ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳ ಅಂತರದಲ್ಲಿ ಪ್ರವೀಣ್ ನೆಟ್ಟಾರು (Praveen Nettaru) ಸೇರಿದಂತೆ ಮೂವರ ಕೊಲೆಗಳು ನಡೆದಿವೆ. ಮೂರೂ ಕೊಲೆಗಳು ಪ್ರತೀಕಾರದ ಹಿನ್ನೆಲೆಯಲ್ಲಿ ನಡೆದಿರಬಹುದು ಅನ್ನುವ ಸಂಶಯವೂ ಇದೆ. ಈ ಕಾರಣದಿಂದಾಗಿ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣವಿದ್ದು, ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತೆ ಇದೆ. ಹೀಗಾಗಿ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದ್ದು, ಜಿಲ್ಲಾಡಳಿತ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಜಿಲ್ಲೆಯಲ್ಲೇ ಇದ್ದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ನಾಪತ್ತೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರ್ಕಳ ಶಾಸಕ, ಇಂಧನ ಸಚಿವ ಸುನೀಲ್ ಕುಮಾರ್ ಜಿಲ್ಲೆಯತ್ತ ಮುಖ ಮಾಡಿಲ್ಲ ಎಂಬುದು ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಕೊಲೆ ನಡೆದ ಮರು ದಿನ ಸಚಿವ ಸುನಿಲ್ ಕುಮಾರ್ ಬೆಳ್ಳಾರೆಗೆ ಭೇಟಿ ನೀಡಿದ್ದರು. ತಡವಾಗಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಘೇರಾವ್ ಹಾಕಿದ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಜತೆ ಪ್ರವೀಣ್ ಮನೆಗೆ ಭೇಟಿ ನೀಡಿದ್ದರು. ಆದರೆ, ಪ್ರವೀಣ್ ಕೊಲೆಯಾದ ಎರಡೇ ದಿನಕ್ಕೆ ಸುರತ್ಕಲ್‌ನಲ್ಲಿ ಫಾಸಿಲ್ ಎಂಬ ಯುವಕನ ಕೊಲೆ ನಡೆದಿದೆ. ಈ ಕಾರಣದಿಂದ ಜಿಲ್ಲೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.
ಇದನ್ನು ಓದಿ| Praveen Nettaru | ಪ್ರವೀಣ್ ಹತ್ಯೆಗೆ ವ್ಯಾಪಕ ಆಕ್ರೋಶ; ದಕ್ಷಿಣ ಕನ್ನಡದ ವಿವಿಧೆಡೆ ಬಂದ್
ಪ್ರವೀಣ್ ಕೊಲೆಯಾದ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ನೀಡಿದಂತಹ ಉಸ್ತುವಾರಿ ಸಚಿವರು ಫಾಸಿಲ್ ಕೊಲೆಯಾದಾಗ ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಕೇಳಿ ಬಂದಿತ್ತು. ಸರ್ಕಾರದಲ್ಲಿ ಸಚಿವರಾದ ಬಳಿಕ ಎಲ್ಲರನ್ನೂ ಪಕ್ಷಾತೀತವಾಗಿ ನೋಡಬೇಕಾದ ಸಚಿವರು ಬಿಜೆಪಿ ಕಾರ್ಯಕರ್ತರ ಸಾವಿಗೆ ಮಾತ್ರ ಸಾಂತ್ವನ ಹೇಳಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಪರಿಹಾರದ ವಿಚಾರದಲ್ಲೂ ಸರ್ಕಾರ ಇಬ್ಬಗೆ ನೀತಿಯನ್ನು ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.
ಸರ್ಕಾರ ಹಾಗೂ ಸಚಿವರ ಈ ನಡೆ ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಜವಾಬ್ದಾರಿ ಇರುವ ಸರ್ಕಾರದ ಪ್ರತಿನಿಧಿಯಾಗಿ ಉಸ್ತುವಾರಿ ಸಚಿವರಾಗಿ ಫಾಸಿಲ್ ಮನೆಗೆ ಸಚಿವ ಸುನಿಲ್ ಕುಮಾರ್ ಭೇಟಿ ನೀಡಬೇಕಿತ್ತು ಎನ್ನುವ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಶನಿವಾರ (ಜು.30) ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಶಾಂತಿ ಸಭೆಗೂ ಸಚಿವರು ಗೈರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನು ಓದಿ | ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು NIAಗೆ ವಹಿಸಿದ ರಾಜ್ಯ ಸರ್ಕಾರ: ಸಿಎಂ ಬೊಮ್ಮಾಯಿ ಘೋಷಣೆ