ಬೆಂಗಳೂರು/ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಸ್ವಪಕ್ಷೀಯ ಶಾಸಕರೇ ಬರೆದಿರುವ “ವರ್ಗಾವಣೆ ದಂಧೆ” ಪತ್ರ ರಾಜ್ಯ ರಾಜಕೀಯದಲ್ಲಿ (Karnataka Politics) ಬಿರುಗಾಳಿಯನ್ನೇ ಎಬ್ಬಿಸಿದೆ. ಪ್ರತಿಪಕ್ಷಗಳಿಗೆ ಆಹಾರವಾಗಿದೆ. ಈ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ (Mla Basavaraj Rayareddy) ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಪತ್ರದ ಕೆಲವು ಅಂಶಗಳನ್ನು ಒಪ್ಪಿಕೊಂಡಿದ್ದು, ಮತ್ತಷ್ಟು ಸಂಗತಿ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ಶಾಸಕಾಂಗ ಪಕ್ಷದ ಸಭೆ (Legislative Party Meeting) ಕರೆಯುವಂತೆ ಪತ್ರ ಬರೆದಿರುವುದು ನಿಜ. ಸರ್ಕಾರದಲ್ಲಿ ಕೆಲಸಗಳು ಆಗಬೇಕಿದೆ. ಶಾಸಕ ಬಿ.ಆರ್. ಪಾಟೀಲ್ (MLA BR Patil) ಸಿದ್ಧಪಡಿಸಿದ ಪತ್ರಕ್ಕೆ ಸಹಿ ಹಾಕಿದ್ದೇನೆ. ಒಟ್ಟು 35 ಶಾಸಕರು ಸಹಿ ಹಾಕಿದ್ದೇವೆ. ಸಿಎಲ್‌ಪಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ. ಇದು ಅಸಮಾಧಾನ ಅಲ್ಲ. ಕೆಲಸ ಮಾಡಿಕೊಡಿ ಅಂತ ಕೇಳುತ್ತಿದ್ದೇವಷ್ಟೇ ಎಂದು “ವರ್ಗಾವಣೆ ದಂಧೆ” (Transfer racket) ಬಗ್ಗೆ ಬರೆಯಲಾಗಿದೆ ಎನ್ನಲಾದ ಪತ್ರದ ಬಗ್ಗೆ ಶಾಸಕ ಬಸವರಾಜ ರಾಯರೆಡ್ಡಿ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: Karnataka Politics : ಸರ್ಕಾರದ ವರ್ಗಾವಣೆ ದಂಧೆ! ಕೈ ಶಾಸಕರೇ ಗರಂ; ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟ್ಟೇ?
ಈ ವಿಷಯವನ್ನು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿಲ್ಲ. ಸಿಎಲ್‌ಪಿ ಸಭೆಯಲ್ಲಿ ಎಲ್ಲವೂ ಚರ್ಚೆ ಆಗಬೇಕು. ನಾನು ಒಳಗೊಂದು ಹೊರಗೊಂದು ಮಾಡುವವನಲ್ಲ. ಆ ಜಾಯಮಾನ ನನ್ನದಲ್ಲ. ನಾನು ನೇರವಾಗಿ ಹೇಳುತ್ತೇನೆ. ಸರ್ಕಾರ ಈಗಷ್ಟೇ ಬಂದಿದೆ. ಒತ್ತಡ ಹಾಕಲು ಆಗುವುದಿಲ್ಲ. ಪತ್ರ ಬರೆದಿದ್ದು ವಿಪಕ್ಷಗಳಿಗೆ ಆಹಾರವಾಯಿತು ಎಂದಾದರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಬೆಂಗಳೂರಿನಲ್ಲಿ ಹೇಳಿದ್ದಾರೆ.
ನನಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಗೊತ್ತಿಲ್ಲ. ಕುಮಾರಸ್ವಾಮಿ ಅವರು ಸಿಂಗಾಪುರದಿಂದ ಕಾರ್ಯಾಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ನನಗೆ ಅರಿವಿಲ್ಲ. ನಾನು ಆ ಕಾರ್ಯಾಚರಣೆಯಲ್ಲಿ ಭಾಗಿ ಆಗಿಲ್ಲ, ಆಗುವುದೂ ಇಲ್ಲ. ಅಂತಹ ಆಲೋಚನೆಯೂ ನನ್ನಲ್ಲಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇಂಟಲಿಜೆನ್ಸಿ ಮಾಹಿತಿ ಇರಬಹುದು. ಆ ವಿಷಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಸರ್ಕಾರವನ್ನು ಕೆಡಗುವ ವಿಷಯಕ್ಕೆ ಬಂದರೆ, ನಮ್ಮ ಕಾಂಗ್ರೆಸ್ ಪಕ್ಷದ ಶಾಸಕರು ಕೆಳಮಟ್ಟಕ್ಕೆ ಇಳಿಯುವುದಿಲ್ಲ. ಆಳಂದ ಶಾಸಕರು ಹಿರಿಯ ಸದಸ್ಯರಿದ್ದಾರೆ. ಅವರು ಸೇರಿದಂತೆ ಕೆಲ ಹಿರಿಯ ಶಾಸಕರು ತಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ. ಯಾರೂ ಸಹ ಸಚಿವರ ಬಗ್ಗೆ, ಶಾಸಕರ ಬಗ್ಗೆ ಬರೆದಿಲ್ಲ. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಮಾಡಬೇಕು ಎಂದಷ್ಟೇ ಬರೆದಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಅವರು ಕೊಪ್ಪಳದಲ್ಲಿ ಹೇಳಿದ್ದಾರೆ.
ನನಗೆ ಯಾರೊಂದಿಗೂ ಯಾವ ಸಮಸ್ಯೆಯೂ ಇಲ್ಲ. ಶಾಸಕಾಂಗದ ಪಕ್ಷದ ಸಭೆ ಕರೆದು ಚರ್ಚೆ ಮಾಡಿ ಎಂದು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ನಮ್ಮ ಪಕ್ಷದಲ್ಲಿ ಅದು ಚರ್ಚೆಯಾಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರೊಂದಿಗೆ ಚರ್ಚೆ ಮಾಡಿದರೆ ತಪ್ಪೇನಿಲ್ಲ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.
ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ
ಮುಂದೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಬಸವರಾಜ ರಾಯರೆಡ್ಡಿ, ಒಪ್ಪಂದಕ್ಕೆ ನಾನೇನು ಸಾಕ್ಷಿ ಹಾಕಿಲ್ಲವಲ್ಲ? ಅವರು ಒಪ್ಪಂದದಲ್ಲಿದ್ದಾರೋ? ಇಲ್ಲವೋ ನನಗೇನು ಗೊತ್ತು? ಒಂದು ಬಾರಿ ವೋಟ್ ತೆಗೆದುಕೊಂಡರೆ ಐದು ವರ್ಷವಿರುತ್ತಾರೆ. ಒಂದು ವೇಳೆ ರಾಜಿನಾಮೆ ಕೊಟ್ಟರೆ, ಪಕ್ಷ ತೀರ್ಮಾನ ತೆಗೆದುಕೊಂಡು ಬದಲಾವಣೆ ಮಾಡಿದರೆ ನಾನೇನು ಮಾಡಲಿ? ನನಗಿರುವ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: Karnataka Politics : ಸರ್ಕಾರದಲ್ಲಿ ಅನುದಾನ ಎಲ್ಲಿದೆ? ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ತಿರುಗೇಟು!
ಗ್ಯಾರಂಟಿ ಯೋಜನೆಗಾಗಿ ನನ್ನ ವೇತನ ಕೊಡುವೆ
ನಮ್ಮಲ್ಲಿ ಯಾರೂ ಬೇರೆ ಪಕ್ಷಕ್ಕೆ ಹೋಗುತ್ತಿಲ್ಲ. ನಾನಂತೂ ಹೋಗುವುದಿಲ್ಲ. ಗ್ಯಾರಂಟಿ ಯೋಜನೆಗಳಿಗೆ (Congress Guarantee Scheme) ನಾನು ನನ್ನ ಶಾಸಕರ ವೇತನವನ್ನು ನೀಡುತ್ತೇನೆ. ಈ ಬಗ್ಗೆ ಈಗಾಗಲೇ ಸ್ಪೀಕರ್ ಯು.ಟಿ. ಖಾದರ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಹೇಳಿದ್ದೇನೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದರು.