಾಯ ಕೊಡಲು ಸಾಧ್ಯ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡೋಕೆ ಸಾಧ್ಯ ಇದೆ. ನಮ್ಮ ವೈಫಲ್ಯತೆಗಳು, ನ್ಯೂನ್ಯತೆ ಸರಿಪಡಿಸಿಕೊಳ್ಳಬೇಕು ಎಂದಿದ್ದೇನೆ. ಯಾವುದೇ ಸರ್ಕಾರದ ವಿರುದ್ಧ, ಪರ ಮಾತನಾಡುವ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.
ಸರ್ಕಾರಕ್ಕೆ ಸಲಹೆ ಕೊಡುವುದು ಏನಾದರೂ ಹೇಳೋದು ತಪ್ಪಾ? ಅದನ್ನು ಏಕೆ ವಿರೋಧ ಎಂದು ಭಾವಿಸುತ್ತೀರಿ? ಪಿಡಿಒಗಳು ಯಾರೂ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಸರಿಯಾಗಿ ಕೆಲಸಕ್ಕೆ ಬರಲ್ಲ ನಾಲ್ಕು ದಿವಸ, ಎಂಟು ದಿನಗಳಿಗೊಮ್ಮೆ ಬರುತ್ತಾರೆ. ಪಿಡಿಒಗಳು, ಗ್ರಾಮ ಪಂಚಾಯತಿ ಸದಸ್ಯರಿಗೆ ಹೊಂದಾಣಿಕೆ ಇಲ್ಲ. ಪಂಚಾಯತಿ ಕಾರ್ಯ ವಿಫಲವಾದರೆ ಹಳ್ಳಿಗಳ ಸುಧಾರಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | DK Shivakumar: ಬಿಜೆಪಿ ಸರ್ಕಾರ ಸಾವಿರಾರು ಕೇಸು ಕೈಬಿಟ್ಟಿದೆ, 7361 ರೌಡಿ ಶೀಟರ್ಸ್ ಬೀದಿಗೆ ಬಿಟ್ಟಿದೆ ಎಂದ DKS
ಯಾವುದೇ ಕಚೇರಿಗೆ ಭಿಕ್ಷುಕ ಬಂದರೂ ಗೌರವ ಕೊಟ್ಟು ಕೆಲಸ ಮಾಡಿದರೆ ಅದು ಸಾಮಾಜಿಕ ನ್ಯಾಯ. ಪ್ರತಿಯೊಬ್ಬರೂ ಗೌರವದಿಂದ ಬದುಕಬೇಕು ಎಂಬುವುದು ನನ್ನ ಭಾವನೆ. ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ನಾವು ಚುನಾವಣೆಯಲ್ಲಿ ಸಾಕಷ್ಟು ಆಶ್ವಾಸನೆ ಕೊಟ್ಟಿದ್ದೇವೆ. ಅವುಗಳನ್ನು ಈಡೇರಿಸಲು ತಾಂತ್ರಿಕ ತೊಂದರೆಗಳಿವೆ. ನಮ್ಮಲ್ಲಿ ಇರುವ ವೈಫಲ್ಯ ಸರಿಪಡಿಸಿಕೊಳ್ಳಬೇಕು ಎಂಬ ಮಾತು ಹೇಳಿದ್ದೇನೆ ಎಂದು ತಿಳಿಸಿದರು.