Site icon Vistara News

ಕಾಂಗ್ರೆಸ್ ಪ್ರತಿಭಟನೆ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ಷಡ್ಯಂತ್ರ: ಬಿಜೆಪಿ ಮುಖಂಡರ ಆರೋಪ

ಎಸ್.ಆರ್.ವಿಶ್ವನಾಥ್

ಬೆಂಗಳೂರು: ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ಇಲ್ಲಸಲ್ಲದ ಆರೋಪಗಳನ್ನು ಮಾಡಲು ಆರಂಭಿಸಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದ ನಗರಾಭಿವೃದ್ಧಿ ಇಲಾಖೆಗೆ ಆರ್‌ಎಸ್‌ಎಸ್‌-ಬಿಜೆಪಿ ಕಚೇರಿ ಎಂದು ಕಾಂಗ್ರೆಸ್‌ ಶಾಸಕರು ಬೋರ್ಡ್‌ ಹಾಕಿ ಪ್ರತಿಭಟನೆ ನಡೆಸಿದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಈ ಹಿಂದಿನ ಚುನಾವಣೆಗಳಲ್ಲಿ ಆಂತರಿಕ ಕಚ್ಚಾಟದಿಂದ ತಮ್ಮವರನ್ನೇ ಸೋಲಿಸುವ ಮೂಲಕ ಸರಣಿ ಸೋಲನುಭವಿಸಿದ್ದಾರೆ. ಇದೇ ಹತಾಶೆ ಅವರನ್ನು ಕಾಡುತ್ತಿರುವುದರಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದರು.

ಇದನ್ನೂ ಓದಿ | BBMP ಮೀಸಲಾತಿ: ವಿಕಾಸಸೌಧಕ್ಕೆ ಮುತ್ತಿಗೆ, UD ಕಚೇರಿ ಬೋರ್ಡ್‌ ಬದಲಿಸಿದ ಕಾಂಗ್ರೆಸ್‌ ನಾಯಕರು

ಬೊಮ್ಮಾಯಿ ಸರ್ಕಾರ ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ವಾರ್ಡ್‌ಗಳ ಪುನರ್ವಿಂಗಡಣೆ ಮತ್ತು ಮೀಸಲಾತಿಯನ್ನು ಪ್ರಕಟಿಸಿದೆ. ಇದರಲ್ಲಿ ಸಾಮಾಜಿಕ ನ್ಯಾಯವನ್ನು ಕಾಪಾಡಲಾಗಿದೆ. ಮೀಸಲಾತಿ ಸಿದ್ಧಪಡಿಸುವ ಸಂದರ್ಭದಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನುರಿತ ಅಧಿಕಾರಿಗಳ ತಂಡಗಳು ಈ ಮೀಸಲಾತಿಯನ್ನು ಸಿದ್ಧಪಡಿಸಿವೆ. ಇದರಲ್ಲಿ ನಮ್ಮ ಪಕ್ಷದ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಿರುವುದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಒಂದು ವೇಳೆ ಲೋಪ ಇದ್ದಲ್ಲಿ ಅದಕ್ಕೆ ಆಕ್ಷೇಪಣೆ ಸಲ್ಲಿಸಲಿ. ಅದನ್ನು ಬಿಟ್ಟು ಸುಸೂತ್ರವಾಗಿ ನಡೆಯಬೇಕಿರುವ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕರು ನಡೆಸಿದ್ದಾರೆ ಎಂದು ವಿಶ್ವನಾಥ್ ಟೀಕಿಸಿದರು.

ಬಿಬಿಎಂಪಿ ಚುನಾವಣೆಯನ್ನು ಎದುರಿಸಲು ನಮ್ಮ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಸಿದ್ಧರಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನೇರವಾಗಿ ಚುನಾವಣೆ ಅಖಾಡಕ್ಕೆ ಧುಮುಕಿ ತಮ್ಮ ಪೌರುಷ ತೋರಿಸಲಿ ಎಂದು ವಿಶ್ವನಾಥ್ ಪಂಥಾಹ್ವಾನ ನೀಡಿದರು.

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಸಚಿವರ ಟೀಕೆ
ಸಚಿವ ಎಸ್‌.ಟಿ.ಸೋಮಸೇಖರ್ ಮಾತನಾಡಿ, ವಾರ್ಡ್ ವಿಂಗಡನೆಯಲ್ಲಿ ಆಯಾ ಜಾತಿಗೆ ತಕ್ಕಂತೆ ಕಾನೂನು ವ್ಯಾಪ್ತಿಯಲ್ಲಿ ಮೀಸಲಾತಿ ಕೊಡಲಾಗಿದೆ. ಸತೀಶ್ ರೆಡ್ಡಿ ಕ್ಷೇತ್ರದಲ್ಲಿ 9 ಮಹಿಳಾ ಮೀಸಲಾತಿ ಕೊಡಲಾಗಿದೆ. ಆದರೆ ಹತಾಶರಾಗಿ ಕಾಂಗ್ರೆಸ್ ನಾಯಕರು ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಹೋಗಿ ಬೋರ್ಡ್ ಬದಲಾಯಿಸಿದ್ದಾರೆ. ಅಸಮಾಧಾನವಿದ್ದರೆ ಕೋರ್ಟ್‌ಗೆ ಹೋಗಿ ಪ್ರಶ್ನೆ ಮಾಡಬಹದು, ಇಲ್ಲದಿದ್ದರೆ ಸೆಪ್ಟೆಂಬರ್‌ನಲ್ಲಿ ಚುನಾವಣೆ ಎದುರಿಸಿ ಎಂದು ತಿಳಿಸಿದರು.

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಆರ್‌ಎಸ್‌ಎಸ್, ಬಿಜೆಪಿ ಬಗ್ಗೆ ಮಾತನಾಡುವುದು ಕಾಂಗ್ರೆಸ್ ನಾಯಕರಿಗೆ ಗೌರವ ತರುವಂತಹದ್ದಲ್ಲ. ಚುನಾವಣೆಯಲ್ಲಿ ಗೆಲ್ಲುವ ನಂಬಿಕೆಯಿಲ್ಲದೆ ಹೀಗೆ ಮಾಡಿದ್ದಾರೆ ಎಂದಿದ್ದಾರೆ.

ಸಚಿವ ಬೈರತಿ ಬಸವರಾಜ ಪ್ರತಿಕ್ರಿಯಿಸಿ, ಇವತ್ತು ಬೋರ್ಡ್ ಹಾಕಲು ಹೋಗಿದ್ದು ಹೇಸಿಗೆ ಕೆಲಸ. ಪ್ರಚಾರಕ್ಕಾಗಿ ಕಾಂಗ್ರೆಸ್‌ನವರು ಇಂತಹ ಕೆಲಸ ಮಾಡಿದ್ದಾರೆ. ಕೇಶವ ಕೃಪ, ಆರ್‌ಎಸ್‌ಎಸ್‌ ಕಂಡರೆ ಯಾಕೆ ಭಯ‌ ಎಂದು ಕೈ ನಾಯಕರ ವಿರುದ್ಧ ಕಿಡಿಕಾರಿದರು.

ನಾನು ಕೂಡ ಕಾಂಗ್ರೆಸ್‌ನಲ್ಲಿದ್ದೆ, ಆಗ ಮೀಸಲಾತಿ ಪ್ರಕಟ ಮಾಡಿದಾಗ ಬಿಜೆಪಿಯವರು ಈ ರೀತಿ ಮಾಡಿರಲಿಲ್ಲ. ಚುನಾವಣೆ ಎದುರಿಸಿದ್ದರು. ನೀವು ಎಲ್ಲಿ ಕುಳಿತು ಮೀಸಲಾತಿ ಮಾಡಿದ್ದಿರಿ ಎಂದು ನನಗೂ ಗೊತ್ತಿದೆ. ಅದನ್ನು ಬಿಚ್ಚಿಡಬೇಕಾ? ನಾವು ಆ ತರಹ ಮಾಡಿಲ್ಲ ಎಂದರು.

ಸಚಿವ ಮುನಿರತ್ನ ಮಾತನಾಡಿ, ಕಾಂಗ್ರೆಸ್ ಶಾಸಕರು ಯುಡಿ ಕಚೇರಿಯಲ್ಲಿ ಗೆ ಬಂದು ದಾಂಧಲೆ ಮಾಡಿದ್ದಾರೆ. ಯಾರು ಪ್ರತಿಭಟನೆ ಮಾಡಿದ್ದಾರೆ ಎಂಬುವುದನ್ನು ನೋಡಿ ದಾಂಧಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಅವರಿಗೆ ದೂರು ಕೊಡುತ್ತೇವೆ. ಶಾಸಕರು ಮಾತ್ರ ಬಂದಿದ್ದರೇ ಪರವಾಗಿಲ್ಲ, ಅವರ ಬೆಂಬಲಿಗರು ಬಂದಿದ್ದಾರೆ ಎಂದರು.

ಇದನ್ನೂ ಓದಿ | Amit shah in state | ಚುನಾವಣೆಗೆ ಸಿದ್ಧರಾಗಲು ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

Exit mobile version