Site icon Vistara News

ರಾಗಿ ಕಳವು ವಿವಾದ | ಆಣೆ ಪ್ರಮಾಣ ಇಲ್ಲ, ಧರ್ಮಸ್ಥಳದಲ್ಲಿ ಸತ್ಯ ನಿವೇದನೆ ಮಾಡಿದ ಶಾಸಕ ಶಿವಲಿಂಗೇಗೌಡ

shivalinge gowda in Dharmasthala

ಧರ್ಮಸ್ಥಳ: ʻʻರಾಗಿ ಕಳ್ಳ‌ʼನೆಂಬ ಆಪಾದನೆಯಿಂದ ಬೇಸತ್ತಿರುವ ಅರಸೀಕರೆಯ ಜೆಡಿಎಸ್‌ ಶಾಸಕ ಶಿವಲಿಂಗೇ ಗೌಡ ಅವರು ಸೋಮವಾರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮುಂದೆ ಸತ್ಯನಿವೇದನೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಮುಂಜಾನೆ ಧರ್ಮಸ್ಥಳಕ್ಕೆ ಆಗಮಿಸಿದ ಅವರು ನೇತ್ರಾವತಿ ನದಿಗಿಳಿದು, ಈಜಾಡಿ ಸ್ನಾನ ಮಾಡಿ ಬಳಿಕ ದೇವರ ದರ್ಶನ ಪಡೆದರು. ಬಳಿಕ ಧರ್ಮಾಧಿಕಾರಿಗಳಾದ ಶ್ರೀ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಶಿವಲಿಂಗೇ ಗೌಡ ಅವರು ಪ್ರಸಕ್ತ ಅರಸೀಕೆರೆಯ ಜೆಡಿಎಸ್‌ ಶಾಸಕ. ಆದರೆ, ಜೆಡಿಎಸ್‌ ನಾಯಕರ ಜತೆಗೆ ಅವರ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ. ಈ ನಡುವೆ, ಕ್ಷೇತ್ರದಲ್ಲಿ ಬಿಜೆಪಿ ಅವರ ಮೇಲೆ ಮುಗಿಬಿದ್ದಿದೆ. ಈ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಎನ್‌.ಆರ್‌. ಸಂತೋಷ್‌ ಅವರು ಭಾರಿ ಪ್ರತಿಭಟನೆಯನ್ನೇ ನಡೆಸಿದ್ದಾರೆ. ಈ ನಡುವೆ, ಬಿಜೆಪಿ ವಕ್ತಾರರಾಗಿರುವ ಎನ್‌. ರವಿಕುಮಾರ್‌ ಅವರು ಶಿವಲಿಂಗೇ ಗೌಡರನ್ನು ರಾಗಿ ಕಳ್ಳ ಎಂದು ಕರೆದಿದ್ದಾರೆ ಎನ್ನಲಾಗಿದೆ. ʻನಾನು ರಾಗಿ ಕದ್ದಿಲ್ಲʼ ಎಂದು ಹೇಳಿಕೊಳ್ಳುತ್ತಿರುವ ಶಿವಲಿಂಗೇ ಗೌಡರು ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡೋಣ ಎಂದಿದ್ದರು. ಆದರೆ, ರವಿಕುಮಾರ್‌ ಅವರು ಈ ಆಣೆಪ್ರಮಾಣಕ್ಕೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ.

ಈ ನಡುವೆ, ಶಿವಲಿಂಗೇಗೌಡ ಅವರು ಒಬ್ಬರೇ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಮಾಡಿದ್ದಾರೆ. ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವುದು ಒಂದು ಅತ್ಯಂತ ಭಯ ಭಕ್ತಿಯ ಪ್ರಕ್ರಿಯೆಯಾಗಿದ್ದು, ಅತ್ಯಂತ ಗಂಭೀರ ಸನ್ನಿವೇಶಗಳಲ್ಲಿ ಮಾತ್ರ ಮಾಡಲಾಗುತ್ತದೆ. ಆಣೆ ಪ್ರಮಾಣ ಮಾಡಬೇಕು ಎಂದರೆ ಎರಡೂ ಪಕ್ಷದವರು ಒಂದೇ ದಿನ ಬರಬೇಕು. ಧರ್ಮಾಧಿಕಾರಿಗಳಲ್ಲಿ ಮೊದಲೇ ಅನುಮತಿ ಪಡೆದಿರಬೇಕು. ಆದರೆ, ಇಲ್ಲಿ ಅಂಥ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಶಿವಲಿಂಗೇ ಗೌಡ ಅವರು ಧರ್ಮಾಧಿಕಾರಿಗಳನ್ನು ಭೇಟಿ ಮಾಡಿದರೂ ಆಣೆ ಪ್ರಮಾಣದ ವಿಚಾರವಾಗಲಿ, ತಮ್ಮ ಮೇಲೆ ಬಂದಿರುವ ಆರೋಪದ ವಿಚಾರವಾಗಲೀ ಚರ್ಚೆ ಮಾಡಿಲ್ಲ.

ಶಿವಲಿಂಗೇಗೌಡರು ಹೇಳಿದ್ದೇನು?
ʻʻನಾನು ರಾಗಿ ಕಳ್ಳ ಅಂದಿದ್ದರು, ನಾನು ಏನೂ ಕದ್ದಿಲ್ಲ ಅಂತ ದೇವರ ಮುಂದೆ ಸತ್ಯ ನಿವೇದನೆ ಮಾಡಿದ್ದೇನೆ. ನನ್ನ ಮೇಲೆ ಈ ಆರೋಪ ಯಾಕೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ, ನಾನು ರೈತರಿಗೆ ರಾಗಿ ಕೊಡಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ರವಿ ಕುಮಾರ್‌ ಅವರು ಯಾಕೆ ಈ ಆರೋಪ ಮಾಡಿದರೆಂದು ನನಗೆ ಗೊತ್ತಿಲ್ಲ. ಅವರನ್ನೂ ಧರ್ಮಸ್ಥಳಕ್ಕೆ ಬನ್ನಿ ಎಂದು ಕರೆದಿದ್ದೆ. ಅವರು ಬಂದಿಲ್ಲ. ಹೀಗಾಗಿ ನಾನೇ ಬಂದು ಸತ್ಯ ಮಾಡಿದ್ದೇನೆ. ಅವರು ಬೇಕಾದರೆ ಬರಲಿ, ಹೆಗ್ಗಡೆಯವರನ್ನು ಭೇಟಿ ಮಾಡಿದ್ದೇನೆ. ಆದರೆ, ಇದರ ಬಗ್ಗೆ ಚರ್ಚೆ ಮಾಡಿಲ್ಲʼʼ ಎಂದು ದೇವರ ದರ್ಶನ ಮಾಡಿದ ಬಳಿಕ ಶಿವಲಿಂಗೇ ಗೌಡರು ಹೇಳಿದರು.

ʻʻನನ್ನ ಕ್ಷೇತ್ರದಲ್ಲಿ 15 ವರ್ಷ ನೆಮ್ಮದಿ ಇತ್ತು, ಆದರೆ ಈಗ ಎಲ್ಲವೂ ಆರಂಭವಾಗಿದೆ. ನಾನು ‌ಜೆಡಿಎಸ್ ಜೊತೆ ಕಳೆದ ಐದಾರು ತಿಂಗಳಿನಿಂದ ಅಂತರ ಕಾಯ್ದುಕೊಂಡಿದ್ದೇನೆ. ಅದಕ್ಕೆ ಕಾರಣವೂ ಇದೆ. ವರಿಷ್ಠರ ಮೇಲೆ ಅಸಮಾಧಾನ ಇರುವುದರಿಂದ ಸ್ವಲ್ಪ ಅಂತರ ಕಾದುಕೊಂಡಿದ್ದೇನೆʼʼ ಎಂದ ಶಿವಲಿಂಗೇಗೌಡರು, ʻʻನಾನು ಇಲ್ಲಿಗೆ ಬಂದಿರೋ ವಿಚಾರವನ್ನು ವರಿಷ್ಠರ ಗಮನಕ್ಕೂ ತಂದಿಲ್ಲ. ಆದರೆ, ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ ಇಲ್ಲಿಗೆ ಬಂದಿದ್ದೇನೆʼʼ ಎಂದರು.

ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ನಾನಕ್ಕೆ ಬಂದ ಶಿವಲಿಂಗೇಗೌಡರು

ʻʻಮಂಜುನಾಥನ ಮೇಲೆ ಆಣೆ ಲೋಕರೂಢಿ ಮಾತು. ಸಾಕ್ಷಿ ಆಧಾರ ಇಲ್ಲದ ಆರೋಪ ಮಾಡಿದಾಗ ಆಣೆಗೆ ಬರೋದು ಲೋಕಾರೂಢಿ. ಇದರಲ್ಲಿ ಮಂಜುನಾಥ ಸ್ವಾಮಿ ಎಳೆದು ತರೋ ಮಾತು ಇಲ್ಲʼʼ ಎಂದು ಶಿವಲಿಂಗೇಗೌಡರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ | Shivalinge Gowda | ನಾನು ರಾಗಿ ಕಳ್ಳನಲ್ಲ, ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವೆ; ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ

Exit mobile version