Site icon Vistara News

MLA Satish Reddy: ಶಾಸಕ ಸತೀಶ್‌ ರೆಡ್ಡಿ ಕೊಲೆಗೆ ಸ್ಕೆಚ್‌: ಹೊಳಲ್ಕೆರೆಯಲ್ಲಿ ಮೂವರ ಸೆರೆ; ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ?

Sketch for MURDER OF MLA Satish Reddy three arrested in Holalkere How did the plan get leaked

ಶಾಸಕ ಸತೀಶ್‌ ರೆಡ್ಡಿ

ಬೆಂಗಳೂರು/ಚಿತ್ರದುರ್ಗ: ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ (MLA Satish Reddy) ಅವರ ಕೊಲೆಗೆ ಸ್ಕೆಚ್‌ ಹಾಕಿ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೊಮ್ಮನಹಳ್ಳಿ ಪೊಲೀಸರಿಂದ ಹೊಳಲ್ಕೆರೆ ಮೂಲದ ಮೂವರನ್ನು ಪೊಲೀಸರು ಬಂಧಿಸಿದ್ದು, ಅದರಲ್ಲಿ ಒಬ್ಬ ಬಾಲಕ ಎಂದು ತಿಳಿದುಬಂದಿದೆ. ಆದರೆ, ಈ ಕೊಲೆ ಸುಪಾರಿ ವಿಷಯ ಲೀಕ್‌ ಆಗಿದ್ದೇ ರೋಚಕ. ಈ ಹಿನ್ನೆಲೆಯಲ್ಲಿ ಸ್ವಲ್ಪದರಲ್ಲಿ ಶಾಸಕರೊಬ್ಬರ ಜೀವ ಉಳಿದಂತೆ ಆಗಿದೆ. ಈ ಕೊಲೆಗಾಗಿ ೨ ಕೋಟಿ ರೂಪಾಯಿ ಸುಪಾರಿ ಪಡೆದಿದ್ದ ವಿಲ್ಸನ್ ಗಾರ್ಡನ್ ನಾಗ ಹಲವು ದಿನಗಳಿಂದ ಫಾಲೋ ಮಾಡುತ್ತಿದ್ದ ಎಂಬ ವಿಷಯವೂ ಬಹಿರಂಗವಾಗಿದೆ. ಎಲ್ಲವನ್ನೂ ಪಕ್ಕಾ ಪ್ಲ್ಯಾನ್‌ ಪ್ರಕಾರವೇ ಮಾಡಿಕೊಂಡು ಹೋಗಲಾಗಿದ್ದರೂ ಒಂದು ಹಂತದಲ್ಲಿ ಈ ವಿಷಯ ಲೀಕ್‌ ಆಗಿದ್ದು, ಶಾಸಕರು ಬಚಾವ್‌ ಆಗಲು ಕಾರಣವಾಗಿದೆ ಎಂಬ ವಿಷಯ ತಿಳಿದುಬಂದಿದೆ.

ಶಾಸಕ ಸತೀಶ್‌ ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನಿಂದ ಎರಡು ಕೋಟಿ ರೂಪಾಯಿಗೆ ಸುಪಾರಿ ಪಡೆದಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳಲ್ಕೆರೆ ತಾಲೂಕಿನ ಉಗುಣೆಕಟ್ಟೆ ವಡ್ಡರಹಟ್ಟಿಯ ಮೂವರನ್ನು ಬಂಧಿಸಲಾಗಿದೆ. ಗಿರೀಶ್‌ ಮತ್ತು ಗಗನ್‌ ಹಾಗೂ ಇನ್ನೊಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಕಟ್ಟೆ ಪೊಲೀಸರಿಂದ ವಿಚಾರಣೆ‌ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಅಲ್ಲದೆ, ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ

ಸುಪಾರಿ ಹಿಂದೆ ರಾಜಕೀಯ ಕೈವಾಡ- ಸತೀಶ್ ರೆಡ್ಡಿ

ನನಗೆ ಮಂಗಳವಾರ (ಫೆ.೧೪) ಸಂಜೆ ಪೊಲೀಸರು ಈ ವಿಷಯವನ್ನು ತಿಳಿಸಿದರು. ಈಗ ಚುನಾವಣೆ ಇದ್ದು, ರಾಜಕೀಯ ಕಾರಣಗಳಿಂದಲೂ ಹತ್ಯೆಗೆ ಸ್ಕೆಚ್‌ ಹಾಕಿರಬಹುದು. ಇದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿದ್ದೇನೆ. ಭದ್ರತೆಯನ್ನು ಪಡೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ, ನಾನು ಭದ್ರತೆ ಬೇಡ ಎಂದು ಹೇಳಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ ಎಂದು ಶಾಸಕ ಸತೀಶ್‌ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಯಾವುದಕ್ಕೂ ಭಯ ಪಡುವುದಿಲ್ಲ. ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಈ ಈ ಪ್ರಕರಣದ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆರೋಪಿಗಳು ನನ್ನ ಚಲನವಲನದ ಮೇಲೆ ಗಮನ ಇಟ್ಟಿದ್ದರು ಎಂಬ ಮಾಹಿತಿ ನನಗೆ ಈಗಲೇ ಗೊತ್ತಾಗಿರುವುದು. ಅವರು ಎಲ್ಲೆಲ್ಲಿ ಓಡಾಡಿದ್ದಾರೆ? ಏ‌ನೇನು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನಾನು ಇದಕ್ಕೆಲ್ಲ ಹೆದರುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡುವುದಿಲ್ಲ. ಆದರೆ, ಈ ಸುಪಾರಿ ಹಿಂದೆ ರಾಜಕೀಯ ದುರುದ್ದೇಶವೇ ಇರುವುದಂತೂ ಹೌದು. ನಾನು ಯಾರಿಗೂ ದ್ರೋಹ ಮಾಡಿಲ್ಲ ಎಂದು ಸತೀಶ್‌ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

ಸ್ವಲ್ಪದರಲ್ಲೇ ಪಾರು?

2 ಕೋಟಿ ರೂಪಾಯಿಗೆ ಸುಪಾರಿ ಪಡೆದಿದ್ದ ರೌಡಿ ಗ್ಯಾಂಗ್ ದೊಡ್ಡ ಮಟ್ಟದ ಸ್ಕೆಚ್ ಹಾಕಿತ್ತು ಎನ್ನಲಾಗಿದೆ. ಆದರೆ, ಕೊಲೆ ಮಾಡಲು ಹಾಕಿದ್ದ ಸ್ಕೆಚ್‌ ಬಗ್ಗೆ ಶಾಸಕರು ಮತ್ತವರ ತಂಡಕ್ಕೆ ಮಾಹಿತಿ ದೊರೆತಿದ್ದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಶಾಸಕ ಸತೀಶ್‌ ರೆಡ್ಡಿ ಸ್ನೇಹಿತರೊಬ್ಬರಿಂದ ಪ್ರಾಣ ಉಳಿಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ‘ಪೊಲೀಸರು ಸೊಂಟ ಮುರಿಯುತ್ತಾರೆ ನೋಡು‘; ಪತ್ನಿಯ ವೇತನ ವಿಳಂಬದ ಬಗ್ಗೆ ಪ್ರಶ್ನಿಸಿದವನಿಗೆ ಸಚಿವರ ಬೆದರಿಕೆ

ಕೊಲೆ ಮಾಡುವ ಬಗ್ಗೆ ಭಾರಿ ಪ್ಲ್ಯಾನ್‌ ಮಾಡಿದ್ದ ಹಂತಕರ ಗ್ಯಾಂಗ್‌ ಪೋಟೊ ಸಮೇತ ಅವರು ಮಾಹಿತಿಯನ್ನು ರವಾನೆ ಮಾಡಿದ್ದರು ಎನ್ನಲಾಗಿದೆ. ತಕ್ಷಣವೇ ಸತೀಶ್‌ ರೆಡ್ಡಿಯವರ ಆಪ್ತ ಸಹಾಯಕ ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರಿನ ಕುಖ್ಯಾತ ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗನ ತಂಡದವರಿಂದ ಕೊಲೆಗೆ ಸ್ಕೆಚ್‌ ನಡೆದಿತ್ತು. ಈತನ ತಂಡವು 2 ಕೋಟಿ ರೂಪಾಯಿಗೆ ಸುಪಾರಿಯನ್ನು ಪಡೆದುಕೊಂಡಿತ್ತು.

ಸದ್ಯದಲ್ಲೇ ದಾಳಿ ನಡೆಯುವುದಿತ್ತು

ಎಂಎಲ್ಎ ಸತೀಶ್‌ ರೆಡ್ಡಿ ಅವರ ಚಲನವಲನಗಳ ಗಮನಿಸುತ್ತಿದ್ದ ಆರೋಪಿಗಳು, ಸದ್ಯದಲ್ಲೇ ದಾಳಿ ಮಾಡಲು ಸಂಚು ರೂಪಿಸಿದ್ದರು. ಸ್ವಲ್ಪ ದಿನದಲ್ಲೇ ದಾಳಿ ನಡೆಯಬೇಕು ಎಂಬ ಸಮಯದಲ್ಲಿ ನಾಗನ ಗ್ಯಾಂಗ್‌ನಿಂದಲೇ ವಿಷಯ ಲೀಕ್ ಆಗಿದೆ. ರೌಡಿಗಳ ಈ ಪ್ಲ್ಯಾನ್‌ ಬಗ್ಗೆ ಚಿತ್ರದುರ್ಗದಲ್ಲಿ ಗೊತ್ತಾಗಿದೆ. ನಾಗನ ಗ್ಯಾಂಗ್‌ನಲ್ಲಿದ್ದ ಹೊಳಲ್ಕೆರೆ ತಾಲೂಕಿನ ಆಕಾಶ್ ಎಂಬಾತ ಎಂಎಲ್ಎ ಬೆಂಬಲಿಗ ಚಂದ್ರು ಎಂಬಾತನಿಗೆ ತಿಳಿಸಿದ್ದ. ಚಂದ್ರು ಈ ಹೇಳಿಕೆಯನ್ನು ರೆಕಾರ್ಡ್‌ ಮಾಡಿಕೊಂಡಿದ್ದಲ್ಲದೆ, ರೌಡಿ ಫೋಟೊ ಸಮೇತ ಮಾಹಿತಿಯನ್ನು ನೀಡಿದ್ದ. ಈ ದಾಖಲೆಗಳನ್ನು ಇಟ್ಟುಕೊಂಡ ಹರೀಶ್‌ ಬಾಬು ಅವರು ಬೊಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: Interest rate : ಜನವರಿಯಲ್ಲಿ ಹಣದುಬ್ಬರ ಹೆಚ್ಚಳ ಎಫೆಕ್ಟ್‌, ಏಪ್ರಿಲ್‌ನಲ್ಲಿ ಆರ್‌ಬಿಐನಿಂದ ಮತ್ತೆ 0.25% ಬಡ್ಡಿ ದರ ಏರಿಕೆ ಸಂಭವ

ತಮಿಳುನಾಡಿನಲ್ಲಿ ನಾಗ?

ಸದ್ಯ ಮೂವರು ಆರೋಪಿಗಳನ್ನು ಚಿತ್ರದುರ್ಗದಲ್ಲಿ ಬಂಧಿಸಿರುವ ಪೊಲೀಸರು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಬೊಮ್ಮನಹಳ್ಳಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ಶೋಧ ಕಾರ್ಯದಲ್ಲಿ ನಿರತವಾಗಿದೆ. ರೌಡಿ ವಿಲ್ಸನ್ ಗಾರ್ಡನ್ ನಾಗ ಮೂರನೇ ವ್ಯಕ್ತಿಯಿಂದ 2 ಕೋಟಿ ರೂಪಾಯಿಗೆ ಡೀಲ್ ಪಡೆದುಕೊಂಡಿದ್ದ ಎನ್ನಲಾಗಿದ್ದು, ಮೂರನೇ ವ್ಯಕ್ತಿ ಯಾರು ಎಂಬ ಬಗ್ಗೆ ಈಗ ತನಿಖೆ ಚುರುಕುಗೊಂಡಿದೆ. ಅಲ್ಲದೆ, ಸದ್ಯ ವಿಲ್ಸನ್ ಗಾರ್ಡನ್ ನಾಗ ತಮಿಳುನಾಡಿನಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಅಲ್ಲಿಗೂ ಪೊಲೀಸರು ತೆರಳಿದ್ದಾರೆ ಎನ್ನಲಾಗಿದೆ.

Exit mobile version