ಬೆಂಗಳೂರು: ನಮ್ಮ ರಾಜ್ಯದಲ್ಲಿ ರಾಜ್ಯೋತ್ಸವ ಸಂದರ್ಭದಲ್ಲಿ ಮಾತ್ರ ಕನ್ನಡ ಜಾಗೃತಿ ಆಗುತ್ತಿದೆ. ಇದು ಯಾಕೆ ಎಂದು ನಮ್ಮನ್ನೇ ನಾವು ಕೇಳಿಕೊಳ್ಳಬೇಕು. ನಾವು ನಿರಂತರವಾಗಿ ಜಾಗೃತವಾಗಿರಬೇಕಾದ ಅನಿವಾರ್ಯತೆ ಇದೆ ಎಂದು ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕನ್ನಡ ರಾಜ್ಯೋತ್ಸವ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಬಹುತೇಕ ಪರೀಕ್ಷೆಗಳಿಗೆ ಹಿಂದಿ, ಇಂಗ್ಲಿಷ್ ಕಡ್ಡಾಯ ಆಗಿದೆ. ಇದರಿಂದ ಕನ್ನಡಿಗರಿಗೆ ದೊಡ್ಡ ಮಟ್ಟದ ಅನ್ಯಾಯ ಆಗಿದೆ ಎಂದರು. ಕನ್ನಡಿಗರು ಅನೇಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದರು.
ರೈಲ್ವೆ, ಸಿಆರ್‌ಪಿಎಫ್ ಸೇರಿದಂತೆ ಕೇಂದ್ರ ನೇಮಕಾತಿ ಆಯೋಗ ನಡೆಸುವ ಬಹುತೇಕ ಎಲ್ಲ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲೇ ನಡೆಯುತ್ತಿವೆ. ಕೇಂದ್ರ ಸರಕಾರದಿಂದ ಹಿಂದಿ ಹೇರಿಕೆ ನಡೆಯುತ್ತಿದೆ. ಇದು ಖಂಡನೀಯ ಎಂದು ಹೇಳಿದ ಅವರು, ಪ್ರಾದೇಶಿಕ ಭಾಷೆಗಳಿಗೆ ಪ್ರಾಧಾನ್ಯತೆ ಕೊಡಬೇಕು ಎಂದು ಆಗ್ರಹಿಸಿದರು.
ಇಷ್ಟೆಲ್ಲ ಮಾತುಗಳನ್ನು ಅವರು ಸಿಎಂ ಬಸವರಾಜ ಮುಂದೆಯೇ ಆಡಿದರು ರಿಜ್ವಾನ್ ಅರ್ಷದ್. ಜತೆಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲರಿಗೂ ಕನ್ನಡ ಕಲಿಸೋಣ ಎಂದ ಬಿ.ಸಿ. ನಾಗೇಶ್
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಅ ವರು, ಕನ್ನಡ ಭಾಷೆಯನ್ನು ಎಲ್ಲಿಗೂ ಕಲಿಸುವ, ನಾಡಿನ ಪರಂಪರೆಯನ್ನು ಎಲ್ಲರಿಗೂ ತಿಳಿಸುವ ಕೆಲಸ ನಾವು ಮಾಡಬೇಕು ಎಂದರು. ಕೊರೊನಾ ಕಾಲದಲ್ಲಿ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದ ಅವರು, ಕನ್ನಡ ನಾಡು ನುಡಿ ಬೆಳೆಸಲು ಪೋಷಕರು ಮುಂದಾಗಬೇಕು ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಎಲ್ಲ ತರಗತಿಯಲ್ಲಿ ಕನ್ನಡಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು ನಾಗೇಶ್.