ದಾವಣಗೆರೆ: ಸಹೋದರನ ಪುತ್ರ ಚಂದ್ರು ಸಾವು ಪ್ರಕರಣದಲ್ಲಿ(Chandru death) ಅಪಘಾತವಾದ ಕಾರು ತೋರಿಸುವಂತೆ ಹೊನ್ನಾಳಿ ಪೊಲೀಸ್ ಠಾಣೆ ಮುಂದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಹೈಡ್ರಾಮಾ ನಡೆಸಿದ್ದಾರೆ. ತನಿಖೆ ಹಂತದಲ್ಲಿರುವಾಗ ಕಾರು ತೋರಿಸಲು ಸಿಪಿಐ ಸಿದ್ದೇಗೌಡ ನಿರಾಕರಿಸಿದ್ದರಿಂದ ಪೊಲೀಸರ ವಿರುದ್ಧ ಶಾಸಕ ಅಕ್ರೋಶ ಹೊರಹಾಕಿದರು.
ನಾಪತ್ತೆಯಾಗಿದ್ದ ಚಂದ್ರಶೇಖರ್ ಮೃತದೇಹ ಹೊನ್ನಾಳಿ ತಾಲೂಕಿನ ತುಂಗಾ ಕಾಲುವೆಯಲ್ಲಿ ಅನುಮಾನಾಸ್ಪದವಾಗಿ ಕಾರಿನಲ್ಲಿ ಸಿಕ್ಕಿತ್ತು. ಮೇಲ್ನೋಟಕ್ಕೆ ಇದು ಅಪಘಾತವಾಗಿ ಕಂಡರೂ, ಪ್ರಕರಣವನ್ನು ವ್ಯವಸ್ಥಿತ ಕೊಲೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದ್ದರು. ಹೀಗಾಗಿ ತನಿಖೆ ಕೈಗೊಂಡಿದ್ದ ಪೊಲೀಸರು, ಅಪಘಾತವಾದ ಚಂದ್ರು ಕಾರನ್ನು ಠಾಣೆ ಬಳಿ ತಂದು ನಿಲ್ಲಿಸಿದ್ದರು. ಇದರ ಬೆನ್ನಲ್ಲೇ ಹೊನ್ನಾಳಿ ಪೊಲೀಸ್ ಠಾಣೆಯ ಬಳಿ ಬಂದು ಶಾಸಕ ರೇಣುಕಾಚಾರ್ಯ ಚಂದ್ರು ಕಾರು ತೋರಿಸಲು ಪಟ್ಟು ಹಿಡಿದರು.
ಎಡಿಜಿಪಿ ಅಲೋಕ್ ಕುಮಾರ್ ನಿನ್ನೆ ಬಂದು ನನ್ನನ್ನು ಮಾತನಾಡಿಸದೇ ಹಾಗೆಯೇ ಹೋಗಿದ್ದಾನೆ. ಪ್ರಕರಣ ಸಂಬಂಧ ನನ್ನ ಹೇಳಿಕೆ ಪಡೆದುಕೊಂಡಿಲ್ಲ. ಓವರ್ ಸ್ಪೀಡ್‌ನಿಂದ ಅಪಘಾತವಾಗಿದೆ ಎಂದು ಹೇಳಿದ್ದಾನೆ. ಅದು ಹೇಗೆ ಆಗುತ್ತದೆ ಎಂದು ರೇಣುಕಾಚಾರ್ಯ ಕೂಗಾಡಿ, ನನ್ನ ಮಗನ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ನನ್ನ ಮಗನ ಶವದ ಮೇಲೆ ನೂರಾರು ಕಾರುಗಳನ್ನು ಹಾಕಿಕೊಂಡು ಓಡಾಡಿದರು. ಆದರೆ ನನ್ನ ಮಗನನ್ನು ಪತ್ತೆ ಮಾಡಿದ್ದು ಕ್ಷೇತ್ರದ ಜನ. ಡ್ರೋನ್ ಮೂಲಕ ನನ್ನ ಮಗನನ್ನು ಜನರು ಹುಡುಕಾಟ ನಡೆಸಿದ್ದಾರೆ. ಪೊಲೀಸರಿಂದ ಇದು ಸಾಧ್ಯವಾಗಲಿಲ್ಲ ಎಂದು ಕಿಡಿಕಾರಿದರು.
ಪೊಲೀಸರ ನಿರ್ಲಕ್ಷ್ಯದಿಂದ ಚಂದ್ರು ಸಾವು
ಚಂದ್ರು ಓವರ್ ಸ್ಪೀಡ್‌ನಲ್ಲಿ ಬಂದು ಬಿದ್ದಿದ್ದಾನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳುತ್ತಾರೆ. ಹಾಗಾದರೆ ಅವನ ಕೈಗೆ ಹಗ್ಗ ಕಟ್ಟಿದ್ದು ಯಾರು ಹೇಳಿ? ಪೊಲೀಸರ ನಿರ್ಲಕ್ಷ್ಯ ಇದರಲ್ಲಿ ಎದ್ದು ಕಾಣುತ್ತಿದೆ. ಕನಿಷ್ಠಪಕ್ಷ ಆ ಅಧಿಕಾರಿ ನನ್ನ ಬಳಿ ಮಾಹಿತಿ ಪಡೆಯಲು ಕೂಡ ಬಂದಿಲ್ಲ. ಅಲೋಕ್ ಕುಮಾರ್ ಏನೇನು ಮಾಡಿದ್ದಾನೆ ಎನ್ನುವುದು ನಮಗೆ ಗೊತ್ತಿಲ್ಲವೇ? ನನಗೆ ಕೊಲೆ ಬೆದರಿಕೆ ಬಂದಿತ್ತು. ಆಗ ಯಾವ ಅಧಿಕಾರಿಯೂ ಬಂದು ನನ್ನ ಹತ್ತಿರ ಮಾಹಿತಿ ಪಡೆಯಲಿಲ್ಲ. ಈಗ ಸ್ಪೀಡ್ ಆಗಿ ಬಂದು ಬಿದ್ದಿರಬಹುದು ಎಂದು ಹೇಳುತ್ತಿದ್ದಾರೆ. ಒಬ್ಬ ಶಾಸಕನ ಮಗನಿಗೆ ಈ ರೀತಿಯಾದರೆ ಸಾಮಾನ್ಯ ಜನರ ಗತಿ ಏನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರಕರಣದಲ್ಲಿ ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ವೈಫಲ್ಯ ಕಾಣಿಸುತ್ತಿದೆ. ನಾವು ಮಾಹಿತಿ ಕೊಟ್ಟ ಕಡೆ ಮಾತ್ರ ಪೊಲೀಸರು ಹುಡುಕಾಟ ನಡೆಸಿದರು. ನಾನು ಸರ್ಕಾರದ ಒಂದು ಭಾಗ. ಹೀಗಿದ್ದರೂ ನನ್ನ ಕುಟುಂಬಕ್ಕೆ ರಕ್ಷಣೆ ಇಲ್ಲ.
ಗೃಹ ಸಚಿವರು, ಸಿಎಂಗೆ ಮಾಹಿತಿ ನೀಡುತ್ತಾರೆ ವಿನಾ ಹುಡುಕಾಟದ ಕೆಲಸ ಮಾಡಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Chandru Death | ಮಹಿಳೆಯರಿಂದ ಕೈ ತುತ್ತು ತಿಂದ ರೇಣುಕಾಚಾರ್ಯ; ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಿಡಿ