Site icon Vistara News

MLA training: ಇಂದಿನಿಂದ ನೂತನ ಶಾಸಕರಿಗೆ ತರಬೇತಿ ಶಿಬಿರ; ಕರಜಗಿ, ರವಿಶಂಕರ್‌ ಗುರೂಜಿಗೆ ಖೊಕ್

kshemavana nelamangala

ಬೆಂಗಳೂರು: 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ತರಬೇತಿ ಶಿಬಿರ ಇಂದಿನಿಂದ ನಡೆಯಲಿದೆ. ನೆಲಮಂಗಲ ಬಳಿಯ ಎಸ್‌ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ʼಕ್ಷೇಮವನ’ದಲ್ಲಿ ಶಿಬಿರ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ಸ್ಪೀಕರ್ ಯುಟಿ ಖಾದರ್ (UT Khader) ನೇತೃತ್ವದಲ್ಲಿ ನಡೆಯಲಿರುವ ತರಬೇತಿ ಶಿಬಿರ ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಯಾಗಲಿದೆ. ಸಿಎಂ ಸಿದ್ದರಾಮಯ್ಯ (Siddaramaiah), ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಹೆಚ್.ಕೆ ಪಾಟೀಲ್, ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಜಮೀರ್ ಅಹ್ಮದ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಮೂರು ದಿನಗಳ ಕಾಲ ಸದಸ್ಯರಿಗೆ ಸಂಸದೀಯ ಮೌಲ್ಯಗಳು, ಸದನದ ಮಹತ್ವ, ಸದನದ ಪ್ರಕ್ರಿಯೆ, ರಾಜ್ಯಪಾಲರ ಭಾಷಣ, ಶಾಸಕರ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ತರಬೇತಿ ನಡೆಯಲಿದೆ. ಸಾಮಾಜಿಕ, ಧಾರ್ಮಿಕ, ರಾಜಕೀಯ ತಜ್ಞರಿಂದ ನೂತನ ಸದಸ್ಯರಿಗೆ ಪಾಠ ನಡೆಯಲಿದೆ. ಪ್ರತಿ ದಿನದ ಸಂಜೆ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ.

ತೀವ್ರ ವಿರೋಧದಿಂದಾಗಿ ರವಿಶಂಕರ್ ಗುರೂಜಿ (sri sri Ravishankar), ಗುರುರಾಜ ಕರ್ಜಗಿ ಉಪನ್ಯಾಸ‌ ಕೈಬಿಡಲಾಗಿದೆ. ಪ್ರಗತಿಪರ ವಲಯ ಹಾಗೂ ‌ಕಾಂಗ್ರೆಸ್‌ನ ಕೆಲವು ಹಿರಿಯರಿಂದ ಇದಕ್ಕೆ ತೀವ್ರವಾದ ವಿರೋಧ ಬಂದಿತ್ತು. ಅಲ್ಲದೆ ಸಿಎಂ ಸಿದ್ದರಾಮಯ್ಯ ಸಲಹೆ ಮೇರೆಗೆ ಗೂರೂಜಿ, ಕರ್ಜಗಿ ಹೆಸರುಗಳನ್ನು ಸ್ಪೀಕರ್ ಕೈಬಿಟ್ಟಿದ್ದಾರೆ.

ಉಳಿದಂತೆ ದರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ (Dr.D. Veerendra Heggade), ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ ವೀಣಾ, ಬಿ.ಕೆ ಭುವನೇಶ್ವರಿ,‌‌ ಜಮಾತೆ ಇಸ್ಲಾಮ್ ಮುಖ್ಯಸ್ಥ ಮಹಮ್ಮದ್ ಕುಂಞ ಉಪನ್ಯಾಸ ನಡೆಯಲಿವೆ.

ಸಾಮರಸ್ಯ ಸಮಾಜ, ಅಭಿವೃದ್ಧಿ ಕರ್ನಾಟಕ, ಬಲಿಷ್ಠ ನಿರ್ಮಾಣದಲ್ಲಿ ಶಾಸಕರ ಪಾತ್ರದ ಬಗ್ಗೆ ಡಾ. ಡಿ. ವೀರೇಂದ್ರ ಹೆಗ್ಗಡೆ, ಜನಪ್ರತಿನಿಧಿ ಹಾಗೂ ಜನರ ಮಧ್ಯೆ ಸಂಬಂಧ/ ಬಾಂಧವ್ಯ ವೃದ್ದಿಗೊಳಿಸುವುದರ ಬಗ್ಗೆ ಬ್ರಹ್ಮಕುಮಾರಿ ಸಂಸ್ಥೆಯ ಬಿ.ಕೆ ವೀಣಾ, ಭುವನೇಶ್ವರಿ ಅವರಿಂದ ಹಿತವಚನಗಳಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: MLA training: ಶಾಸಕರ ತರಬೇತಿಗೆ ಗಣ್ಯರ ಆಹ್ವಾನದ ಬಗ್ಗೆ ಆಕ್ಷೇಪ; ತಿರುಗೇಟು ನೀಡಿದ ಸ್ಪೀಕರ್‌ ಖಾದರ್

Exit mobile version